ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಆಯೋಗ ಸರ್ಕಾರದ ಕೈಗೊಂಬೆ: ರೇವಣ್ಣ

ಆರ್‌ಆರ್‌ ನಗರ, ಶಿರಾ ಕ್ಷೇತ್ರದಲ್ಲಿ ಹಣ ಹಂಚಿಕೆ: ಶಾಸಕ ಎಚ್‌.ಡಿ. ರೇವಣ್ಣ ಆರೋಪ
Last Updated 9 ನವೆಂಬರ್ 2020, 14:40 IST
ಅಕ್ಷರ ಗಾತ್ರ

ಹಾಸನ: ಆರ್‌.ಆರ್‌.ನಗರ ಮತ್ತು ಶಿರಾ ಕ್ಷೇತ್ರದ ಉಪ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳು ಹಣ ಹಂಚಿಕೆ ಮಾಡಿದರೂ ಚುನಾವಣಾ ಆಯೋಗ ಕ್ರಮ ಕೈಗೊಳ್ಳಲಿಲ್ಲ. ಚುನಾವಣಾ ಆಯೋಗ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ ಎಂದು ಶಾಸಕ ಎಚ್.ಡಿ.ರೇವಣ್ಣ ಆರೋಪಿಸಿದರು.

ರಾಜ್ಯ ಚುನಾವಣಾ ಆಯೋಗ ಒಂದು ರಾಜಕೀಯ ಪಕ್ಷದ ಹಿಡಿತಕ್ಕೆ ಸಿಲುಕಿ ನಲುಗಿತ್ತಿದೆ. ಶಿರಾ ಕ್ಷೇತ್ರದಲ್ಲಿ ಬಹಿರಂಗವಾಗಿಯೇ ಹಣ ಹಂಚಿಕೆಯಾಗಿದೆ. ಕಾನೂನು ಪ್ರಕಾರ ಆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನು ಅನರ್ಹಗೊಳಿಸಬೇಕು. ಹಣ ಹಂಚಿಕೆ ಮಾಡುತ್ತಿರುವ ದೃಶ್ಯಗಳು ಟಿ.ವಿ ವಾಹಿನಿಗಳಲ್ಲಿ ಪ್ರಸಾರವಾದರೂ ಯಾರ ವಿರುದ್ಧವೂ ಕ್ರಮ ಜರುಗಿಸಿಲ್ಲ. ಈ ಬಗ್ಗೆ ಕೇಂದ್ರ ಚುನಾವಾಣಾ ಆಯೋಗಕ್ಕೂ ದೂರು ಸಲ್ಲಿಸಿದರೂ ಪ್ರಯೋಜನವಾಗಲಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

ಗುಪ್ತಚರ ಇಲಾಖೆ ವರದಿಯ ಪ್ರಕಾರ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಶಿರಾ ಹಾಗೂ ರಾಜರಾಜೇಶ್ವರಿ ಕ್ಷೇತ್ರದಲ್ಲಿ 25 ಸಾವಿರ ಮತಗಳ ಅಂತರದಲ್ಲಿ ಗೆಲುವ ಸಾಧಿಸುತ್ತಾರೆ ಎಂದು ಸಿ.ಎಂ. ಹೇಳಿದ್ದಾರೆ. ಚುನಾವಣೆ ಫಲಿತಾಂಶ ಹೊರಬೀಳುವ ಮುನ್ನವೇ ಇಷ್ಟು ನಿಖರವಾಗಿ ಹೇಳುವಾಗ ಹಣ ಚಲಾವಣೆ ಎಷ್ಟರ ಮಟ್ಟಿಗೆ ಆಗಿರಬಹುದು ಎಂದು ಊಹಿಸಬೇಕಿದೆ. ಚುನಾವಣೆ ಸಮೀಕ್ಷೆ ಮಾಡುವುದು ಗುಪ್ತಚರ ಇಲಾಖೆಯ ಕೆಲಸವೇ ಎಂದು ಪ್ರಶ್ನಿಸಿದರು.

ಆಡಳಿತ ಯಂತ್ರ ಬಳಸಿಕೊಂಡು ಅಕ್ರಮ ನಡೆಸಿದರೂ ಏನು ಕ್ರಮ ಕೈಗೊಂಡಿಲ್ಲ.ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗಗಳು ಸರ್ಕಾರದ ಹಿಡಿತದಲ್ಲಿ ಕೆಲಸ ಮಾಡುವುದಾದರೆ, ಇಷ್ಟೊಂದು ಹಣ ಖರ್ಚು ಮಾಡಿ ಚುನಾವಣೆ ಏಕೆ ಮಾಡಬೇಕು? ಎಲ್ಲಾ ಕಡೆ ನಾಮ ನಿರ್ದೇಶನ ಮಾಡಲಿ. ರಷ್ಯಾ ದೇಶದಲ್ಲಿ ಅಜೀವ ಪರ್ಯಂತ ಅಧ್ಯಕ್ಷ ಕಾನೂನು ರೂಪಿಸಿರುವಂತೆ ಮುಂದಿನ ದಿನಗಳಲ್ಲಿ ಭಾರತದಲ್ಲೂ ಅದೇ ರೀತಿ ಕಾನೂನು ತಂದರೂ ಅಚ್ಚರಿ ಇಲ್ಲ ಎಂದು ವ್ಯಂಗ್ಯವಾಡಿದರು.

ಸೋಲು, ಗೆಲುವು ಸಮಾನವಾಗಿ ಸ್ವೀಕರಿಸುತ್ತೇವೆ. ಎರಡು ಕ್ಷೇತ್ರದಲ್ಲಿ ಜೆಡಿಎಸ್‌ ಸೋಲು ಅನುಭವಿಸಿದರೆ ಹೆದರಿ ರಾಜಕೀಯ ಬಿಟ್ಟು ಓಡಿ ಹೋಗುವುದಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಮತ್ತು ಮಂಡ್ಯದಲ್ಲಿ ಜೆಡಿಎಸ್‌ ಅಭ್ಯರ್ಥಿ ಸೋಲಿಸಲು ಕಾಂಗ್ರೆಸ್ ಮತ್ತು ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದ್ದವು. ಉದ್ದೇಶಪೂರ್ವಕವಾಗಿಯೇ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತು ಎಂದರು.

ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಉನ್ನತ ಮಟ್ಟದ ಅಧಿಕಾರಿಗಳು ಸರ್ಕಾರದ ಕೈಗೊಂಬೆಯಂತೆ ಕೆಲಸ
ಮಾಡುತ್ತಿದ್ದಾರೆ. ಸರ್ಕಾರಿ ಆಸ್ತಿಗಳನ್ನು ಉಳಿಸಿಕೊಳ್ಳುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಸರ್ಕಾರದ ಅನುಕೂಲಕ್ಕೆ ತಕ್ಕಂತೆ ದಾಖಲೆಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ದೂರಿದರು.

ಕೋವಿಡ್‌ ನೆಪ ಹೇಳಿ ಗ್ರಾಮ ಪಂಚಾಯಿತಿ ಚುನಾವಣೆ ಮುಂದೂಡಲಾಗುತ್ತಿದೆ. ಒಂದು ವೇಳೆ ಚುನಾವಣೆ ನಡೆದರೆ ಬಿಜೆಪಿಗೆ ಹಿನ್ನೆಡೆ ಆಗುತ್ತದೆ ಎಂಬ ಭಯ ಇರಬಹುದು. ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದು ಎರಡು ವರ್ಷ ಕಳೆದರೂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಿರಲಿಲ್ಲ. ಸರ್ಕಾರಿ ವಕೀಲರೂ ನ್ಯಾಯಾಲಯಕ್ಕೆ ಸರಿಯಾದ ಮಾಹಿತಿ ನೀಡುವಲ್ಲಿ ವಿಫಲರಾಗಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT