ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇ–ಸಂಜೀವಿನಿ: 26 ಸಾವಿರ ಮಂದಿಗೆ ಆರೋಗ್ಯ ಸೇವೆ

ಹಾಸನ ಜಿಲ್ಲೆ ನಾಲ್ಕನೇ ಸ್ಥಾನ: ರೋಗಿಗಳಿಗೆ ಆ್ಯಪ್‌ನಲ್ಲಿ ವೈದರ ಸಲಹೆ
Published : 6 ಫೆಬ್ರುವರಿ 2021, 19:30 IST
ಫಾಲೋ ಮಾಡಿ
Comments

ಹಾಸನ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಇ –ಸಂಜೀವಿನಿ ಟೆಲಿಮೆಡಿಸಿನ್‌ ಸೇವೆಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ದೊರೆತಿದ್ದು, ಈ ಸೇವೆ ಬಳಕೆಯಲ್ಲಿ ಹಾಸನ ನಾಲ್ಕನೇ ಸ್ಥಾನದಲ್ಲಿದೆ.

ಕೋವಿಡ್‌ ಸಂದರ್ಭದಲ್ಲಿ ಆಸ್ಪತ್ರೆ ಬರಲು ಆಗದಿದ್ದವರಿಗೆ ವೈದ್ಯರ ಸಲಹೆ ಲಭ್ಯವಾಗಬೇಕೆಂಬ ಉದ್ದೇಶದಿಂದ ಜಾರಿಗೊಳಿಸಿರುವ ಇ –ಸಂಜೀವಿನಿ ಯೋಜನೆಯಲ್ಲಿ ಒಟ್ಟು 26,650 ಮಂದಿ ಮನೆಯಲ್ಲೇ ಕುಳಿತು ವೈದ್ಯರಿಂದ ಆರೋಗ್ಯ ಸೇವೆ ಪಡೆದುಕೊಂಡಿದ್ದಾರೆ.‌

ಟೆಲಿಮೆಡಿಸಿನ್‌ ಸೇವೆ ಎರಡು ವಿಧದಲ್ಲಿ ಲಭ್ಯವಿದೆ. ಮೊದಲನೆಯದ್ದು ವೈದ್ಯರಿಂದ ವೈದ್ಯರಿಗೆ (ಇ–ಸಂಜೀವಿನಿ), ಎರಡನೇಯದ್ದು ರೋಗಿಯಿಂದ ವೈದ್ಯರಿಗೆ (ಇ–ಸಂಜೀವಿನಿ ಒಪಿಡಿ).

ಈ ಯೋಜನೆಯು ರಾಷ್ಟ್ರೀಯ ದೂರವಾಣಿ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ. ಮಧುಮೇಹ, ರಕ್ತದೊತ್ತಡ, ಸಾಮಾನ್ಯ ಜ್ವರ, ಶೀತ ಸೇರಿದಂತೆ ವಿವಿಧ ಬಗೆಯ ಕಾಯಿಲೆಗೆ ಸಂಬಂಧಿಸಿದಂತೆ ವೈದ್ಯರು ಮೊಬೈಲ್‌ ಮೂಲಕವೇ ಪರಿಹಾರ ನೀಡುತ್ತಿದ್ದಾರೆ. ಸಾರ್ವಜನಿಕರು ಮನೆಯಲ್ಲಿಯೇ ಕುಳಿತು ಮೊಬೈಲ್‌ ಮೂಲಕ ಸಾಮಾನ್ಯ ಕಾಯಿಲೆ, ಫಾಲೋಅಪ್‌ ಚಿಕಿತ್ಸೆ, ತಜ್ಞ ವೈದ್ಯರ ಸಲಹೆ ಪಡೆಯಬಹುದು.

ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆ (ಹಿಮ್ಸ್)ಯ ವೈದ್ಯರು ಸೇರಿ ಜಿಲ್ಲೆಯಲ್ಲಿ 120 ವೈದ್ಯರು ಇ ಸಂಜೀವಿನಿ ಆ್ಯಪ್‌ ಸೇವೆಯಲ್ಲಿ ತೊಡಗಿದ್ದಾರೆ. ‌ನಿತ್ಯ 700ಕ್ಕೂ ಹೆಚ್ಚು ಕರೆಗಳು ಬರುತ್ತಿವೆ.

ಮೊಬೈಲ್ ಪ್ಲೇ ಸ್ಟೋರ್‌ ಅಥವಾ ಕಂಪ್ಯೂಟರ್‌ ಗೂಗಲ್‌ ತೆರಳಿ ಇ ಸಂಜೀವಿನಿ ಒಪಿಡಿ ಆಯ್ಕೆ ಮಾಡಿಕೊಳ್ಳಬೇಕು. ರೋಗಿಯ ಮೊಬೈಲ್‌ ನಂಬರ್ ನೀಡಿ, ಒಟಿಪಿ ಪಡೆದು ನೋಂದಣಿ ಮಾಡಿಕೊಳ್ಳಬೇಕು. ನಂತರ ರೋಗಿಯ ಪ್ರಾಥಮಿಕ ಮಾಹಿತಿ ನಮೂದಿಸಿ ಕಾಯಿಲೆ ವಿವಿಧ ಆಯ್ಕೆ ಮಾಡಿದ ಕೂಡಲೇ ರೋಗಿ ಐಡಿ, ಟೋಕನ್‌ ಸಂಖ್ಯೆ ಬರಲಿದೆ. ಅದನ್ನು ಬಳಸಿ ಲಾಗ್‌ ಇನ್‌ ಆದರೆ ಆ್ಯಪ್‌ ಅಥವಾ ವೆಬ್‌ಪುಟದಲ್ಲೆ ವಿಡಿಯೊ ಕಾಲ್‌ ಮೂಲಕ ವೈದ್ಯರನ್ನು ಸಂಪರ್ಕಿಸಬಹುದು.

ಆರೋಗ್ಯ ವೃದ್ಧಿಗೆ ತೆಗೆದುಕೊಳ್ಳಬೇಕಿರುವ ಅಗತ್ಯ ಔಷಧ ಹೇಳುತ್ತಾರೆ. ಆಸ್ಪತ್ರೆಗೆ ಭೇಟಿ ನೀಡಬೇಕಾದ ತುರ್ತು ಇದ್ದರೆ ಹಾಜರಾಗಬೇಕಿರುವ ದಿನಾಂಕವನ್ನು ತಿಳಿಸುತ್ತಾರೆ. ಪ್ರತಿದಿನ ಬೆಳಗ್ಗೆ 9ರಿಂದ ರಾತ್ರಿ 9ರ ವರೆಗೆ ವೈದ್ಯರು ಲಭ್ಯ ಇರುತ್ತಾರೆ.

‘ರೋಗಿಗಳು ಮನೆಯಲ್ಲಿಯೇ ಕುಳಿತು ತಜ್ಞ ವೈದ್ಯರನ್ನು ಸಂಪರ್ಕಿಸಬಹುದು. ನಾನು ಸಹ ನಿತ್ಯ ಎರಡು, ಮೂರು ಕರೆಗಳಿಗೆ ಉತ್ತರಿಸುತ್ತೇನೆ. ಕೆಲಸಕ್ಕೆ ಹೋದವರು ಸಂಜೆ ಮನೆಗೆ ಬಂದ ಬಳಿಕ ಬಿಡುವಾಗುತ್ತಾರೆ. ಅದಕ್ಕಾಗಿ ಬೆಳಗ್ಗೆ 9 ರಿಂದ ರಾತ್ರಿ 9 ರವರೆಗೂ ಸೇವೆ ವಿಸ್ತರಿಸಲಾಗಿದೆ’ ಎಂದು ಜಿಲ್ಲಾ ತಾಯಿ ಮತ್ತು ಮಕ್ಕಳ ಆರೋಗ್ಯಾಧಿಕಾರಿ (ಆರ್‌ಸಿಎಚ್‌) ಹಾಗೂ ಕೋವಿಡ್‌ ವ್ಯಾಕ್ಸಿನ್‌ ನೋಡಲ್‌
ಅಧಿಕಾರಿ ಕೆ.ಪಿ.ಕಾಂತರಾಜು ತಿಳಿಸಿದರು.

‘ಕೋವಿಡ್‌ ಲಸಿಕೆ ವಿತರಣೆ ಅಭಿಯಾನದಲ್ಲಿ ಜಿಲ್ಲೆ ಐದನೇ ಸ್ಥಾನದಲ್ಲಿದೆ. ಹೆಸರು ನೋಂದಾಯಿಸಿರುವ ಫಲಾನುಭವಿಗಳಿಗೆ ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ ಲಸಿಕೆ ನೀಡಲಾಗುತ್ತಿದೆ. ಪಲ್ಸ್‌ ಪೋಲಿಯೊದಲ್ಲಿ ಜಿಲ್ಲೆಯಲ್ಲಿ ಶೇಕಡಾ 108 ಗುರಿ ಸಾಧಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT