ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಡಿಜಿಟಲ್‌ ಸ್ಪರ್ಶದತ್ತ ಜಿಲ್ಲೆಯ ಗ್ರಂಥಾಲಯಗಳು

ಸ್ಥಳೀಯ ಆಡಳಿತಗಳಿಂದ ಕಾಲಕಾಲಕ್ಕೆ ತೆರಿಗೆ ಪಾವತಿ: ಗ್ರಾ.ಪಂ.ಗಳಿಂದಲೇ ಗ್ರಂಥಾಲಯಗಳ ನಿರ್ವಹಣೆ
Last Updated 11 ಸೆಪ್ಟೆಂಬರ್ 2022, 15:47 IST
ಅಕ್ಷರ ಗಾತ್ರ

ಹಾಸನ: ಅನುದಾನಕ್ಕೆ ಎದುರು ನೋಡುತ್ತಾ ಕುಳಿತಿರುವ ಜಿಲ್ಲೆಯ ಗ್ರಂಥಾಲಯಗಳಿಗೆ ಲಕ್ಷಾಂತರ ರೂಪಾಯಿ ಸೆಸ್‌ ಬರಬೇಕಿದೆ. ಜಿಲ್ಲೆಯಲ್ಲಿ ಇರುವ ಎಂಟು ತಾಲ್ಲೂಕು ಮಟ್ಟದ ಗ್ರಂಥಾಲಯಗಳೂ ಸೇರಿದಂತೆ ಒಟ್ಟು 260 ಗ್ರಂಥಾಲಯಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯಲ್ಲಿ ಒಟ್ಟು 54,484 ಸದಸ್ಯರಿದ್ದಾರೆ.

ಜಿಲ್ಲೆಯಲ್ಲಿ ಗ್ರಂಥಾಲಯಗಳಿಗೆ ಬರಬೇಕಾಗಿರುವ ಸುಮಾರು ₹90 ಲಕ್ಷದಷ್ಟು ಸೆಸ್‌ ಅನ್ನು ಪುರಸಭೆ, ಪಟ್ಟಣ ಪಂಚಾಯಿತಿ ಮತ್ತು ನಗರಸಭೆಗಳು ಬಾಕಿ ಉಳಿಸಿಕೊಂಡಿದ್ದು, ಜಿಲ್ಲೆಯಲ್ಲಿ ಗ್ರಂಥಾಲಯಗಳ ಅಭಿವೃದ್ಧಿಗೆ ಸಿಎಸ್ಆರ್‌ ಅನುದಾನವನ್ನು ಎದುರು ನೋಡಲಾಗುತ್ತಿದೆ.

ಪ್ರತ್ಯೇಕ ಗ್ರಂಥಾಲಯ ಸೆಸ್ ನಿಧಿಯನ್ನು 6 ತಿಂಗಳ ಹಿಂದೆ ಸರ್ಕಾರ ತೆರೆದಿದೆ. ಇನ್ನು ಮುಂದೆ ಸ್ಥಳೀಯಾಡಳಿತ ಗಳು ಈ ನಿಧಿಗೇ ಸೆಸ್ ಹಣವನ್ನು ಪಾವತಿಸಬೇಕು ಎಂಬ ಸರ್ಕಾರದ ಆದೇಶವಿದೆ. ಇದರಿಂದಾಗಿ ಸೆಸ್‌ ಹಣ ನೀಡುವಂತೆ ಸ್ಥಳೀಯಾಡಳಿತಗಳಿಗೆ ಗೋಗರೆಯುವುದು ತಪ್ಪಲಿದೆ ಎನ್ನುವುದು ಅಧಿಕಾರಿಗಳ ಮಾತು.

ಅರಸೀಕೆರೆ ನಗರದ ಕೇಂದ್ರ ಶಾಖಾ ಗಂಥಾಲಯ ಸುಸಜ್ಜಿತ ಕಟ್ಟಡವಿದ್ದು, ಓದುಗರಿಗೆ ಸಮರ್ಪಕ ಪುಸ್ತಕಗಳು, ನಿಯತಕಾಲಿಕೆಗಳು, ದಿನ ಪತ್ರಿಕೆಗಳ ಲಭ್ಯತೆ ಸಾಕಷ್ಟಿದೆ.

ಗ್ರಂಥಾಲಯಕ್ಕೆ ನಾಲ್ಕು ವರ್ಷಗಳಿಂದ ಪಾವತಿಸಬೇಕಾದ ₹25 ಲಕ್ಷ ಸೆಸ್ ಹಣದಲ್ಲಿ ಇತ್ತೀಚೆಗೆ ನಗರ ಸಭೆಯವರು ₹10 ಲಕ್ಷ ಪಾವತಿಸಿದ್ದಾರೆ. ಇನ್ನೂ ₹15 ಲಕ್ಷ ಬಾಕಿ ಬರಬೇಕಿದೆ. ಗ್ರಂಥಾಲಯದ ವಿದ್ಯುತ್, ದಿನಪತ್ರಿಕೆಗಳು, ನಿಯತಕಾಲಿಕೆಗಳು, ಕೈಪಿಡಿ ಸಿಬ್ಬಂದಿ ವೇತನ, ಶೌಚಾಲಯ ಸೇರಿದಂತೆ ಸಂಪೂರ್ಣ ಗ್ರಂಥಾಲಯ ನಿರ್ವಹಣೆಗೆ ಸೆಸ್ ಹಣವನ್ನೇ ಅವಲಂಬಿಸಲಾಗಿದೆ.

ಹಿರೀಸಾವೆ ಹೋಬಳಿಯ ಎಲ್ಲ ಪಂಚಾಯಿತಿ ವ್ಯಾಪ್ತಿಯಲ್ಲಿನ ಗ್ರಂಥಾಲಯಗಳ ಸೆಸ್ ಅನ್ನು ಕಳೆದ ಎರಡು ವರ್ಷದಿಂದ ಗ್ರಂಥಾಲಯ ಇಲಾಖೆಗೆ ಪಾವತಿಸುತ್ತಿಲ್ಲ.

ಮೊದಲು ಇಲಾಖೆಗೆ ವರ್ಷಕ್ಕೆ ₹25 ಸಾವಿರ ಕಟ್ಟಲಾಗುತ್ತಿತ್ತು. ಎರಡು ವರ್ಷದಿಂದ ಗ್ರಂಥಾಲಯಗಳ ಅಭಿವೃದ್ಧಿ ಮತ್ತು ನಿರ್ವಹಣೆಯನ್ನು ಗ್ರಾಮ ಪಂಚಾಯಿತಿಗೆ ವಹಿಸಲಾಗಿದೆ. ತೆರಿಗೆಯಲ್ಲಿ ಸಂಗ್ರಹಿಸಿದ ಸೆಸ್ ಹಣವನ್ನು ಪ್ರತ್ಯೇಕ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ. ನಂತರ ದಿನಪತ್ರಿಕೆ, ಪುಸ್ತಕ, ಡಿಜಿಟಲ್ ಲೈಬ್ರರಿ ಸೇರಿದಂತೆ ಇತರೆ ಗ್ರಂಥಾಲಯ ಅಭಿವೃದ್ಧಿಗೆ ಅದನ್ನು ಬಳಕೆ ಮಾಡಲಾಗುತ್ತಿದೆ ಎನ್ನುತ್ತಾರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು.

ಹಳೇಬೀಡಿನ ಗ್ರಂಥಾಲಯ ಅಭಿವೃದ್ಧಿಗಾಗಿ ಕಂದಾಯ ವಸೂಲಿಯಲ್ಲಿ ಮೀಸಲಿಡುತ್ತಿರುವ ಶೇ 6ರಷ್ಟು ಹಣವನ್ನು ಸದುಪಯೋಗ ಮಾಡಿಕೊಳ್ಳಲಾಗುತ್ತಿದೆ. ಪತ್ರಿಕೆಗಳಿಗೆ ಸಮರ್ಪಕವಾಗಿ ಬಿಲ್ ಪಾವತಿ ಮಾಡಲಾಗುತ್ತಿದೆ. ಕೃಷಿ ಪತ್ತಿನ ಸಹಕಾರ ಸಂಘದ ಬಳಿ ಶುದ್ಧಗಂಗಾ ಘಟಕದ ಹಿಂಭಾಗದ ಗ್ರಾಮ ಪಂಚಾಯಿತಿಗೆ ಸೇರಿದ ಹಳೆಯ ಕಟ್ಟಡಕ್ಕೆ ಗ್ರಂಥಾಲಯ ಸ್ಥಳಾಂತರ ಮಾಡಿದ ನಂತರ ಓದುಗರ ಸಂಖ್ಯೆ ಹೆಚ್ಚಾಗಿದೆ ಎಂದು ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿಯವರು ಹೇಳುತ್ತಾರೆ.

‘ಚನ್ನರಾಯಪಟ್ಟಣದ ಗ್ರಂಥಾಲಯ ದಲ್ಲಿ 35 ಸಾವಿರ ಪುಸ್ತಕ ಗಳಿವೆ. ಕುಡಿಯುವ ನೀರು, ಶೌಚಾಲಯದ ಸೌಲಭ್ಯ ಇದೆ. ನೆಲ ಅಂತಸ್ತು ಮತ್ತು ಮೊದಲನೇ ಮಹಡಿ ಇದೆ. ಓದುಗರು ದಿನ ಪತ್ರಿಕೆ, ಪುಸ್ತಕಗಳನ್ನು ಓದಲು ಅವಕಾಶ ಕಲ್ಪಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿ ದಂತೆ ಸಾಕಷ್ಟು ಪುಸ್ತಕಗಳು ಲಭ್ಯವಾಗಿವೆ. ಆಯಾ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಯುಪಿಎಸ್ ಸವಲತ್ತು ಇದೆ. 2ನೇ ಅಂತಸ್ತು ನಿರ್ಮಿಸಲಾಗಿದೆ. ಈ ಕೊಠಡಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಓದುವವರಿಗೆ ಅವಕಾಶ ಒದಗಿಸಲಾಗುತ್ತದೆ’ ಎನ್ನುತ್ತಾರೆ ಗ್ರಂಥಾಲಯದ ಅಧಿಕಾರಿ.

‘ಆಲೂರು ಪಟ್ಟಣ ಪಂಚಾಯಿತಿಯಿಂದ ಗ್ರಂಥಾಲಯ ಇಲಾಖೆಗೆ ಸಂಬಂಧಿಸಿದ ಸೆಸ್ ಅನ್ನು ಪ್ರತಿ ತಿಂಗಳು ಪಾವತಿ ಮಾಡಲಾಗುತ್ತಿದೆ’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಟರಾಜ್‌ ತಿಳಿಸಿದರು.

‘ಪಟ್ಟಣದಲ್ಲಿದ್ದ ನೂರಾರು ವರ್ಷಗಳ ಹಳೆಯ ಕಟ್ಟಡವನ್ನು ತೆರವುಗೊಳಿಸಿ ₹57 ಲಕ್ಷ ವೆಚ್ಚದಲ್ಲಿ ಗ್ರಂಥಾಲಯಕ್ಕೆ ನೂತನ ಕಟ್ಟಡ ನಿರ್ಮಾಣವಾಗುತ್ತಿದೆ. ಶೌಚಾಲಯ, ಕಚೇರಿ ಸೇರಿದಂತೆ ಎಲ್ಲ ಸೌಲಭ್ಯಗಳು ಇರಲಿವೆ. ಇನ್ನೆರಡು ತಿಂಗಳಲ್ಲಿ ಉದ್ಘಾಟನೆಯಾಗಲಿದೆ. ಸದ್ಯ ಪಟ್ಟಣ ಪಂಚಾಯಿತಿಗೆ ಸೇರಿದ ಕಟ್ಟಡದ ಮೊದಲ ಅಂತಸ್ತಿನಲ್ಲಿ ಗ್ರಂಥಾಲಯ ನಡೆಯುತ್ತಿದೆ’ ಎಂದು ಗ್ರಂಥಪಾಲಕ ನಾಗರಾಜ್ ಹೇಳಿದರು.

ಬೇಲೂರಿನ ಸಾರ್ವಜನಿಕ ಗ್ರಂಥಾಲಯವು ಸುಸಜ್ಜಿತ ಕಟ್ಟಡವನ್ನು ಹೊಂದಿದ್ದು, ಮೂರು ಸಾವಿರ ಸದಸ್ಯರಿದ್ದಾರೆ. 45 ಸಾವಿರ ಪುಸ್ತಕಗಳಿವೆ. ಸ್ಥಳೀಯ ಪುರಸಭೆಯಿಂದ ಕಾಲಕಾಲಕ್ಕೆ ಸೆಸ್ ಬರುತ್ತಿದ್ದು, ನಿತ್ಯ 50ರಿಂದ 60 ಓದುಗರು ಬರುತ್ತಿದ್ದಾರೆ.

‘ಪ್ರತಿ ತಿಂಗಳೂ ಸೆಸ್‌ ಪಾವತಿ’

‘ಅರಕಲಗೂಡು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಸಾರ್ವಜನಿಕ ಗ್ರಂಥಾಲಯವಿದ್ದು, ಇದಕ್ಕೆ ವ್ಯವಸ್ಥಿತವಾಗಿ ಗ್ರಂಥಾಲಯ ಕರ ಪಾವತಿ ಯಾಗುತ್ತಿದೆ. ಸ್ವಯಂಘೋಷಿತ ಆಸ್ತಿ ತೆರೆಗೆಯಲ್ಲಿ ಶೇ 6ರಷ್ಟು ಗಂಥಾಲಯ ಕರ ನಿಗದಿ ಮಾಡಿದ್ದು, ಅದರಂತೆ ಪ್ರತಿ ತಿಂಗಳು ಹಣವನ್ನು ಗ್ರಂಥಾಲಯ ಇಲಾಖೆಗೆ ಪಾವತಿಯಾಗುತ್ತಿದೆ. ಜೂನ್ ಮತ್ತು ಜುಲೈಯಲ್ಲಿ ₹1,01,559 ಪಾವತಿ ಮಾಡಿದ್ದು, ಆಗಸ್ಟ್ ತಿಂಗಳ ಹಣವನ್ನಷ್ಟೆ ಪಾವತಿ ಮಾಡಬೇಕಿದೆ’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಆರ್.ಸವಿತಾ ತಿಳಿಸಿದರು.

‘ತಾಲ್ಲೂಕಿನಲ್ಲಿ 36 ಗ್ರಾಮ ಪಂಚಾಯಿತಿಗಳಿದ್ದು, ಇದರಲ್ಲಿ 7 ಪಂಚಾಯಿತಿಗಳು ಹೊಸದಾಗಿ ರಚಿತವಾಗಿವೆ. ಇವನ್ನು ಹೊರತುಪಡಿಸಿ ಉಳಿದ 29 ಪಂಚಾಯಿತಿಗಳಲ್ಲಿ ಗ್ರಂಥಾಲಯಗಳಿವೆ. ಇವುಗಳನ್ನು ಪಂಚಾಯಿತಿಗಳೇ ನಿರ್ವಹಿಸುತ್ತಿರುವ ಕಾರಣ ಗ್ರಂಥಾಲಯ ಕರವನ್ನು ಇಲಾಖೆಗೆ ಪಾವತಿಸುವ ಅಗತ್ಯವಿಲ್ಲ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಎಂ.ಎಸ್. ಗಿರಿಧರ್ ತಿಳಿಸಿದರು.

‘29 ಗ್ರಂಥಾಲಯಗಳಲ್ಲಿ 23 ಸ್ವಂತ ಕಟ್ಟಡ ಹೊಂದಿವೆ. 15 ನೇ ಹಣಕಾಸು ನಿಧಿಯಲ್ಲಿ ₹2.5 ಲಕ್ಷ ಗ್ರಂಥಾಲಯಗಳ ಅಭಿವೃದ್ಧಿಗೆ ಬಳಕೆ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಸಾರ್ವಜನಿಕರಿಂದ ಪುಸ್ತಕಗಳನ್ನು ದೇಣಿಗೆ ಪಡೆದು ಗ್ರಂಥಾಲಯಗಳಿಗೆ ನೀಡಲಾಗಿದೆ. ಡಿಜಿ ವಿಕಸನ ಸಂಸ್ಥೆ ತಾಲ್ಲೂಕಿನ 15 ಪಂಚಾಯಿತಿ ಗ್ರಂಥಾಲಯಗಳಿಗೆ ಎಲ್‌ಇಡಿ ಟಿವಿ, ಕಂಪ್ಯೂಟರ್ ಹಾಗೂ ಎರಡು ಮೊಬೈಲ್ ಕೊಡುಗೆಯಾಗಿ ನೀಡಿದೆ. ಪಂಚಾಯಿತಿಯಿಂದ ವೈಫೈ ಹಾಕಿಸಲು ಕ್ರಮ ಕೈಗೊಳ್ಳಲಾಗುತ್ತಿದೆ’ ಹೇಳಿದರು.

‘ಗ್ರಾ.ಪಂ. ಮಟ್ಟದಲ್ಲೂ ಉನ್ನತೀಕರಣ’

‘ಗ್ರಂಥಾಲಯಗಳಿಗೆ ಡಿಜಿಟಲೀಕರಣ, ಮೂಲಸೌಕರ್ಯ ಯೋಜನೆಯಡಿ ಡಿಜೆ ಸಂಸ್ಥೆಯು ಸಿಎಸ್ಆರ್ ಅನುದಾನ ಒದಗಿಸಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಂಥಾಲಯ ಉನ್ನತೀಕರಣಕ್ಕೆ ₹1.5 ಲಕ್ಷದಿಂದ ₹2 ಲಕ್ಷ ಮೀಸಲಿರಿಸ ಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕಾಂತರಾಜು ತಿಳಿಸಿದರು.

ಯಾರು ಏನಂತಾರೆ?

‘₹15 ಲಕ್ಷ ಬಾಕಿ’

ಬಾಕಿ ಬರಬೇಕಿರುವ ₹15 ಲಕ್ಷ ಸೆಸ್ ಹಣವನ್ನು ನಗರಸಭೆಯವರು ಸಕಾಲಕ್ಕೆ ಪಾವತಿಸಿದರೆ ಗ್ರಂಥಾಲಯ ನಿರ್ವಹಣೆ ಸುಲಭವಾಗುತ್ತದೆ.

–ಸಿ.ಎಸ್. ಜಯಪ್ಪ, ಅರಸೀಕೆರೆ ಶಾಖಾ ಗಂಥಾಲಯದ ಸಹಾಯಕ

‘ಸೆಸ್‌ ಹಣ ಗ್ರಂಥಾಲಯ ಅಭಿವೃದ್ಧಿಗೆ’

ದಿಡಗ ಪಂಚಾಯಿತಿಯಿಂದ 2019–20ರಲ್ಲಿ ₹30 ಸಾವಿರ, 2020–21ರಲ್ಲಿ ₹18 ಸಾವಿರ ಗ್ರಂಥಾಲಯದ ಸೆಸ್ ಸಂಗ್ರಹ ಮಾಡಿದ್ದು, ಪುಸ್ತಕ, ಡಿಜಿಟಲ್ ಲೈಬ್ರರಿ ಸೇರಿದಂತೆ ಇತರೆ ಅಭಿವೃದ್ಧಿಗೆ ಬಳಕೆ ಮಾಡಲಾಗಿದೆ.

–ಮರೀಗೌಡ, ಪಿಡಿಒ, ದಿಡಗ ಪಂಚಾಯಿತಿ, ಹಿರೀಸಾವೆ ಹೋಬಳಿ

‘ಬಾಕಿ ಸೆಸ್‌ ಪಾವತಿ’

ಗ್ರಾಮ ಪಂಚಾಯಿತಿಯಿಂದಲೇ ಗ್ರಂಥಾಲಯ ನಿರ್ವಹಣೆ ಮಾಡಲಾಗುತ್ತಿದೆ. ಹೀಗಾಗಿ ಗ್ರಂಥಾಲಯ ಸೆಸ್ ಪಾವತಿ ಮಾಡುವಂತಿಲ್ಲ. ಹಳೆಯ ಸೆಸ್ ಬಾಕಿ ಉಳಿಸದೆ ಪಾವತಿ ಮಾಡಲಾಗಿದೆ. ಗ್ರಂಥಾಲಯವನ್ನು ಹೊಸ ವಿನ್ಯಾಸದಿಂದ ನವೀಕರಣ ಮಾಡಲಾಗಿದೆ.

–ರವಿಕುಮಾರ್, ಪಿಡಿಒ, ಹಳೇಬೀಡು

‘ಜನರೂ ಕೈಜೋಡಿಸಲಿ’

ಜನರು ಗ್ರಂಥಾಲಯಗಳನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳುವುದರ ಜೊತೆಗೆ ಅವುಗಳ ಅಭಿವೃದ್ಧಿಗೂ ನೆರವಾದಲ್ಲಿ ಸುಸಜ್ಜಿತ ಗ್ರಂಥಾಲಯಗಳು ರೂಪುಗೊಳ್ಳಲು ಸಾಧ್ಯವಾಗುತ್ತದೆ.

–ಎಂ.ಎಸ್‌. ಗಿರಿಧರ್, ತಾ.ಪಂ ಇಒ, ಅರಕಲಗೂಡು

‘ವ್ಯವಸ್ಥಿತ ಪಾವತಿ’

ಪಟ್ಟಣ ಪಂಚಾಯಿತಿಯಿಂದ ಬಾಕಿ ಇದ್ದ ಗ್ರಂಥಾಲಯ ಕರವನ್ನು ಪಾವತಿಸಿದ್ದು, ಪ್ರತಿ ತಿಂಗಳು ವ್ಯವಸ್ಥಿತವಾಗಿ ಕರ ಪಾವತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.

–ಎಸ್.ಆರ್. ಸವಿತಾ, ಪ.ಪಂ ಮುಖ್ಯಾಧಿಕಾರಿ, ಅರಕಲಗೂಡು

‘ಪ್ರತಿ ತಿಂಗಳು ಜಮೆ’

ಪುರಸಭಾ ವ್ಯಾಪ್ತಿಯಲ್ಲಿ ಮನೆ ಕಂದಾಯ ವಸೂಲಿ ಮಾಡಲಾಗುತ್ತದೆ. ಇದರಲ್ಲಿ ಗ್ರಂಥಾಯಲದ ಸೆಸ್ ಶೇ 6ರಷ್ಟನ್ನು ಪ್ರತಿ ತಿಂಗಳು ಬ್ಯಾಂಕ್ ಮೂಲಕ ಜಮೆ ಮಾಡಲಾಗುತ್ತಿದೆ.

–ಎಚ್.ಟಿ. ಕೃಷ್ಣಮೂರ್ತಿ, ಪುರಸಭೆ ಮುಖ್ಯಾಧಿಕಾರಿ, ಚನ್ನರಾಯಪಟ್ಟಣ

‘ಅಗ್ರಸ್ಥಾನದಲ್ಲಿ ಆಲೂರು’

ಗ್ರಂಥಾಲಯ ಸೆಸ್‌ ಪಾವತಿಯನ್ನು ಆಯಾ ತಿಂಗಳು ಇಲಾಖೆಗೆ ವರ್ಗಾವಣೆ ಮಾಡಲಾಗುತ್ತಿದೆ. ಈ ವಿಷಯದಲ್ಲಿ ಆಲೂರು ಪಟ್ಟಣ ಪಂಚಾಯಿತಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದೆ.

–ನಟರಾಜ್, ಮುಖ್ಯಾಧಿಕಾರಿ, ಪಟ್ಟಣ ಪಂಚಾಯಿತಿ, ಆಲೂರು

‘ಉತ್ತಮ ಸ್ಪಂದನೆ’

ನಾನು 6 ವರ್ಷಗಳಿಂದ ಗ್ರಂಥಾಲಯಕ್ಕೆ ಓದಲು ಬರುತ್ತಿದ್ದೇನೆ. ಮನೆಗೂ ಪುಸ್ತಕಗಳನ್ನು ತೆಗೆದುಕೊಂಡು ಓದುತ್ತಿದ್ದೇನೆ. ಗ್ರಂಥಾಲಯದಲ್ಲಿ ಉತ್ತಮ ಸ್ಪಂದನೆ ದೊರೆಯುತ್ತಿದೆ.

–ರಘು, ವಿದ್ಯಾರ್ಥಿ ಬೇಲೂರು

****

ನಿರ್ವಹಣೆ: ಚಿದಂಬರಪ್ರಸಾದ, ಪೂರಕ ಮಾಹಿತಿ: ಜೆ.ಎನ್‌. ರಂಗನಾಥ, ಹಿ.ಕೃ. ಚಂದ್ರು, ಎಚ್.ಎಸ್.ಅನಿಲ್ ಕುಮಾರ್, ಜಿ.ಚಂದ್ರಶೇಖರ್, ಸಿದ್ದರಾಜು, ಎಂ.ಪಿ.ಹರೀಶ್‌, ಮಲ್ಲೇಶ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT