ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: 2,944 ಹೆಕ್ಟೇರ್ ಆಲೂ ಬೆಳೆ ಹಾನಿ

ಪರಿಹಾರ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ ತೋಟಕಗಾರಿಕೆ ಇಲಾಖೆ
Last Updated 20 ಜುಲೈ 2020, 19:30 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಆಲೂಗಡ್ಡೆ ಈ ಬಾರಿ ಬೆಳೆಗಾರರ ಕೈ ಹಿಡಿಯಲಿಲ್ಲ. ಅಂದಾಜು 2,944 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ಆಲೂಗಡ್ಡೆ ಭೂಮಿಯಲ್ಲೇ ಕೊಳೆತು ಹಾನಿಯಾಗಿದೆ.

ಆಲೂಗಡ್ಡೆ ಭೂಮಿಯಲ್ಲೇ ಕೊಳೆಯುತ್ತಿರುವುದಕ್ಕೆ ಅಧಿಕ ತೇವಾಂಶ, ಎರಿವಿನಿಯಾ ಬ್ಯಾಕ್ಟೀರಿಯಾ ಹಾಗೂ ಹುಳು ಬಾಧೆಯಿಂದ ಕಾರಣ ಎಂಬುದನ್ನು ವಿಜ್ಞಾನಿಗಳು ಪತ್ತೆ ಹಚ್ಚಿ, ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದರು. ಸೋಮನಹಳ್ಳಿ ಕಾವಲು ತೋಟಗಾರಿಕೆ ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರದ ಹಿರಿಯ ವಿಜ್ಞಾನಿ ಅಮೃತ ನಂಜುಂಡೇಶ್ವರ, ವಿಜ್ಞಾನಿ ಪ್ರಸಾದ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾಗಿದ್ದ ಮಂಜುನಾಥ್‌, ಮೈಸೂರು ವಿಭಾಗದ ಜಂಟಿ ನಿರ್ದೇಶಕ ನಾಗರಾಜು ಅವರ ತಂಡ ಬೇಲೂರು, ಅರಕಲಗೂಡು, ಹೊಳೆನರಸೀಪುರ, ಹಾಸನ ತಾಲ್ಲೂಕಿನ ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.

ಕಡಿಮೆ ಬೆಲೆ, ಅಂಗಮಾರಿ ರೋಗದಿಂದ ತತ್ತರಿಸಿದ್ದ ಬೆಳೆಗಾರರಿಗೆ ಆಲೂಗಡ್ಡೆ ಬೆಳೆ ಹಾನಿಯಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಪ್ರತಿ ಹೆಕ್ಟೇರ್‌ಗೆ ₹50 ಸಾವಿರ ಪರಿಹಾರ ನೀಡುವಂತೆ ಕೋರಿ ಸರ್ಕಾರಕ್ಕೆ ತೋಟಗಾರಿಕೆ ಇಲಾಖೆ ಪ್ರಸ್ತಾವ ಸಲ್ಲಿಸಿದೆ.

ಆರಂಭದಲ್ಲಿ ಉತ್ತಮ ಮಳೆಯಾದ ಕಾರಣ ಲಾಕ್‌ಡೌನ್‌ ನಡುವೆಯೂ ರೈತರು ಆಲೂ ಬಿತ್ತನೆ ಮಾಡಿದರು. ಕಳೆದ ವರ್ಷ ಹತ್ತು ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿತ್ತು. ಈ ಬಾರಿ ಹದಿನೈದು ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಇತ್ತು. ಆದರೆ, 8,337 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆ ಮಾಡಲಾಗಿತ್ತು. ಗುಣಮಟ್ಟದ ಆಲೂ ಕ್ವಿಂಟಲ್‌ ₹ 2,250, ದಪ್ಪ ಗಾತ್ರದ ಆಲೂ ಕ್ವಿಂಟಲ್‌ಗೆ ₹ 2,150 ದರಕ್ಕೆ ಮಾರಾಟ ಮಾಡಲಾಯಿತು.

ಹಾಸನ ತಾಲ್ಲೂಕಿನಲ್ಲಿ 1118 ಹೆಕ್ಟೇರ್‌, ಅರಕಲಗೂಡು 457ಹೆಕ್ಟೇರ್‌ ಹಾಗೂ ಅರಸೀಕೆರೆ ತಾಲ್ಲೂಕಿನಲ್ಲಿ 467
ಹೆಕ್ಟೇರ್‌ನಲ್ಲಿ ಹೆಚ್ಚು ಬೆಳೆ ಹಾನಿಯಾಗಿದೆ. ಜಿಲ್ಲೆಯಲ್ಲಿ ಆಲೂಗಡ್ಡೆ ಬಿತ್ತನೆ ಮಾಡಿ 60–65 ದಿನಗಳು ಕಳೆದಿವೆ. ಕೆಲ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆ ಉತ್ತಮವಾಗಿದೆ. ಈಗ ಹೂವು ಬಿಡುವ ಹಾಗೂ ಗಡ್ಡೆಕಟ್ಟುವ ಹಂತಕ್ಕೆ ಬಂದಿದ್ದು, ರೈತರಲ್ಲಿ ಭರವಸೆ ಮೂಡಿಸಿದೆ.

‘ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ತೋಟಗಾರಿಕಾ ಸಚಿವ ನಾರಾಯಾಣಗೌಡ ಅವರು ಅಧಿಕಾರಿಗಳ ಸಭೆ ನಡೆಸಿ, ಬೆಳೆ ಹಾನಿ ಮಾಹಿತಿ ಪಡೆದುಕೊಂಡಿದ್ದಾರೆ. ಅಧಿಕ ತೇವಾಂಶದಿಂದ ಈ ಬಾರಿ ಬಿತ್ತನೆ ಆಲೂಗಡ್ಡೆ ಭೂಮಿಯಲ್ಲಿಯೇ ಕೊಳೆತಿದೆ. ಪರಿಹಾರ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಯೋಗೇಶ್ ತಿಳಿಸಿದರು.

‘ಎಕರೆ ಆಲೂಗಡ್ಡೆ ಬೆಳೆಯಲು ಬಿತ್ತನೆ ಬೀಜ, ಕೊಟ್ಟಿಗೆ ಗೊಬ್ಬರ, ರಾಸಾಯನಿಕ ಗೊಬ್ಬರ, ಭೂಮಿ ಉಳುಮೆ, ಕೂಲಿ ಸೇರಿ ಅಂದಾಜು ₹ 25 ಸಾವಿರ ಖರ್ಚು ಬರಲಿದೆ. ಜಿಲ್ಲಾಡಳಿತ ಕಳಪೆ ಗುಣಮಟ್ಟದ ಬಿತ್ತನೆ ಆಲೂ ನೀಡಿ ಸಂಕಷ್ಟಕ್ಕೆ ಸಿಲುಕಿಸಿದೆ. ಹಾಗಾಗಿ ಬೆಳೆ ನಷ್ಷಕ್ಕೆ ಪರಿಹಾರ ನೀಡಬೇಕು’ ಎಂದು ಬೈಲಹಳ್ಳಿ ರಾಮಣ್ಣ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT