ತೀರ್ಥಂಕರ ಮೂರ್ತಿ ಪತ್ತೆ; ಬಸ್ತಿಹಳ್ಳಿಯಲ್ಲಿ ಭರದಿಂದ ಸಾಗಿದ ಉತ್ಖನನ ಕಾರ್ಯ

ಹಳೇಬೀಡು: ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆ ಕೈಗೊಂಡಿರುವ ಉತ್ಖನನ ಕಾರ್ಯದಲ್ಲಿ ಜೈನ ಯಾತ್ರಾ ಸ್ಥಳವಾಗಿರುವ ಬಸ್ತಿಹಳ್ಳಿ ಹೊಯ್ಸಳರ ಕಾಲದ ಜಿನಮಂದಿರಗಳ ಹಿಂಭಾಗ ವಿಶಿಷ್ಟ ವಿನ್ಯಾಸದ ಹೊಯ್ಸಳ ಶೈಲಿಯ ಸ್ಮಾರಕದ ತಳಪಾಯದ ಕಟ್ಟಡ ಗೋಚರಿಸಿದೆ.
ಹತ್ತು ದಿನದಿಂದ ಉತ್ಖನನ ಕಾರ್ಯ ಭರದಿಂದ ಸಾಗುತ್ತಿದೆ. ಮಣ್ಣಿನಿಂದ ಶಿಲ್ಪಗಳನ್ನು ಹೊರತೆಗೆಯುವಾಗ ಕುಸುರಿ ಶಿಲ್ಪ ಕಲೆಗೆ ಹಾನಿಯಾಗಬಾರದು ಎಂದು ಯಂತ್ರ ಬಳಸದೆ ಸಣ್ಣ ಪರಿಕರಗಳಿಂದ ಕೆಲಸ ಮಾಡಲಾಗುತ್ತಿದೆ.
ವಿಶಿಷ್ಟ ಕಲಾಕೃತಿ ಹೊಂದಿರುವ ತಳಪಾಯ ಮಾತ್ರವಲ್ಲದೆ ಜಿನಮೂರ್ತಿಗಳು ಉತ್ಖನನ ಸ್ಥಳದಲ್ಲಿ ಗೋಚರಿಸುತ್ತಿವೆ. ದಾಖಲೀಕರಣ, ಛಾಯಾಗ್ರಹಣ ಮಾಡಿಕೊಂಡು ಎಚ್ಚರಿಕೆಯಿಂದ ಶಿಲ್ಪಗಳನ್ನು ಹೊರತೆಗೆಯಲಾಗುತ್ತಿದೆ. ಪುರಾತತ್ವ ಶಾಸ್ತ್ರಜ್ಞರು ಹಾಗೂ ತಂತ್ರಜ್ಞರು ಆಗಾಗ್ಗೆ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ.
ಬಸ್ತಿಹಳ್ಳಿ ಜಿನಮಂದಿರದ ಹಿಂಭಾಗದ ಗುಂಡಿಯಲ್ಲಿ ಸುಮಾರು 40 ವರ್ಷದ ಹಿಂದೆಯೇ 18 ಅಡಿ ಎತ್ತರದ ತೀರ್ಥಂಕರ ಮೂರ್ತಿ ಸಿಕ್ಕಿದೆ. ಈಗ ಹಳೇಬೀಡಿನ ಪುರಾತತ್ವ ಮ್ಯೂಸಿಯಂನಲ್ಲಿ ಸಂರಕ್ಷಣೆಗೆ ಒಳಪಟ್ಟಿದೆ. ಮೂರ್ತಿ ಸಿಕ್ಕಿದ ಸ್ಥಳಕ್ಕೆ ಸ್ಥಳೀಯರು ಶ್ರವಣಪ್ಪನ ಗುಂಡಿ ಎಂದು ಕರೆಯುತ್ತಾರೆ.
‘ಉತ್ಖನನ ನಡೆಯುತ್ತಿರುವ ಜಾಗದ ಹಿಂಭಾಗದಲ್ಲಿ ಪರಿಪೂರ್ಣವಾಗಿ ಉತ್ಖನನ ಕೈಗೊಂಡರೆ 5 ರಿಂದ 7 ಜಿನಮಂದಿರಗಳು ದೊರಕುವ ಸಾಧ್ಯತೆ ಇದೆ. ಈ ಸ್ಥಳದಲ್ಲಿ ಜೈನ ಮಠ ಸಹ ಇತ್ತು ಎನ್ನುತ್ತಾರೆ. ಹಾಗಾಗಿ ಪರಿಪೂರ್ಣವಾದ ಉತ್ಖನನ ಆಗಬೇಕಾಗಿದೆ’ ಎನ್ನುತ್ತಾರೆ ಇತಿಹಾಸ ಪ್ರಾಧ್ಯಾಪಕ ವಸಂತ ಕುಮಾರ್.
ಬಸ್ತಿಹಳ್ಳಿ ಜಿನಮಂದಿರದ ಹಿಂಭಾಗ ಮೊನಿಭಟಾರ ಎಂಬ ಜೈನ ಮುನಿಯ ನಿಷಿದಿ (ಸಮಾಧಿ)ಇತ್ತು. ಈ ಸ್ಥಳದಲ್ಲಿಯೇ ಪಾಯಣ್ಣ ಎಂಬ ಜೈನ ಶ್ರಾವಕ ಸಲ್ಲೇಖನ ಕೈಗೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಇದರಿಂದ ಬಸ್ತಿಹಳ್ಳಿಯ ಸುತ್ತಮುತ್ತ ಜೈನ ಮುನಿಗಳು ವಾಸ್ತವ್ಯ ಹಾಗೂ ವಿಹಾರ ಮಾಡಿದ್ದಾರೆ. ಇಲ್ಲಿ ಜೈನ
ಶ್ರಾವಕರು ನೆಲೆಸಿದ್ದರು ಎಂಬುದು ತಿಳಿಯುತ್ತದೆ ಎಂದು ಸಂಶೋಧಕ ಶ್ರೀವತ್ಸ ಎಸ್. ವಟಿ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.