ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಟ್ಟ ಹತ್ತಲು ಆಗದವರಿಗೆ ಬಸದಿಯಲ್ಲೇ ದರ್ಶನ

ಭಂಡಾರ ಬಸದಿ ಪ್ರಾಂಗಣದಲ್ಲಿ 12 ಅಡಿ ಎತ್ತರದ ಗೊಮ್ಮಟ ಮೂರ್ತಿ ಪ್ರತಿಷ್ಠಾಪನೆ
Published 30 ಮಾರ್ಚ್ 2024, 8:46 IST
Last Updated 30 ಮಾರ್ಚ್ 2024, 8:46 IST
ಅಕ್ಷರ ಗಾತ್ರ

ಶ್ರವಣಬೆಳಗೊಳ: ವಿಂಧ್ಯಗಿರಿಯ ದೊಡ್ಡಬೆಟ್ಟದ ತುತ್ತ ತುದಿಯ ರಾರಾಜಿಸುತ್ತಾ ವಿರಾಜಮಾನರಾಗಿರುವ ವೈರಾಗ್ಯ ಮೂರ್ತಿ ಬಾಹುಬಲಿ ಸ್ವಾಮಿಯ ದರ್ಶನ ಪಡೆಯುವುದು ಪ್ರತಿಯೊಬ್ಬರ ಆಶಯ. ಆದರೆ, ಬೆಟ್ಟ ಹತ್ತಲು ಆಗದೇ ಇರುವ ಪುಟ್ಟ ಮಕ್ಕಳು, ವೃದ್ಧರು, ಅಶಕ್ತರ ಅನುಕೂಲಕ್ಕಾಗಿ ಜೈನ ಮಠದ ಬಳಿ ಇರುವ ಭಂಡಾರ ಬಸದಿಯ ಪ್ರಾಂಗಣದಲ್ಲಿ ಗೊಮ್ಮಟ ಮೂರ್ತಿಯನ್ನು ನಿಲ್ಲಿಸಲಾಗಿದೆ.

ಶ್ರವಣಬೆಳಗೊಳದಲ್ಲಿ 58.8 ಅಡಿ ಎತ್ತರದ ಬಾಹುಬಲಿಯ ಏಕಶಿಲಾ ಮೂರ್ತಿಯು ಉತ್ತರಾಭಿಮುಖವಾಗಿ ನಿಂತಿದ್ದು, ಪ್ರವಾಸಿಗರನ್ನು ಸೆಳೆಯುತ್ತಿದೆ. ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕವು ಅಂದಿನ ರಾಜ, ಮಹಾರಾಜರ ಕಾಲದಿಂದಲೂ ಹಿಡಿದು, ಇಂದಿನ ಪ್ರಜಾಪ್ರಭುತ್ವ ಸರ್ಕಾರಗಳು ಉತ್ಸವವಾಗಿ ಆಚರಿಸುತ್ತ ಬಂದಿವೆ.

ಏಕ ಶಿಲೆಯಲ್ಲಿ ಕೆತ್ತಲಾಗಿರುವ ವಿಸ್ಮಯಕಾರಿ ಬಾಹುಬಲಿ ಮೂರ್ತಿಯು ಗಂಗರಸರ ದಂಡನಾಯಕ ಚಾವುಂಡರಾಯನ ಅದ್ವಿತೀಯ ಕೊಡುಗೆ. ವಿಂಧ್ಯಗಿರಿಯ ಪರ್ವತದಲ್ಲಿ ಸೌಂದರ್ಯದ ಖನಿಯಾಗಿ ವಿಶ್ವಕ್ಕೆ ಅಹಿಂಸಾ ಸಂದೇಶ ಸಾರುತ್ತಾ ಶಾಂತುದೂತನಾಗಿ ನಿಂತಿದ್ದಾನೆ.

