ಹಳೇಬೀಡು: ತಯಾರಿಕರೇ ನೇರವಾಗಿ ಮಾರುಕಟ್ಟೆಗೆ ಇಳಿದಿರುವುದರಿಂದ ಹಳೇಬೀಡಿನಲ್ಲಿ ವಿಶಿಷ್ಟ ಆಕೃತಿ ಹಾಗೂ ಆಕರ್ಷಣೀಯವಾದ ಗಣೇಶ ಮೂರ್ತಿಗಳು ಗ್ರಾಹಕರ ಗಮನ ಸೆಳೆಯುತ್ತಿವೆ.
ಅರಸೀಕೆರೆ ತಾಲ್ಲೂಕಿನ ರಾಮಸಾಗರ ಗ್ರಾಮದಿಂದ ಬಂದಿರುವ ನಾಗೇಶ ಅವರು ಜೋಡಿಸಿರುವ ಅಂಗಡಿಯಲ್ಲಿ, ಗಣೇಶ ಹಾಗೂ ಗೌರಿ ಮೂರ್ತಿಗಳಿಗೆ ಭಾರೀ ಬೇಡಿಕೆ ಕಂಡು ಬಂತು. ಅರ್ಧ ಅಡಿಯ ಪುಟ್ಟ ಗಣೇಶನಿಂದ 6 ಅಡಿ ಗಣೇಶ ಮೂರ್ತಿಗಳು ಬಿರುಸಿನಿಂದ ಮಾರಾಟವಾಗುತ್ತಿವೆ.
‘ರಾಮಸಾಗರ ಗ್ರಾಮದಲ್ಲಿ 10 ಕುಟುಂಬದವರು ಪ್ರತಿ ವರ್ಷ ಗೌರಿ– ಗಣೇಶ ಮೂರ್ತಿ ತಯಾರಿಸುತ್ತೇವೆ. ನಮ್ಮ ತಾತ ಮುತ್ತಾತನ ಕಾಲದಿಂದಲೂ ನಮ್ಮೂರಿನ ಗಣೇಶ ಮೂರ್ತಿಗೆ ಬೇಡಿಕೆ ಇದೆ. ನಾವು ತಯಾರಿಸಿದ ಮೂರ್ತಿಗಳು ಬೆಂಗಳೂರು, ದಾವಣಗೆರೆ, ಬೇಲೂರು, ಹಾಸನ ಹೊಳೆನರಸೀಪುರ ಪಟ್ಟಣಗಳಿಗೆ ಪೂರೈಕೆಯಾಗಿವೆ. ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚುತ್ತಲೇ ಇದೆ’ ಎನ್ನುತ್ತಾರೆ ನಾಗೇಶ.
3 ಅಡಿಗಿಂತ ಕಡಿಮೆ ಎತ್ತರದ 400, 3 ಅಡಿ ಮೇಲಿನ 600 ಗಣೇಶ ಮೂರ್ತಿ, 200 ಗೌರಿ ವಿಗ್ರಹ ತಯಾರಿಕೆ ಮಾಡಿದ್ದೇವೆ. ಅರಸೀಕೆರೆ ಹಾಗೂ ಹಳೇಬೀಡಿನಲ್ಲಿ 200 ಮೂರ್ತಿ ಮಾರಾಟಕ್ಕೆ ಇಟ್ಟಿದ್ದೇವೆ. ಬಿರುಸಿನಿಂದ ಮಾರಾಟ ನಡೆಯುತ್ತಿದೆ. ಖರೀದಿಗೆ ಬರುವ ಗಣೇಶ ಕೂರಿಸುವ ಮಕ್ಕಳ ಕಲರವ ಮನಸ್ಸಿಗೆ ಹಿತ ನೀಡುತ್ತಿದೆ ಎಂದು ನಾಗೇಶ್ ಸಂಭ್ರಮ ವ್ಯಕ್ತಪಡಿಸಿದರು.
‘ಗಣೇಶ ಮೂರ್ತಿ ತಯಾರಿಕೆ ಕುಂಬಾರಿಕೆಯ ಕುಲಕಸುಬಾಗಿದೆ. ತಂದೆ ಶಿವಣ್ಣ ಕೈಹಿಡಿದು ಕೆಲಸ ಕಲಿಸಿದ್ದಲ್ಲದೇ, ತಾಯಿ ಭಾಗ್ಯ ಪ್ರೇರಣೆ ನೀಡಿದ್ದರಿಂದ ವಿಭಿನ್ನ ಶೈಲಿಯ ಗಣೇಶ ಮೂರ್ತಿ ತಯಾರಿಕೆ ಕರಗತವಾಗಿದೆ. ತಂದೆ, ತಾಯಿ ಜೊತೆಗೂಡಿ ಮೂರ್ತಿ ತಯಾರಿಸುತ್ತಿದ್ದೇವೆ. ಮೂರು ತಿಂಗಳು ಮೊದಲೇ ಮಣ್ಣು ಸಂಗ್ರಹಿಸಿ ಹದ ಮಾಡುತ್ತೇವೆ. ಪರಿಸರಕ್ಕೆ ಹಾನಿಯಾಗದಂತೆ ಶುದ್ಧವಾದ ಎರೆ ಮಣ್ಣಿನಿಂದ ಮೂರ್ತಿ ತಯಾರಿಸುತ್ತೇವೆ. ಪರಿಸರ ಸ್ನೇಹಿ ಬಣ್ಣವನ್ನು ಮೂರ್ತಿಗೆ ಬಳಿಯುತ್ತೇವೆ. ಬಣ್ಣ ಇಲ್ಲದ ಗಣೇಶ ಮೂರ್ತಿಗಳಿಗೂ ಈಗ ಬೇಡಿಕೆ ಇದೆ’ ಎಂದು ನಾಗೇಶ್ ತಿಳಿಸಿದರು.
ನಾವೇ ನೇರವಾಗಿ ಮಾರಾಟ ಮಾಡುತ್ತಿರುವುದರಿಂದ ಗ್ರಾಹಕರಿಗೆ ಸ್ವಲ್ಪ ಕಡಿಮೆ ಬೆಲೆಯಲ್ಲಿ ಮೂರ್ತಿಗಳು ದೊರಕುತ್ತಿವೆ. ನಮಗೂ ಸ್ವಲ್ಪ ಹೆಚ್ಚಿನ ಲಾಭಾಶ ದೊರಕುತ್ತಿದೆ.ನಾಗೇಶ ಮೂರ್ತಿ ತಯಾರಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.