ಮಂಗಳವಾರ, ಏಪ್ರಿಲ್ 20, 2021
24 °C
ಕಸ್ತೂರಿ ರಂಗನ್‌ ವರದಿ ಬಗ್ಗೆ ಮಲೆನಾಡಿಗರಿಗೆ ಬೇಡ ಆತಂಕ: ಡಿಎಫ್‌ಒ ಡಾ. ಬಸವರಾಜು ಹೇಳಿಕೆ

‘ಊಹಾಪೋಹಕ್ಕೆ ಕಿವಿಗೊಡಬೇಡಿ, ಒಕ್ಕಲೆಬ್ಬಿಸುವುದಿಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಕಲೇಶಪುರ: ‘ಕನ್ಯಾಕುಮಾರಿಯಿಂದ ಗುಜರಾತ್‌ವರೆಗೂ 22 ಪ್ರಮುಖ ನದಿಗಳು, 180ಕ್ಕೂ ಹೆಚ್ಚು ಉಪನದಿಗಳು, ಝರಿ, ಜಲಪಾತ, ಹಳ್ಳ, ಕೊಳ್ಳ ಸಸ್ಯ ಹಾಗೂ ಜೀವ ಸಂಕುಲಗಳ ಮೂಲವಾಗಿರುವ ಪಶ್ಚಿಮಘಟ್ಟ ಸಂರಕ್ಷಣೆ ಮಾಡುವ ಉದ್ದೇಶ ಹೊಂದಿರುವ ಕಸ್ತೂರಿ ರಂಗನ್ ವರದಿ ಬಗ್ಗೆ ಸ್ಥಳೀಯವಾಗಿ ಸಾಕಷ್ಟು ಗೊಂದಲ ಹಾಗೂ ತಪ್ಪು ಮಾಹಿತಿ ಪ್ರಚಾರದಲ್ಲಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕೆ.ಎನ್‌. ಬಸವರಾಜು ಹೇಳಿದರು.

ಇಲ್ಲಿಯ ಎಚ್‌ಡಿಪಿಇ ಸಭಾಂಗಣ ದಲ್ಲಿ ಶನಿವಾರ ‘ಕಸ್ತೂರಿ ರಂಗನ್‌ ವರದಿ ಸಾರಾಂಶ, ಸಾಧಕ– ಬಾಧಕಗಳ ಬಗ್ಗೆ ಹಾಗೂ ಕಾಡಾನೆ ಸಮಸ್ಯೆ’ ಬಗ್ಗೆ ಏರ್ಪಡಿಸಿದ್ದ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಜನರನ್ನು ಒಕ್ಕಲೆಬ್ಬಿಸುವ ಅಥವಾ ಸ್ಥಳಾಂತರ ಮಾಡುವ ಪ್ರಸ್ತಾವ ವರದಿಯಲ್ಲಿ ಇಲ್ಲ. ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ‌ಇರುವ ವೈವಿಧ್ಯತೆಯನ್ನು ಸಂ‌ರಕ್ಷಣೆ ಮಾಡುವುದೇ ಹೊರತು. ಈ ಪ‍್ರದೇಶದಲ್ಲಿ ಬೆಳೆಯುತ್ತಿರುವ ಬೆಳೆ ನಿಷೇಧ ಇಲ್ಲ. ರಾತ್ರಿ 8 ಗಂಟೆ ನಂತರ ಮನೆಗಳ ವಿದ್ಯುತ್ ದೀಪ ಬೆಳಗಿಸುವಂತಿಲ್ಲ ಎಂಬುದಾಗಲಿ, ಕಾಫಿ ತೋಟಗಳಲ್ಲಿ ಬೆಳೆದಿರುವ ಸಿಲ್ವರ್‌ ಓಕ್‌ ಮತ್ತಿತರ ಕಾಡು ಜಾತಿ ಮರಗಳನ್ನು ಕಟಾವು ಮಾಡುವಂತಿಲ್ಲ ಎಂಬುದಾಗಲಿ ವರದಿಯಲ್ಲಿಲ್ಲ. ಭತ್ತ, ಕಾಫಿ ಹಾಗೂ ಇತರ ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಹಾಕುವಂತಿಲ್ಲ ಎಂಬುದು ಸುಳ್ಳು. ಹೊಸದಾಗಿ ಮನೆ ಅಥವಾ ಇತರೆ ಯಾವುದೇ ಕಟ್ಟಡಗಳನ್ನು ಕಟ್ಟುವಂತಿಲ್ಲ ಎಂಬುದು ಸಹ ಸುಳ್ಳು. 20 ಸಾವಿರ ಚದುರ ಅಡಿಯಿಂದ 1,50,000 ಚದರ ಅಡಿ ಕಟ್ಟಡಗಳ ಅನುಮತಿ ಪಡೆಯುವುದು ಕಡ್ಡಾಯ ಅಷ್ಟೇ’ ಎಂದು ಹೇಳಿದರು.

‘ತಾಲ್ಲೂಕನ್ನೇ ಪರಿಸರ ಸೂಕ್ಷ್ಮವಲಯ ಎಂದು ಪರಿಗಣಿಸಿಲ್ಲ, ಗುರುತು ಮಾಡಿರುವ ಗ್ರಾಮಗಳು ಮಾತ್ರ. ತಾಲ್ಲೂಕಿನಲ್ಲಿ 34 ಗ್ರಾಮಗಳನ್ನು ಮಾತ್ರ ಗುರುತಿಸಲಾಗಿದೆ. ಹೋಂ ಸ್ಟೇ, ರೆಸಾರ್ಟ್‌ ನಡೆಸಲು ಅನುಮತಿ ಕಡ್ಡಾಯ ಹೊರತು ನಿಷೇಧ ಇಲ್ಲ’ ಎಂದರು.

ಉಪವಿಭಾಗಾಧಿಕಾರಿ ಗಿರೀಶ್ ನಂದನ್ ಮಾತನಾಡಿ, ‘ತಮ್ಮ ಜಮೀನು ಗಳಿಗೆ ಕಾಡಾನೆಗಳು ಬರದಂತೆ ಪ್ರತಿ ರೈತರು ಪ್ರತ್ಯೇಕವಾಗಿ ಸೋಲಾರ್‌ ಬೇಲಿ ನಿರ್ಮಾಣ ಮಾಡಿಕೊಳ್ಳುವುದಕ್ಕಿಂತ ಗ್ರಾಮಸ್ಥರೆಲ್ಲರೂ ಸೇರಿ ಒಟ್ಟಿಗೆ ಸೋಲಾರ್ ಬೇಲಿ ನಿರ್ಮಿಸಿಕೊಳ್ಳುವು ದರಿಂದ ಖರ್ಚು ಕಡಿಮೆ ಹಾಗೂ ಸಮಸ್ಯೆ ಬಗೆಹರಿಯುತ್ತದೆ’ ಎಂದರು.

‘ಕಾಡಾನೆ ಸಮಸ್ಯೆಗೆ ನಾನಾ ಕಾರಣ ಇವೆ. ನಾವು ರೈತ ಕುಟುಂಬ ದಿಂದಲೇ ಬಂದಿರುವುದ ರಿಂದ ಸಮಸ್ಯೆ ಆಳ ತಿಳಿದಿದೆ. ಆದರೆ, ಕಾನೂನಿನ ಚೌಕಟ್ಟಿನ ಒಳಗೆ ಕೆಲಸ ಮಾಡಬೇಕಾಗಿರುವುದ ರಿಂದ ಸಹಕಾರ ಅಗತ್ಯ’ ಎಂದರು.

ರಾಜ್ಯ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಡಾ. ಎಚ್‌.ಟಿ. ಮೋಹನ್‌ಕುಮಾರ್, ಎಸಿಎಫ್‌ ಲಿಂಗರಾಜು, ತಹಶೀಲ್ದಾರ್‌ ಜೈಕುಮಾರ್, ಜಿಲ್ಲಾ ಪ್ಲಾಂಟರ್ಸ್‌ ಸಂಘದ ಅಧ್ಯಕ್ಷ ತೋ.ಚ. ಅನಂ‌ತ ಸುಬ್ಬರಾಯ, ಕಾಫಿ ಬೆಳೆಗಾರ ಸುರೇಂದ್ರ, ಕೆಜಿಎಫ್‌ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ, ಕೋಗರವಳ್ಳಿ ಸಂತೋಷ್‌, ಕಿತ್ತಲೆಮನೆ ರೋಹಿತ್ ಮಾತನಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.