630 ಮೆಟ್ಟಿಲುಗಳನ್ನು ಹತ್ತಲಿಕ್ಕೆ ಆಗದೇ ನಿರಾಸೆಯೊಂದಿಗೆ ಭಕ್ತರು, ಪ್ರವಾಸಿಗರು ಹಿಂತಿರುಗಿ ಹೋಗಬಾರದೆಂದು ಪರಿಗಣಿಸಿ, ಶ್ರವಣಬೆಳಗೊಳಕ್ಕೆ ಬರುವ ಪ್ರತಿಯೊಬ್ಬರಿಗೂ ಬಾಹುಬಲಿಯ ದರ್ಶನ ಭಾಗ್ಯ ದೊರೆಯಬೇಕು ಎಂಬ ಸದುದ್ದೇಶದಿಂದ ಹಿಂದಿನ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಬೆಳಗೊಳದ ಮೂರ್ತಿ ಇರುವ ಹಾಗೆಯೇ 12 ಅಡಿಯ ವಿಗ್ರಹವನ್ನು ಶ್ರೀಜೈನ ಮಠದ ಬಳಿಯ ಭಂಡಾರ ಬಸದಿಯಲ್ಲಿ ಪ್ರತಿಷ್ಠಾಪಿಸಲು ಉದ್ದೇಶಿಸಿದ್ದರು. ಅದರಂತೆ ಈಗಿನ ಪೀಠಾಧಿಪತಿ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಕಾರ್ಯೋನ್ಮುಖರಾಗಿದ್ದಾರೆ.

ಈ ಶಿಲ್ಪವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೊಯಿರಾ ಎಂಬ ಗ್ರಾಮದಿಂದ ಕೆತ್ತಿಸಿ ತರಲಾಗಿದ್ದು, 2 ಅಡಿಗಳಷ್ಟು ಎತ್ತರದ ಕಮಲ ಪೀಠದ ಮೇಲೆ 10 ಅಡಿ 1 ಇಂಚು ಎತ್ತರದ್ದಾಗಿದೆ. ಒಟ್ಟಾರೆ 12 ಅಡಿ ಎತ್ತರವಿರುವ ಈ ಮೂರ್ತಿಯು ಬೆಳಗೊಳದ ಬಾಹುಬಲಿಯನ್ನೇ ಹೋಲುವಂತಿದೆ ಎಂಬುದು ಭಕ್ತರ ಅಭಿಪ್ರಾಯವಾಗಿದೆ.

ರಾಮನಗರ ಜಿಲ್ಲೆಯ ಬಿಡದಿಯ ಅಶೋಕ ಗುಡಿಗಾರ, ಗೌತಮ ಕುಮಾರ ಮೂರ್ತಿ ಈ ವಿಗ್ರಹವನ್ನು ಕೆತ್ತಿದ್ದು, ಬೆಂಗಳೂರು ಮಹಾವೀರ ಪ್ರಸಾದ್ ಜೈನ, ಮೂರ್ತಿಯ ದಾನಿಗಳಾಗಿದ್ದಾರೆ. ಬೆಟ್ಟ ಹತ್ತಲಿಕ್ಕೆ ಆಗದವರಿಗೆ ಕೆಳಗಡೆಯೇ ದರ್ಶನ ಪೂಜೆಗಳನ್ನು ಮಾಡುವುದಕ್ಕೆ ಕ್ಷೇತ್ರವು ಅವಕಾಶ ಕಲ್ಪಿಸಿರುವುದರಿಂದ ಬಾಹುಬಲಿ ಭಕ್ತರಿಗೆ ಎಲ್ಲಿಲ್ಲದ ಆನಂದ ಎನ್ನುತ್ತಾರೆ ತ್ಯಾಗಿ ವರ್ಗದವರು.

ಶ್ರವಣಬೆಳಗೊಳದ ವಿಂಧ್ಯಗಿರಿಯಲ್ಲಿ ಕಂಗೊಳಿಸುವ ಬಾಹುಬಲಿಯ ಏಕ ಶಿಲಾ ಮೂರ್ತಿ.
ಶ್ರವಣಬೆಳಗೊಳದ ವಿಂಧ್ಯಗಿರಿಯಲ್ಲಿ ಕಂಗೊಳಿಸುವ ಬಾಹುಬಲಿಯ ಏಕ ಶಿಲಾ ಮೂರ್ತಿ.

ಭಂಡಾರ ಬಸದಿಯ ಪ್ರಾಂಗಣದಲ್ಲಿ ಬಾಹುಬಲಿಯ ಮೂರ್ತಿ ಸ್ಥಾಪಿಸಲಾಗುತ್ತಿದ್ದು ಆದಷ್ಟು ಬೇಗ ಧಾರ್ಮಿಕ ಪ್ರತಿಷ್ಠಾಪನೆಯ ಪಂಚಕಲ್ಯಾಣ ಮಹೋತ್ಸವದ ವಿಧಿ ವಿಧಾನಗಳನ್ನು ನಡೆಸಲಾಗುವುದು.

-ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಜೈನಮಠದ ಪೀಠಾಧಿಪತಿ

ವೈರಾಗ್ಯದತ್ತ ವಾಲಿದ ಬಾಹುಬಲಿ ಅನಾದಿ ಕಾಲದಿಂದಲೂ ಭಾರತದ ಪ್ರಮುಖ ಧರ್ಮಗಳಲ್ಲಿ ಅಹಿಂಸಾ ತತ್ವ ಪಾಲಿಸುವ ಜೈನ ಧರ್ಮವೂ ಒಂದು. 24 ತೀರ್ಥಂಕರರು ಜೈನ ಧರ್ಮದ ಮಹಾ ಪುರುಷರಾಗಿದ್ದು ಪ್ರಥಮ ತೀರ್ಥಂಕರರಾದ ವೃಷಭನಾಥರ ಮಕ್ಕಳೇ ಭರತ ಬಾಹುಬಲಿಯರು. ಭರತ ಚಕ್ರವರ್ತಿಯ ಸಾಮ್ರಾಜ್ಯ ವಿಸ್ತರಣೆಗೆ ವಿರೋಧಿಸಿದ ಬಾಹುಬಲಿಯು ಜಲ ದೃಷ್ಟಿ ಮಲ್ಲ ಯುದ್ಧಗಳಲ್ಲಿ ಸಹೋದರನಾದ ಭರತನನ್ನು ಸೋಲಿಸುತ್ತಾನೆ. ತಪ್ಪಿನ ಅರಿವಾಗಿ ಯುದ್ಧದಲ್ಲಿ ಸೋತ ಭರತನಿಗೆ ಕ್ಷಮೆಯಾಚಿಸುತ್ತಾ ರಾಜ್ಯವನ್ನೆಲ್ಲಾ ಭರತನಿಗೆ ಒಪ್ಪಿಸಿ ವೈರಾಗ್ಯದ ಕಡೆಗೆ ಬಾಹುಬಲಿ ವಾಲುತ್ತಾ ಸಂಪೂರ್ಣ ತ್ಯಾಗ ಜೀವನಕ್ಕೆ ತನ್ನನ್ನೇ ಅರ್ಪಿಸಿಕೊಳ್ಳುತ್ತಾನೆ. ಬಾಹುಬಲಿ ಘೋರ ತಪಸ್ಸು ಮಾಡಿದರೂ ಕೇವಲ ಜ್ಞಾನ ಪ್ರಾಪ್ತಿಯಾಗಲಿಲ್ಲ. ಕಾರಣ ತಿಳಿದಾಗ ತಾನು ನಿಂತಿರುವ ಈ ಭೂಮಿಯು ತನ್ನದಲ್ಲ ನನ್ನಣ್ಣನದು ಎಂಬ ಭಾವ ಇರುತ್ತದೆ. ಆಗ ಭರತನು ಬಾಹುಬಲಿಯ ಬಳಿಗೆ ಬಂದು ಇದು ನೀನು ನೀಡಿದ ನೆಲವಾಗಿದೆ. ಇದು ನನ್ನ ನೆಲವಲ್ಲ ನಿನ್ನದೇ ಎಂದು ಹೇಳಿದಾಗ ಬಾಹುಬಲಿಗೆ ಕೇವಲ ಜ್ಞಾನ ಪ್ರಾಪ್ತಿಯಾಗಿ ತನ್ನ ತಂದೆ ವೃಷಭನಾಥರಿಗಿಂತ ಮೊದಲೇ ಮೋಕ್ಷವನ್ನು ಪಡೆಯುತ್ತಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT