ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತ್ರಸ್ತರ ಹೆಸರಿನಲ್ಲಿ ಭೂಕಬಳಿಕೆ: ಸಾವಿರಾರು ಎಕರೆ ಅಕ್ರಮ ಮಂಜೂರು?

ಹೇಮಾವತಿ ಜಲಾಶಯ ಯೋಜನೆ
Last Updated 1 ಜುಲೈ 2021, 19:20 IST
ಅಕ್ಷರ ಗಾತ್ರ

ಸಕಲೇಶಪುರ: ‘ಹೇಮಾವತಿ ಮತ್ತು ವಾಟೇಹೊಳೆ ಜಲಾಶಯ ಯೋಜನೆ ಮುಳುಗಡೆ ಸಂತ್ರಸ್ತರಿಗೆ ನೀಡಿದ ಭೂಮಿಯನ್ನು 15 ವರ್ಷ ಪರಭಾರೆ ಮಾಡುವಂತಿಲ್ಲ ಎಂಬ ನಿಷೇಧ ಅವಧಿಯ ಷರತ್ತಿಗೆ ವಿನಾಯಿತಿ ನೀಡಲಾಗಿದೆ’ ಎಂಬ ನಿರ್ದೇಶನವೇ ಸಾವಿರಾರು ಎಕರೆ ಭೂಮಿಯ ಅಕ್ರಮ ಮಂಜೂರಾತಿಗೆ ದಾರಿ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ.

‘2015 ರಿಂದ ಈಚೆಗೆ ನಿರಾಶ್ರಿತರ ಹೆಸರಿನಲ್ಲಿ ಸುಮಾರು 9 ಸಾವಿರ ಎಕರೆ ಭೂಮಿ ಅಕ್ರಮ ಮಂಜೂರಾತಿ ಆಗಿದೆ’ ಎಂದು ಜಿಲ್ಲಾಧಿಕಾರಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಆದರೆ ವಿನಾಯಿತಿ ಆದೇಶ ಹೊರಡಿಸಿದ, 2012ರಿಂದ ಇಲ್ಲಿಯವರೆಗೆ ಇನ್ನಷ್ಟು ಅಕ್ರಮ ನಡೆದಿರುವ ಸಾಧ್ಯತೆಗಳಿವೆ. ಈ ಅವಧಿಯಲ್ಲಿ ಆಗಿರುವ ಭೂಮಂಜೂರಾತಿಗಳ ತನಿಖೆಯೂ ಆಗಬೇಕು’ ಎಂಬ ಕೂಗು ಈಗ ಎದ್ದಿದೆ.

ಜಲಾಶಯ ಯೋಜನೆಗಳಿಗಾಗಿ ಭೂಮಿ ಕಳೆದುಕೊಂಡವರಿಗೆ ಮಂಜೂರು ಮಾಡುವ ಬದಲಿ ಭೂಮಿಯನ್ನು 15 ವರ್ಷ ಪರಭಾರೆ ಮಾಡಬಾರದು ಎಂಬ ನಿಯಮ ಇಂದಿಗೂ ಜಾರಿಯಲ್ಲಿದೆ. ಆದರೆ ‘ಹಾಸನ ಜಿಲ್ಲೆಯಲ್ಲಿ ನಿಷೇಧ ಅವಧಿ ಷರತ್ತಿಗೆ ವಿನಾಯಿತಿ ನೀಡಲಾಗಿದೆ’ ಎಂದು 2012ರ ಜನವರಿ 30 ರಂದು ಕಂದಾಯ ಇಲಾಖೆ ಆದೇಶಿಸಿದೆ!.

ತನಿಖೆ ಆಗಲಿ: ‘ನಿಯಮದಿಂದ ಹಾಸನ ಜಿಲ್ಲೆಯೊಂದಕ್ಕೇ ವಿನಾಯಿತಿ ನೀಡಲು ಅವಕಾಶವಿಲ್ಲ. ಕಾನೂನು ಎಲ್ಲರಿಗೂ ಒಂದೇ, ನಿಯಮ ಮತ್ತು ಅಧಿನಿಯಮಕ್ಕೆ ತಿದ್ದುಪಡಿ ಮಾಡಬೇಕಾದರೆ ಸಚಿವ ಸಂಪುಟ ನಿರ್ಧರಿಸಬೇಕು. ಆದರೆ ಹಾಸನದ ಸಂತ್ರಸ್ತರಿಗೆ ಮಾತ್ರ ಅನ್ವಯಿಸುವಂತೆ ಆದೇಶ ಹೊರಡಿಸಿರುವುದು ಅನುಮಾನ ಮೂಡಿಸಿದೆ’ ಎನ್ನುತ್ತಾರೆ ನಿವೃತ್ತ ತಹಶೀಲ್ದಾರ್‌ ಅಣ್ಣೇಗೌಡ.

‘ನಿರಾಶ್ರಿತರಿಗೆ 1969–70ರಲ್ಲಿ ಸಕಲೇಶಪುರ ತಾಲ್ಲೂಕಿನಲ್ಲಿ ಕಾಯ್ದಿರಿಸಿರುವ ಭೂಮಿ ಕೇವಲ 1,056 ಎಕರೆ. ಭೂ ಹಗರಣದಲ್ಲಿ ಶಾಮೀಲಾಗಿರುವವರು, 26ಸಾವಿರ ಎಕರೆ ಕಾಯ್ದಿರಿಸಿದೆ ಎಂದುನಕಲಿ ಅಧಿಸೂಚನೆಯನ್ನು ಸೃಷ್ಟಿಸಿರುವುದು ಈಗಾಗಲೇ ಬೆಳಕಿಗೆ ಬಂದಿದೆ. ಅದೇ ರೀತಿ ಷರತ್ತಿಗೆ ವಿನಾಯಿತಿ ಆದೇಶ ಪತ್ರವನ್ನೂ ಸೃಷ್ಟಿಸಿರಬಹುದು. ಆ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು’ ಎಂದು ವಕೀಲ ಹಾಗೂ ಮಲೆನಾಡು ಜನಪರ ಹೋರಾಟ ಸಮಿತಿ ಅಧ್ಯಕ್ಷ ಎಚ್‌.ಎ.ಕಿಶೋರ್‌ಕುಮಾರ್ ಒತ್ತಾಯಿಸುತ್ತಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದವಿಶೇಷ ಭೂ ಸ್ವಾಧೀನಾಧಿಕಾರಿ ಮಂಜುನಾಥ್‌, ‘ಸಂತ್ರಸ್ತರಿಗೆ ಮಂಜೂರಾದ ಜಮೀನು ಹದಿನೈದು ವರ್ಷ ಪರಭಾರೆ ನಿಷೇಧ ಅವಧಿ ಷರತ್ತಿಗೆ ವಿನಾಯಿತಿ ನೀಡಿರುವ ಕುರಿತು ವಿಧಾನಸಭೆ ಲೆಕ್ಕಪರಿಶೋಧನ ಸಮಿತಿ ಮುಂದೆ ಎರಡು ಬಾರಿ ಚರ್ಚೆಯಾಗಿದೆ. ಈ ವಿಷಯ ಸರ್ಕಾರದ ಮಟ್ಟದಲ್ಲಿದೆ’ ಎಂದರು.

ಭೂ ಹಗರಣ ಸಂಬಂಧ ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದ ವಿಶೇಷ ವರದಿ
ಭೂ ಹಗರಣ ಸಂಬಂಧ ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದ ವಿಶೇಷ ವರದಿ

2019 ಆಗಸ್ಟ್‌ 25 ರಂದು ‘ಪ್ರಜಾವಾಣಿ’ ಒಳನೋಟದಲ್ಲಿ ಹಗರಣದ ಸಮಗ್ರ ತನಿಖಾ ವರದಿ ಪ್ರಕಟವಾಗಿತ್ತು. ನಂತರ‌‌‌‌ ಸರ್ಕಾರ ಹಗರಣದ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗೆ ಆದೇಶಿಸಿತ್ತು. ಮಧ್ಯವರ್ತಿಯಿಂದ ಹಣ ಪಡೆದು ಭೂಮಿ ಮಂಜೂರು ಮಾಡಿಕೊಡುವುದಾಗಿ ಹೇಳಿ ವಂಚಿಸಿದ ಆರೋಪದ ಮೇರೆಗೆ ಸಕಲೇಶಪುರ ತಾಲ್ಲೂಕಿನ ಕಂದಾಯ ನಿರೀಕ್ಷಕ ಮಂಜುನಾಥ್‌ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆಪ್ರಗತಿಯಲ್ಲಿದೆ.

***

ತಪ್ಪಿತಸ್ಥರ ವಿರುದ್ಧ ಕೂಡಲೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ, ಇಲಾಖಾ ತನಿಖೆ ನಡೆಸ ಬೇಕು. 1970ರ ಅವಧಿಯಿಂದಲೂ ಸಮಗ್ರ ತನಿಖೆ ಆಗಬೇಕು.
-ಎ.ಟಿ.ರಾಮಸ್ವಾಮಿ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT