ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿದೇವತೆ ಹಾಸನಾಂಬೆ ದರ್ಶನ: ಭಕ್ತರು ಪುನೀತ

ದರ್ಶನ ಪಡೆದ ಶಾಸಕ ರೇವಣ್ಣ ಕುಟುಂಬ, ಸಾಲು ಮರದ ತಿಮ್ಮಕ್ಕ
Last Updated 29 ಅಕ್ಟೋಬರ್ 2021, 16:03 IST
ಅಕ್ಷರ ಗಾತ್ರ

ಹಾಸನ: ಹಾಸನಾಂಬೆ ಮೊದಲ ದಿನದ ಸಾರ್ವಜನಿಕ ದರ್ಶನೋತ್ಸವಕ್ಕೆ ಭಕ್ತರ ದಂಡು ಹರಿದು ಬಂತು. ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ಬಂದು ದೇವರ ದರ್ಶನ ಪಡೆದು ಪುನೀತರಾದರು.

ಶಾಸ್ತ್ರೋಕ್ತವಾಗಿ ಸಾರ್ವಜನಿಕ ದರ್ಶನ ಶುಕ್ರವಾರ ಬೆಳಗ್ಗೆಯಿಂದ ಆರಂಭಗೊಂಡಿತು. ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ಸಾಗಿ ದೇವಿಯ ದರ್ಶನ ಪಡೆದು ಧನ್ಯತಾಭಾವ ಮೆರೆದರು. ಶನಿವಾರ ಮತ್ತು ಭಾನುವಾರ ಹೆಚ್ಚಿನ ಭಕ್ತರು ಆಗಮಿಸುವ ನಿರೀಕ್ಷೆ ಇರುವುದರಿಂದ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಶಾಸಕ ಎಚ್‌.ಡಿ.ರೇವಣ್ಣ ಕುಟುಂಬದವರು ದೇವಿ ದರ್ಶನ ಪಡೆದರು. ಸಂಸದ ಪ್ರಜ್ವಲ್ ರೇವಣ್ಣ, ಭವಾನಿ ರೇವಣ್ಣ, ಅವರ ಪುತ್ರ ಸೂರಜ್ ರೇವಣ್ಣ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಿಗೆ ರವಿಕೆ ಕಣ ಅರ್ಪಿಸಲಾಯಿತು.

ಸಾಲು ಮರದ ತಿಮ್ಮಕ್ಕ, ಬಿಜೆಪಿ ಮುಖಂಡ ಎ.ಮಂಜು, ಪೊಟ್ಯಾಟೋ ಕ್ಲಬ್‌ ಅಧ್ಯಕ್ಷ ಯೋಗಾ ರಮೇಶ್‌ ದರ್ಶನ ಪಡೆದರು. ದೇವಾಲಯ ಪ್ರವೇಶಿಸುವ ಪ್ರತಿಯೊಬ್ಬರು ಕೋವಿಡ್‌ ನಿರೋಧಕ ಲಸಿಕೆ ಪಡೆದಿರುವುದಕ್ಕೆ ದಾಖಲೆ ಹಾಜರುಪಡಿಸುವುದನ್ನು ಜಿಲ್ಲಾಡಳಿತ ಕಡ್ಡಾಯಗೊಳಿಸಿದೆ. ಲಸಿಕೆ ಪಡೆದಿರುವ ಬಗ್ಗೆ 15 ಕಡೆ ತಪಾಸಣಾ ತಂಡ ಕಾರ್ಯನಿರ್ವಹಿಸುತ್ತಿದೆ. ಆರೋಗ್ಯ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ದಾಖಲೆಗಳ ಪರಿಶೀಲನೆ ನಡೆಸಿದರು. ಲಸಿಕೆ ಪಡೆಯದವರಿಗೆ ಲಸಿಕೆ ನೀಡುವ ವ್ಯವಸ್ಥೆ ಸಹಮಾಡಲಾಗಿದೆ.

ಗುರುವಾರ ಗರ್ಭಗುಡಿ ಬಾಗಿಲು ತೆರೆದ ನಂತರ ಕೆಲ ಸಮಯ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಸಂಜೆ ಧಾರ್ಮಿಕ ವಿಧಿವಿಧಾನಗಳ ರೀತಿ ದೇವಿಗೆ ಮಡಿವಾಳ ಸಮದಾಯದವರು ಹುಣಸಿನಕೆರೆಯಲ್ಲಿ ಮಡಿ ಮಾಡಿ ತಂದ ವಸ್ತ್ರಗಳು ಹಾಗೂ ಖಜಾನೆಯಿಂದ ತಂದಿರಿಸಿದ್ದ ಆಭರಣ ಧಾರಣೆ, ಪ್ರಥಮ ಪೂಜೆ, ಗರ್ಭಗುಡಿಗೆ ಸುಣ್ಣ ಬಳಿಯುವ ಕೆಲಸ ಮುಗಿಸಿದರು. ಬೆಳಗ್ಗೆ ನೈವೇದ್ಯ, ಅಭಿಷೇಕ ಜರುಗಿತು.

ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಸ್ವಯಂ ಸೇವಕರು, ಸ್ಕೌಟ್ಸ್‌, ಗೈಡ್ಸ್‌ ವಿದ್ಯಾರ್ಥಿಗಳು ಸರದಿ ಸಾಲಿನಲ್ಲಿ ನಿಂತಿರುವ ಭಕ್ತರ ಬಳಿಗೆ ತೆರಳಿ ಕುಡಿಯುವ ನೀರು ಹಾಗೂ ಮಜ್ಜಿಗೆ ಪೂರೈಸುತ್ತಿದ್ದಾರೆ. ದರ್ಶನಕ್ಕಾಗಿ ಸರದಿ ಸಾಲಿನಲ್ಲಿ ನಿಲ್ಲುವ ಭಕ್ತರಿಗೆ ಟಾರ್ಪಲ್‌ ಮೂಲಕ ನೆರಳಿನ ಅನುಕೂಲ ಕಲ್ಪಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT