ಸಕಲೇಶಪುರ: 25 ದಿನಗಳಿಂದ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ದೊಡ್ಡತಪ್ಪಲೆ ಬಳಿ ನಿರಂತರವಾಗಿ ಗುಡ್ಡ ಕುಸಿದು ಸಂಚಾರಕ್ಕೆ ಸಂಚಕಾರ ಉಂಟಾಗುತ್ತಿರುವ ಸ್ಥಳಕ್ಕೆ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲಿಸಿದರು.

ಸುಮಾರು 100 ಮೀಟರ್ ಉದ್ದ ಹಾಗೂ ಸುಮಾರು 100 ಅಡಿ ಎತ್ತರದಿಂದ ಭಾರಿ ಮಣ್ಣು ಕುಸಿತ ಉಂಟಾಗಿರುವ ಸ್ಥಳವನ್ನು ನೋಡಿ ಗಾಬರಿಗೊಂಡರು. ‘ಏನ್ರಿ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ರೀತಿ ಗುಡ್ಡ ಕುಸಿತ ಆದರೆ ವಾಹನಗಳು ಹೇಗೆ ಓಡಾಡಬೇಕು? ಯಾರ‍್ರಿ ಎಂಜಿನಿಯರ್, ಗುತ್ತಿಗೆದಾರರು ಕರೀರಿ ಇಲ್ಲಿ’ ಎಂದರು.

ಸ್ಥಳದಲ್ಲಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಬೆಂಗಳೂರು ಪ್ರಾದೇಶಿಕ ಅಧಿಕಾರಿ ವಿಲಾಸ್ ಬ್ರಹ್ಮಾನ್‌ಕರ್ ಅವರಿಗೆ ಪ್ರಶ್ನೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಇಂತಹ ಗುಡ್ಡಗಳಲ್ಲಿ ಕಾಮಗಾರಿ ಮಾಡುವಾಗ ಮಣ್ಣು ಪರೀಕ್ಷೆ ನಡೆಸಲಿಲ್ಲವೇ? ಸುಮಾರು 100 ಅಡಿ ಎತ್ತರ ಇರುವ ಇಂತಹ ಗುಡ್ಡಗಳನ್ನು ಯಾವ ಲೆಕ್ಕದಲ್ಲಿ 90 ಡಿಗ್ರಿಯಲ್ಲಿ(ನೇರವಾಗಿ) ಕತ್ತರಿಸಿದ್ದೀರಿ? ಗುಡ್ಡ ಕತ್ತರಿಸಿದ ಮೇಲೆ ಅದರ ಭದ್ರತೆಗೆ ತಡೆಗೋಡೆ ಏಕೆ ಕಟ್ಟಲಿಲ್ಲ? ಯಾಕೆ ಹೀಗೆಲ್ಲಾ ಮಾಡಿದ್ದೀರಿ? ಇಲ್ಲಿ ನಿಲ್ಲೋದಕ್ಕೆ ಭಯ ಆಗುತ್ತಲ್ರಿ’ ಎಂದು ಹಲವು ಪ್ರಶ್ನೆಗಳನ್ನು ಹಾಕಿದರು.

ಮುಖ್ಯಮಂತ್ರಿ ಪ್ರಶ್ನೆಗಳಿಗೆ ತಬ್ಬಿಬ್ಬಾಗಿಯೇ ಪ್ರತಿಕ್ರಿಯಿಸಿದ ವಿಲಾಸ್, ‘ಇಂತಹ ಪ್ರದೇಶದಲ್ಲಿ ಹೆಚ್ಚು ಭೂಮಿ ಸ್ವಾಧೀನ ಪಡಿಸಿಕೊಳ್ಳಬೇಕಿತ್ತು. ಎಷ್ಟು ಸ್ವಾಧೀನ ಪಡಿಸಿಕೊಳ್ಳಲಾಗಿದೆಯೋ ಅಷ್ಟು ಅಳತೆಯಲ್ಲಿ ವಿಸ್ತರಣೆ ಮಾಡಲಾಗಿದೆ. ಇಲ್ಲಿ ಮಣ್ಣು ಸಡಿಲ ಆಗಿರುವುದರಿಂದ ಮಳೆ ನೀರಿನೊಂದಿಗೆ ಕೆಸರಿನಂತಾಗಿ ಇಳಿಯುತ್ತಿದೆ’ ಎಂದರು.

‘90 ಡಿಗ್ರಿಯಲ್ಲಿ ಗುಡ್ಡ ಕತ್ತರಿಸಿದರೆ ಮಣ್ಣು ಕುಸಿಯದೇ ಇರುತ್ತದೆಯಾ? ನಿಮ್ಮ ಎಂಜಿನಿಯರ್‌ಗಳಿಗೆ ಈ ಜ್ಞಾನ ಇಲ್ವಾ’ ಎಂದು ಸಿದ್ದರಾಮಯ್ಯ ಖಾರವಾಗಿಯೇ ಕೇಳಿದರು.

‘ಹಣ ಉಳಿಸಲು ಕಡಿಮೆ ಭೂಮಿ ಸ್ವಾಧೀನ ಪಡಿಸಿಕೊಳ್ಳುವುದು, ನಂತರ ಖರ್ಚು ಉಳಿಸಲು 90 ಡಿಗ್ರಿ ಚೌಕಾಕಾರದಲ್ಲಿ ಗುಡ್ಡಗಳನ್ನೆಲ್ಲ ಕತ್ತರಿಸಿದ್ದೀರಿ. ದಾರಿ ಉದ್ದಕ್ಕೂ ಕತ್ತರಿಸಿರುವ ಗುಡ್ಡಗಳು ಕುಸಿದು ರಸ್ತೆ ಮೇಲೆ, ಮರಗಿಡಗಳ ಸಮೇತ ಉರುಳಿ ಬಿದ್ದಿವೆ. ಇದು ಅವೈಜ್ಞಾನಿಕ ಕಾಮಗಾರಿ ಅಲ್ಲವೇ? ಮಳೆಗಾಲ ಶುರು ಆಗುವುದರೊಳಗೆ ತಡೆಗೋಡೆ ನಿರ್ಮಾಣ ಮಾಡಿದ್ದರೆ, ಮಣ್ಣು ಕುಸಿತ ತಡೆಯಬಹುದಿತ್ತಲ್ಲವೆ? ಇಂತಹ ಸಾಮಾನ್ಯ ಜ್ಞಾನ ಇಲ್ಲವೆ?’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ಸಂಸದ ಶ್ರೇಯಸ್ ಪಟೇಲ್, ಶಾಸಕರಾದ ಕೆ.ಎಂ. ಶಿವಲಿಂಗೇಗೌಡ, ಸಿಮೆಂಟ್ ಮಂಜು, ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಜಿಲ್ಲಾಧಿಕಾರಿ ಸಿ.ಸತ್ಯಭಾಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬಿ.ಆರ್. ಪೂರ್ಣಿಮಾ, ಉಪ ವಿಭಾಗಾಧಿಕಾರಿ ಡಾ.ಎಂ.ಕೆ. ಶ್ರುತಿ, ತಹಶೀಲ್ದಾರ್ ಜಿ. ಮೇಘನಾ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನಾಧಿಕಾರಿ ಪ್ರವೀಣ್ ಕುಮಾರ್, ಡಿವೈಎಸ್‌ಪಿ ಪ್ರಮೋದ್‌ಕುಮಾರ್ ಜೈನ್, ಭಾಗವಹಿಸಿದ್ದರು

ಮುಖ್ಯ ಕಾರ್ಯದರ್ಶಿ ಅಸಮಾಧಾನ

ಹೆದ್ದಾರಿ ಕಾಮಗಾರಿ ಬಗ್ಗೆ ಮುಖ್ಯಮಂತ್ರಿಗೆ ಮಾಹಿತಿ ನೀಡಿದ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ‘ಹಾಸನ–ಮಾರನಹಳ್ಳಿ ನಡುವೆ ಚತುಷ್ಪಥ 45 ಕಿ.ಮೀ. ಕಾಮಗಾರಿಯಲ್ಲಿ ಗುಣಮಟ್ಟವಿಲ್ಲ. 35 ಕಿ.ಮೀ. ಕಾಂಕ್ರೀಟ್ ರಸ್ತೆ ಕಾಮಗಾರಿ ಮುಗಿದಿದೆ. ಆದರೆ ಎಲ್ಲಿಯೂ ತಡೆಗೋಡೆ ಆಗಿಲ್ಲ. ಇಳಿಜಾರಿನಲ್ಲಿ ಹಾಕಿರುವ ಗೇಬಿಯನ್ ವಾಲ್ ಸಹ ಗುಣಮಟ್ಟದಲ್ಲಿ ಇಲ್ಲದೇ ಬಹುತೇಕ ತಡೆಗೋಡೆಗಳು ಕುಸಿದಿವೆ. ಕಾಮಗಾರಿ ಮಾಡುವ ಮುನ್ನ ಮಣ್ಣಿನ ಗುಣಮಟ್ಟವನ್ನೇ ಪರೀಕ್ಷೆ ನಡೆಸಿದಂತೆ ಕಾಣುತ್ತಿಲ್ಲ’ ಎಂದು ಅತೃಪ್ತಿ ವ್ಯಕ್ತಪಡಿಸಿದರು.

‘ಮಳೆಗಾಲ ಮುಗಿಯುವ ತನಕ ಕಾಯದೇ, ಹೆಚ್ಚಿನ ಭೂಮಿ ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಕೂಡಲೇ ಪ್ರಾರಂಭಿಸಿ. 2017 ರಿಂದ 2024ರ ವರೆಗೆ 45 ಕಿ.ಮೀ. ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸದೇ, ಈ ರೀತಿ ಅವೈಜ್ಞಾನಿಕವಾಗಿ ಮಾಡುತ್ತಿರುವುದು ಸರಿಯಲ್ಲ’ ಎಂದು ರಾಷ್ಟ್ರೀಯ ಹೆದ್ದಾರಿ ಅಧಿಕಾರಿ ವಿಲಾಸ್ ಅವರಿಗೆ ಹೇಳಿದರು.

ಕೆಸರಿನಲ್ಲಿ ಸಿಎಂ ಹೆಜ್ಜೆ

ಕೆಸರಿನಲ್ಲಿಯೇ ಹೆಜ್ಜೆ ಹಾಕಿದ ಮುಖ್ಯಮಂತ್ರಿ ಗುಡ್ಡ ಕುಸಿತದ ಪ್ರಾರಂಭದ ಸ್ಥಳದಿಂದ ಸುಮಾರು 300 ಅಡಿ ಉದ್ದಕ್ಕೂ ಮೊಣಕಾಲು ಹೂತುಕೊಳ್ಳುತ್ತಿದ್ದ ಕೆಸರಿನಲ್ಲಿಯೇ ಪಂಚೆ ಮೇಲೆತ್ತುತ್ತ, ಸ್ಥಳ ಪರಿಶೀಲನೆ ನಡೆಸಿದರು.

‘ಬೇಗ ಬೇಗ ಹೋಗಿ ಮೇಲಿಂದ ಮಣ್ಣು ಜಾರಿ ಬಂದ್ರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಗುಡ್ಡದ ಕಡೆ ನೋಡಿಕೊಂಡು ಹೆಜ್ಜೆ ಹಾಕಿದರು. ಎಸ್‌ಡಿಆರ್‌ಎಫ್ ಯೋಧರೊಂದಿಗೆ ಗುಡ್ಡಕುಸಿತ ಸಮಸ್ಯೆ ಬಗ್ಗೆ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.