ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ವಲಸಿಗರಿಗೆ ಉದ್ಯೋಗ ಖಾತ್ರಿ ಆಸರೆ

ನಾಲ್ಕು ತಿಂಗಳಲ್ಲಿ 27 ಲಕ್ಷ ಮಾನವ ದಿನ ಸೃಜನೆ
Last Updated 15 ಸೆಪ್ಟೆಂಬರ್ 2020, 15:06 IST
ಅಕ್ಷರ ಗಾತ್ರ

ಹಾಸನ: ಕೊರೊನಾ ಲಾಕ್‌ಡೌನ್‌ನಿಂದ ಉದ್ಯೋಗ ಕಳೆದುಕೊಂಡವರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ (ನರೇಗಾ) ಯೋಜನೆ ಆಸರೆಯಾಗಿದೆ. ನಗರದಿಂದ ಹಳ್ಳಿಗಳಿಗೆ ಮರಳಿದ ಸಾವಿರಾರು ಜನರು ಉದ್ಯೋಗ ಕಂಡುಕೊಳ್ಳುತ್ತಿರುವುದು ಇದಕ್ಕೆ ಪ್ರಮುಖ ಕಾರಣ.

ಲಾಕ್‌ಡೌನ್‌ ಜಾರಿಗೊಳಿಸಿದ್ದರಿಂದ ನಗರ ಪ್ರದೇಶಗಳಿಗೆ ವಲಸೆ ಹೋಗಿದ್ದ ಕಾರ್ಮಿಕರು ಬಹುತೇಕ ತಮ್ಮ ಹಳ್ಳಿಗಳಿಗೆ ಮರಳಿ ಬಂದಿದ್ದು, ನಾಲ್ಕು ತಿಂಗಳಲ್ಲಿ 27 ಲಕ್ಷ ಮಾನವ ದಿನ ಸೃಜನೆ ಮಾಡಲಾಗಿದೆ.

ಪ್ರಸಕ್ತ ಸಾಲಿನಲ್ಲಿ 55 ಲಕ್ಷ ಮಾನವ ದಿನ ಸೃಜನೆ ಗುರಿ ನೀಡಲಾಗಿತ್ತು. ಏಪ್ರಿಲ್‌ನಿಂದ ಈವರೆಗೆ 27 ಲಕ್ಷ ಮಾನವ ದಿನ ಸೃಜಿಸಲಾಗಿದೆ. ನವೆಂಬರ್ ಅಂತ್ಯಕ್ಕೆ ಶೇಕಡಾ 100 ರಷ್ಟು ಕೆಲಸ ಪೂರ್ಣಗೊಳಿಸುವ ಗುರಿ ನಿಗದಿಪಡಿಸಲಾಗಿದೆ.

ಗ್ರಾಮೀಣ ಪ್ರದೇಶದಲ್ಲಿ 64 ಸಾವಿರ ಕುಟುಂಬಗಳು, ಅಂದರೆ 1,22 ಲಕ್ಷ ಜನರು ಕೂಲಿ ಕೆಲಸದಲ್ಲಿ ತೊಡಗಿದ್ದಾರೆ. ಈ ಪೈಕಿ 60 ಸಾವಿರ ಎಸ್‌ಸಿ, ಎಸ್‌ಟಿ ಸಮುದಾಯದವರು ಇದ್ದಾರೆ. ₹50 ಕೋಟಿ ಕೂಲಿ ಕಾರ್ಮಿಕರಿಗೆ ಜಮೆ ಮಾಡಲಾಗಿದೆ.

ಕೃಷಿ ಹೊಂಡ, ಕಾಲುವೆ, ರಸ್ತೆ, ಕೃಷಿ ಜಮೀನಿನಲ್ಲಿ ಪೈಪ್‌ಲೈನ್‌ ಅಳವಡಿಕೆ, ಕೊಟ್ಟಿಗೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಏಪ್ರಿಲ್‌ನಿಂದ ಈವರೆಗೆ 1349 ದನದ ಕೊಟ್ಟಿಗೆ, 2827 ಬದುಗಳು, 1665 ಕೃಷಿ ಹೊಂಡ, 1369 ಕೆರೆ, ಕಟ್ಟೆ ಹೂಳೆತ್ತುವುದು, 56 ಕೊಳವೆ ಬಾವಿ ಪುನಶ್ಚೇತನ ಮಾಡಲಾಗಿದೆ. ಸಾಮಾಜಿಕ ಅರಣ್ಯ ಇಲಾಖೆ ಸಹಯೋಗದಲ್ಲಿ 6 ಲಕ್ಷ ಗಿಡಗಳನ್ನು ನೆಡಲಾಗಿದೆ.

ಬೆಂಗಳೂರು ನಗರ ಸೇರಿದಂತೆ ಹೊರ ರಾಜ್ಯಗಳಲ್ಲಿ ಜೀವನ ಕಂಡುಕೊಂಡಿದ್ದವರು ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಹುಟ್ಟೂರಿಗೆ ಮರಳಿದ್ದಾರೆ. ಕಟ್ಟಡ ನಿರ್ಮಾಣ, ಗಾರ್ಮೆಂಟ್ಸ್‌ ಕಾರ್ಖಾನೆಗಳು, ಮಾರುಕಟ್ಟೆ, ಹೋಟೆಲ್‌, ರೆಸ್ಟೋರೆಂಟ್‌, ರಿಯಲ್ ಎಸ್ಟೇಟ್‌ ವ್ಯಾಪಾರ ಹಾಗೂ ವಿವಿಧ ಕೆಲಸ ಮಾಡುತ್ತಿದ್ದವರು ನಗರ ತೊರೆದು ಹಳ್ಳಿಗಳಿಗೆ ಹಿಂತಿರುಗಿದ್ದಾರೆ. ಈವರೆಗೆ ಅಂದಾಜು ಲಕ್ಷಕ್ಕೂ ಅಧಿಕ ಮಂದಿ ವಾಪಸ್ ಆಗಿದ್ದಾರೆ. ಗ್ರಾಮಗಳಲ್ಲಿಯೂ ಕೆಲಸವಿಲ್ಲದೆ ಜೀವನ ನಿರ್ವಹಣೆ ಅಸಾಧ್ಯ ಎಂಬಂತ ಪರಿಸ್ಥಿತಿ ನಿರ್ಮಾಣವಾದ ಸಂದರ್ಭದಲ್ಲಿ ಉದ್ಯೋಗ ಖಾತ್ರಿ ಕೈ ಹಿಡಿದಿದೆ.

‘ಮಳೆಗಾಲದಲ್ಲಿ ಹೆಚ್ಚು ಕೆಲಸ ಮಾಡಲು ಸಾಧ್ಯವಾಗಿಲ್ಲ. ಹಾಗಾಗಿ ಶೇಕಡಾ 100 ಗುರಿ ಸಾಧಿಸಲು ಆಗಿಲ್ಲ. ಯಾರೂ
ಕೆಲಸ ಇಲ್ಲ ಅಂತ ವಲಸೆ ಹೋಗುವಂತಿಲ್ಲ. ಮನವಿ ಸಲ್ಲಿಸಿದ ವಾರದೊಳಗೆ ಕೂಲಿ ನೀಡಲಾಗುತ್ತಿದೆ. ಕೆರೆ ಹೂಳೆತ್ತುವುದು, ರಸ್ತೆಗಳ ನಿರ್ಮಾಣ, ಕೃಷಿ ಹೊಂಡ ಹಾಗೂ ವೈಯಕ್ತಿಕ ಕಾಮಗಾರಿಗಳಾದ ದನ, ಕುರಿ ಕೊಟ್ಟಿಗೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ’ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ.ಪರಮೇಶ್‌ ಹೇಳಿದರು.

‘ಏಪ್ರಿಲ್‌ ತಿಂಗಳಲ್ಲಿ ಕೊರೊನಾ ಸೋಂಕಿನ ಬಗ್ಗೆ ಸ್ವಲ್ಪ ಆತಂಕ ಇತ್ತು. ದಿನ ಕಳೆದಂತೆ ಕೊರೊನಾ ಜತೆ ಬದುಕುವುದನ್ನು ಜನರು ಕಲಿಯುತ್ತಿದ್ದಾರೆ. ಪ್ರಸಕ್ತ ಸಾಲಿನಲ್ಲಿ ₹250 ಕೋಟಿ ಹಣ ಖರ್ಚು ಮಾಡಲು ಅವಕಾಶ ಇದ್ದು, ಈ ವರೆಗೆ ₹50 ಕೋಟಿ ವೆಚ್ಚ ಮಾಡಲಾಗಿದೆ. ಕೂಲಿಕಾರರಿಗೆ ₹275 ಕೂಲಿ ನೀಡಲಾಗುತ್ತಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಕೆಲಸ ಸ್ಥಳಗಳಲ್ಲಿ ಸ್ಯಾನಿಟೈಸರ್, ಮಾಸ್ಕ್‌ ವಿತರಿಸಿ, ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT