ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗೃಹಜ್ಯೋತಿ ಯೋಜನೆ ಜೊತೆಗೆ ವಿದ್ಯುತ್ ಶುಲ್ಕ ಇಳಿಕೆ: ಡಿ.ಕೆ.ಶಿವಕುಮಾರ್‌

Published 1 ಮಾರ್ಚ್ 2024, 9:48 IST
Last Updated 1 ಮಾರ್ಚ್ 2024, 9:48 IST
ಅಕ್ಷರ ಗಾತ್ರ

ಹಾಸನ: ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆಯಲ್ಲಿ 1.56 ಕೋಟಿ ಜನರಿಗೆ ಶೂನ್ಯ ವಿದ್ಯುತ್‌ ಬಿಲ್‌ ನೀಡಲಾಗುತ್ತಿದೆ. ಅದಾಗ್ಯೂ ಈಗ ವಿದ್ಯುತ್‌ ಶುಲ್ಕವನ್ನು ಇಳಿಸಲಾಗಿದೆ. ಇದಕ್ಕೆ ಪ್ರತಿಪಕ್ಷದವರು ಏನು ಹೇಳುತ್ತಿದ್ದಾರೆ ಎಂದು ರಾಜ್ಯದ ಜನರು ಪ್ರಶ್ನಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ನಂಬಿಕೆಗಿಂತ ದೊಡ್ಡ ಗುಣವಿಲ್ಲ ಎಂದು ಹೇಳುತ್ತಾರೆ. ಹಾಸನ ಜಿಲ್ಲೆಯ ಜನರ ವಿಶ್ವಾಸಕ್ಕಾಗಿ ಹಿಮಾಚಲ ಪ್ರದೇಶದಿಂದ ರಾತ್ರಿ ಪ್ರವಾಸ ಮಾಡಿ, ಇಲ್ಲಿಗೆ ಬಂದಿದ್ದೇನೆ. ಪ್ರಜಾಧ್ವನಿ ಯಾತ್ರೆಯಲ್ಲೂ ಇದೇ ರೀತಿ ಬೆಂಬಲ ನೀಡಿದ್ದೀರಿ. ನೀವು ನೀಡಿದ ಮತ 5 ಗ್ಯಾರಂಟಿ ನೀಡಲು ಶಕ್ತಿ ಕೊಟ್ಟಿದೆ ಎಂದು ಹೇಳಿದರು.

ಪ್ರಜಾಧ್ವನಿ ಯಾತ್ರೆಯಲ್ಲಿ ಗೃಹಜ್ಯೋತಿ ಯೋಜನೆ ಜಾರಿಗೊಳಿಸುವುದಾಗಿ ಹೇಳಿದ್ದೇವು. ಆದರೆ, ಇದನ್ನು ಸಹಿಸದೇ ಬಿಜೆಪಿಯವರು ತಮ್ಮ ಅವಧಿಯಲ್ಲಿ ವಿದ್ಯುತ್ ದರ ಏರಿಸಿ, ಕಾಂಗ್ರೆಸ್‌ ಸರ್ಕಾರದ ಮೇಲೆ ಗೂಬೆ ಕೂರಿಸಲು ಯತ್ನಿಸಿದರು ಎಂದರು.

ನಾನು ಯಾವತ್ತು ದೇವರನ್ನು ನಂಬುತ್ತೇನೆ. ದೇವರು ವರವನ್ನೂ ಕೊಡುವುದಿಲ್ಲ, ಶಾಪವನ್ನೂ ಕೊಡುವುದಿಲ್ಲ. ಅವಕಾಶ ಕೊಡುತ್ತಾನೆ. ಹಾಸನಾಂಬೆ ತಾಯಿಯನ್ನು ನೆನೆಯುತ್ತೇನೆ. ಕಳೆದ ವರ್ಷದ ಲಕ್ಷಾಂತರ ಜನರು ಹಾಸನಾಂಬೆ ದೇವಿಯ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿತ್ತು.

ಧರ್ಮ ಇರಬೇಕು. ಆದರೆ, ರಾಜಕಾರಣದಲ್ಲಿ ಧರ್ಮ ಇರಬಾರದು. ದೊಡ್ಡ ದೇಗುಲಗಳ ಶೇ 10 ರಷ್ಟು ಹಣವನ್ನು ಸಣ್ಣ ದೇಗುಲಗಳ ಅಭಿವೃದ್ಧಿ, ಅರ್ಚಕರಿಗೆ ಅನುಕೂಲ ಮಾಡಿಕೊಡಲು ಮಸೂದೆ ಮಂಡಿಸಲಾಗಿತ್ತು. ದೇವಸ್ಥಾನಗಳು ಬಿಜೆಪಿಯವರ ಆಸ್ತಿಯೇ? ದೇವಸ್ಥಾನಗಳ ಅಭಿವೃದ್ಧಿಗೆ ಮಸೂದೆ ತಂದರೆ ಅದನ್ನು ವಿರೋಧಿಸುತ್ತೀರಲ್ಲ? ಎಚ್‌.ಡಿ. ರೇವಣ್ಣ ಅವರು ದೇವಸ್ಥಾನಗಳಿಗೆ ಹೋಗುತ್ತಾರೆ, ಆದರೆ, ಬಿಜೆಪಿಯವರ ಜೊತೆಗೆ ಸೇರಿ ವಿರೋಧ ಮಾಡುತ್ತಾರೆ. ಇದನ್ನು ಜನರು ಪ್ರಶ್ನಿಸಬೇಕು ಎಂದು ಹೇಳಿದರು.

₹ 1.20 ಲಕ್ಷ ಕೋಟಿ ಅನುದಾನವನ್ನು ಅಭಿವೃದ್ಧಿಗೆ ಬಿಡುಗಡೆ ಮಾಡಿದ್ದೇವೆ. ಬೇಲೂರು, ಸಕಲೇಶಪುರ, ಹಾಸನ, ಚನ್ನರಾಯಪಟ್ಟಣ ಶಾಸಕರು ಕೆಲವೊಂದು ಬೇಡಿಕೆಗಳನ್ನು ಮಂಡಿಸಿದ್ದಾರೆ. ಶಿವಲಿಂಗೇಗೌಡರದ್ದು ಬಿಡಿ ಬಂಪರ್‌ ಹೊಡಿತಿದೆ ಎಂದರು.

ಎತ್ತಿನಹೊಳೆ ಯೋಜನೆಯಿಂದ ನೀರನ್ನು ಈಚೆಗೆ ತರಲು ಕಾಂಗ್ರೆಸ್‌ ಸರ್ಕಾರ ಬದ್ಧವಾಗಿದೆ. ಕೆರೆಗಳಿಗೆ ನೀರು ಹರಿಸುವ ಮೂಲಕ ರೈತರ ಬದುಕು ಹಸನಾಗಿಲು ಕೆಲಸ ಮಾಡುತ್ತಿದೆ ಎಂದರು.

ಶಾಸಕರಾದ ಸುರೇಶ್, ಸಿಮೆಂಟ್ ಮಂಜು ಅವರೆಲ್ಲ ಕೆಲಸಗಳ ಪಟ್ಟಿ ನೀಡಿದ್ದಾರೆ. ಅವುಗಳನ್ನು ನಾನೇ ಸ್ವತಃ ಬಂದು ಈಡೇರಿಸುವ ಕೆಲಸ ಮಾಡುತ್ತೇವೆ. ಆದರೆ, ನೀವೂ ಉಪಕಾರ ಸ್ಮರಣೆ ಮಾಡುವ ಗುಣ ಬೆಳೆಸಿಕೊಳ್ಳಬೇಕು ಎಂದರು.

ಶಕ್ತಿ ಯೋಜನೆಯ ಮೂಲಕ ಮಹಿಳೆಯರು ಉಚಿತ ಪ್ರಯಾಣಕ್ಕೆ ಅನುಕೂಲ ಮಾಡಲಾಗಿದೆ. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರೇ ಮುಖ್ಯಮಂತ್ರಿಗೆ ಕರೆ ಮಾಡಿ ತಿಳಿಸಿದ್ದಾರೆ. ದೇವಸ್ಥಾನಗಳ ಹುಂಡಿಗಳು ತುಂಬುತ್ತಿವೆ. ರಾಜ್ಯದೆಲ್ಲೆಡೆ ವ್ಯಾಪಾರ ಹೆಚ್ಚಾಗಿದ್ದು, ವರ್ತಕರೂ ಖುಷಿಯಾಗಿದ್ದಾರೆ ಎಂದರು.

ನಮಗೆ ಜಾತಿ ಇಲ್ಲ, ನೀತಿ ಮೇಲೆ ಕೆಲಸ ಮಾಡುತ್ತೇವೆ. ದೇವರ ಹೆಸರು ಹೇಳಿಕೊಂಡು ಕೆಲಸ ಮಾಡುವುದಿಲ್ಲ. ಬದುಕನ್ನು ಸುಧಾರಿಸುವ ಕೆಲಸ ಮಾಡುತ್ತೇವೆ ಎಂದರು.

₹128 ಕೋಟಿ ಸಹಕಾರ ಸಂಘಗಳ ಸಾಲವನ್ನು ಮನ್ನಾ ಮಾಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ ಎಂದರು.

ಐದು ಬೆರಳು ಸೇರಿ ಕೈ ಗಟ್ಟಿಯಾಯಿತು. ಐದು ಗ್ಯಾರಂಟಿ ಸೇರಿ ಕೈ ಸರ್ಕಾರ ಗಟ್ಟಿಯಾಯಿತು. ಇದನ್ನು ನೋಡಿ ಕುಮಾರಸ್ವಾಮಿ ಅವರು ಬಿಜೆಪಿಯನ್ನು ತಬ್ಬಿಕೊಂಡಿದ್ದಾರೆ. ನಿಮ್ಮ ಮೇಲೆ ವಿಶ್ವಾಸವಿದೆ. ನೀವೆಲ್ಲ ಸೇರಿ, ನಮ್ಮ ಕೈಹಿಡಿಯುತ್ತೀರಿ ಎನ್ನುವ ನಂಬಿಕೆ ಇದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT