ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘₹5 ಕೋಟಿ ಮುಂಗಡ ಕಳುಹಿಸಿದ್ದ ಡಿಕೆಶಿ’

ಎಚ್‌ಡಿಕೆ ಹೆಸರು ಹೇಳಿದರೆ ₹100 ಕೋಟಿ ಕೊಡುವುದಾಗಿ ಹೇಳಿದ್ದರು: ದೇವರಾಜೇಗೌಡ
Published 17 ಮೇ 2024, 19:09 IST
Last Updated 17 ಮೇ 2024, 19:09 IST
ಅಕ್ಷರ ಗಾತ್ರ

ಹಾಸನ: ‘ಸಂಸದ ಪ್ರಜ್ವಲ್​ ರೇವಣ್ಣ ಅವರ ಅಶ್ಲೀಲ ವಿಡಿಯೊ ಹಂಚಿಕೆ ಪ್ರಕರಣದ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ನಾಲ್ವರು ಸಚಿವರಿದ್ದಾರೆ’ ಎಂದು ಅತ್ಯಾಚಾರ ಪ್ರಕರಣದ ಆರೋಪಿ, ಬಿಜೆಪಿ ಮುಖಂಡ ಜಿ. ದೇವರಾಜೇಗೌಡ ಆರೋಪಿಸಿದರು.

ಪೊಲೀಸ್ ಕಸ್ಟಡಿ ಕೊನೆಗೊಂಡ ನಂತರ ಶುಕ್ರವಾರ ಮತ್ತೆ ಜಿಲ್ಲಾ ಕಾರಾಗೃಹಕ್ಕೆ
ಹಸ್ತಾಂತರಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ  ಮಾತನಾಡಿದ ಅವರು, ‘ಅಶ್ಲೀಲ ವಿಡಿಯೊ ಪ್ರಕರಣದಲ್ಲಿ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿಯವರೇ ಪೆನ್‌ಡ್ರೈವ್‌ ಸೃಷ್ಟಿಕರ್ತ ಎಂದು ಹೇಳಲು ಡಿ.ಕೆ.ಶಿವಕುಮಾರ್‌ ನನಗೆ ₹100 ಕೋಟಿ ಆಮಿಷವೊಡ್ಡಿದ್ದರು’ ಎಂದು
ಹೇಳಿದರು.

ನಾಲ್ವರು ಸಚಿವರಿಂದ ಆಮಿಷ: ‘ಸಚಿವರಾದ ಎನ್‌.ಚಲುವರಾಯಸ್ವಾಮಿ, ಕೃಷ್ಣ ಬೈರೇಗೌಡ, ಪ್ರಿಯಾಂಕ ಖರ್ಗೆ ಹಾಗೂ ಇನ್ನೊಬ್ಬ ಸಚಿವರ ಮೂಲಕ ಶಿವಕುಮಾರ್‌ ಆಮಿಷ ಒಡ್ಡಿದ್ದರು. ಮುಂಗಡವಾಗಿ ₹5 ಕೋಟಿಯನ್ನು ಬೌರಿಂಗ್ ಕ್ಲಬ್‌ನ ಕೊಠಡಿ ಸಂಖ್ಯೆ 110ಕ್ಕೆ ಕಳಿಸಿದ್ದರು. ಆದರೆ, ಒಪ್ಪದೇ ಇದ್ದುದಕ್ಕೆ ನನ್ನನ್ನು ಮಟ್ಟಹಾಕಲು ಸಂಚು ಮಾಡಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಪ್ರಜ್ವಲ್ ರೇವಣ್ಣ ಅವರ ಮಾಜಿ ಕಾರು ಚಾಲಕ ಕಾರ್ತಿಕ್ ಅವರನ್ನು ಕರೆಸಿಕೊಂಡು, ಸಂಪೂರ್ಣ ಮಾಹಿತಿ ಪಡೆದು, ಪೆನ್‌ಡ್ರೈವ್ ಸಿದ್ಧಪಡಿಸಿದ್ದೇ ಡಿ.ಕೆ.ಶಿವಕುಮಾರ್. ಅದರ ನಿರ್ವಹಣೆಗೆಂದೇ ಸಚಿವರ ತಂಡ ರಚಿಸಿದ್ದರು. ನಾನು ಒಪ್ಪದೇ ಇದ್ದಾಗ, ಈಗಾಗಲೇ ದೊಡ್ಡ ಹಗರಣವಾಗಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ, ಬಿಜೆಪಿಗೆ, ಕುಮಾರಸ್ವಾಮಿ ಅವರಿಗೆ ಕೆಟ್ಟ ಹೆಸರು ತರಲು ಪ್ರಯತ್ನಿಸಿದರು’ ಎಂದು ದೂರಿದರು.

‘ವಿಧಾನಪರಿಷತ್‌ ಮಾಜಿ ಸದಸ್ಯ,  ಚನ್ನರಾಯಪಟ್ಟಣದ ಎಂ.ಎ.ಗೋಪಾಲಸ್ವಾಮಿ ಅವರನ್ನು ಸಂಧಾನಕ್ಕೆ ಕಳಿಸಿದ್ದರು. ದೇಶದಲ್ಲಿ ಮೋದಿಯವರಿಗೆ ಕಳಂಕ ತರಬೇಕು. ಹಗರಣದಲ್ಲಿ ಅವರನ್ನು ಬಿಂಬಿಸಿ ಬಿಜೆಪಿಗೆ ಕೆಟ್ಟ ಹೆಸರು ತರಬೇಕೆಂಬುದು ಶಿವಕುಮಾರ್ ಅವರ ಮುಖ್ಯ ಉದ್ದೇಶ ವಾಗಿತ್ತು. ಜೊತೆಗೆ, ಎಚ್.ಡಿ.ಕುಮಾರ ಸ್ವಾಮಿ ನಾಯಕತ್ವವನ್ನು ರಾಜ್ಯದಲ್ಲಿ ಹಾಳು ಮಾಡುವುದು ಮತ್ತೊಂದು ಉದ್ದೇಶ’ ಎಂದು ದೂರಿದರು‌.

‘ನನ್ನ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದರು. ಪುರಾವೆ ಸಿಗಲಿಲ್ಲ. ಅತ್ಯಾಚಾರ ಪ್ರಕರಣ ದಾಖಲಿಸಿದರು. ಸಾಕ್ಷ್ಯ ಸಿಗಲಿಲ್ಲ. ಈಗ ಪೆನ್‌ಡ್ರೈವ್  ಪ್ರಕರಣ ದಾಖಲಿಸಿದ್ದಾರೆ. ಎಲ್ಲ ಸತ್ಯ ಹೊರಗೆ ಬರಲಿದ್ದು, ಸತ್ಯ– ಧರ್ಮದ ಪರ ಹೋರಾಡುವ ನಾಯಕ ನಾನು. ಯಾವ ಷಡ್ಯಂತ್ರವಿದ್ದರೂ ನನ್ನನ್ನು ಏನೂ ಮಾಡಲಾಗದು. ಕಾನೂನಿಗೆ ಎಲ್ಲರೂ ತಲೆ ಬಾಗಲೇಬೇಕು. ಸತ್ಯ ಹೊರಗೆ ಬಂದೇ ಬರುತ್ತದೆ. ಸತ್ಯಕ್ಕೇ ಜಯ’ ಎಂದರು.

ಕಸ್ಟಡಿ ಅವಧಿ ಅಂತ್ಯ ಮತ್ತೆ ಜೈಲಿಗೆ

ಜಿ.ದೇವರಾಜೇಗೌಡರ ಪೊಲೀಸ್ ಕಸ್ಟಡಿ ಅವಧಿ ಗುರುವಾರಕ್ಕೆ ಅಂತ್ಯವಾಗಿದ್ದು ಶುಕ್ರವಾರ ಅವರನ್ನು ಹೊಳೆನರಸೀಪುರ ನಗರ ಠಾಣೆ ಪೊಲೀಸರು ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಿದರು. ಮೇ 24ರ ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿದೆ. ವಿಚಾರಣೆ ಸಲುವಾಗಿ ದೇವರಾಜೇಗೌಡರನ್ನು ಕಸ್ಟಡಿಗೆ ನೀಡಬೇಕೆಂದು ಪೊಲೀಸರು ಮೇ 13 ರಂದು ಅರ್ಜಿ ಸಲ್ಲಿಸಿದ್ದ ಮೇರೆಗೆ ನ್ಯಾಯಾಲಯವು ಎರಡು ದಿನ ಕಸ್ಟಡಿಗೆ ನೀಡಿತ್ತು. ಒಂದು ದಿನ ವಿಸ್ತರಣೆ ಮನವಿ ಸಲ್ಲಿಸಿ ಪೊಲೀಸರು ಕಸ್ಟಡಿಗೆ ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT