ಮಂಗಳವಾರ, ನವೆಂಬರ್ 24, 2020
27 °C
ಕೋಟ್ಯಂತ ರೂಪಾಯಿ ನಷ್ಟ: ಮಾರಾಟಗಾರರ ಅಳಲು

ಹಾಸನ: ಪಟಾಕಿ ನಿಷೇಧ, ಸಂಕಷ್ಟದಲ್ಲಿ ವರ್ತಕರು

ಕೆ.ಎಸ್‌.ಸುನಿಲ್‌ Updated:

ಅಕ್ಷರ ಗಾತ್ರ : | |

Prajavani

ಹಾಸನ: ರಾಜ್ಯದಲ್ಲಿ ಪಟಾಕಿ ಬಳಕೆ ನಿಷೇಧಿಸಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದಿಂದ ಪಟಾಕಿ ವರ್ತಕರು ಕಂಗಾಲಾಗಿದ್ದಾರೆ. ಪಟಾಕಿ ವ್ಯಾಪಾರಕ್ಕಾಗಿಯೇ ಹಲವರು ಸಾಲ ಮಾಡಿ ಬಂಡವಾಳ ಹಾಕಿದ್ದು, ಸಾಲದ ಶೂಲಕ್ಕೆ ಸಿಲುಕಿದಂತಾಗಿದೆ.

ಪಟಾಕಿ ಮಾರಾಟಕ್ಕೆ ಪರವಾನಗಿ ಪಡೆದು ಕೋವಿಡ್‌ ಮಾರ್ಗಸೂಚಿ ಪ್ರಕಾರ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ಮಳಿಗೆ ತೆರೆಯಲು ಸಿದ್ಧತೆ ಮಾಡಿಕೊಳ್ಳುತ್ತಿರುವಾಗಲೇ ಆದೇಶ ಹೊರಡಿಸಿರುವುದು ಪಟಾಕಿ ಮಾರಾಟಗಾರರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ನ.12 ರಿಂದ 17ರವರೆಗೆ ಸುರಕ್ಷತಾ ಕ್ರಮಗಳೊಂದಿಗೆ ವ್ಯಾಪಾರ ನಡೆಸಲು ಜಿಲ್ಲಾಡಳಿತ ಅನುಮತಿ ನೀಡಿತ್ತು. ಅದರಂತೆ ಕ್ರೀಡಾಂಗಣದ ಆವರಣದಲ್ಲಿ 35 ಮಳಿಗೆಗಳನ್ನು ತೆರೆದು, ವ್ಯಾಪಾರಕ್ಕೆ ಸಿದ್ಧತೆ ನಡೆಸಿದ್ದರು. ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿ ಪಟಾಕಿ ಸಾಮಗ್ರಿಗಳನ್ನು ಹೊರ ರಾಜ್ಯದಿಂದ ತರಿಸಿಕೊಂಡಿದ್ದಾರೆ. ಪ್ರತಿ ಅಂಗಡಿಯಿಂದ ಅಗ್ನಿಶಾಮಕ ಕಚೇರಿಗೆ ₹ 5 ಸಾವಿರ, ಜಿಲ್ಲಾ ಕ್ರಿಡಾಂಗಣಕ್ಕೆ ₹90 ಸಾವಿರ ಠೇವಣಿ ಇಡಲಾಗಿದೆ. ಶೆಡ್‌ ನಿರ್ಮಾಣಕ್ಕೆ ₹ 10 ಸಾವಿರ ವೆಚ್ಚವಾಗಿದೆ.

‌‘ಶಿವಕಾಶಿಯಿಂದ ತಂದಿರುವ ಹಾಗೂ ಸದ್ಯದಲ್ಲಿಯೇ ಬರಲಿರುವ ಪಟಾಕಿಯನ್ನು ಸ್ಥಳೀಯವಾಗಿ ಮಾರಾಟ ಮಾಡುವಂತಿಲ್ಲ. ಶಿವಕಾಶಿಗೆ ವಾಪಸ್‌ ಕಳುಹಿಸುವಂತಿಲ್ಲ. ಜಿಲ್ಲಾಡಳಿತ ಅನುಮತಿ ನೀಡಿದ ಬಳಿಕ ಶೆಡ್‌ ಹಾಕಿಕೊಂಡು ವ್ಯಾಪಾರಕ್ಕೆ ಸಿದ್ಧತೆ ನಡೆಸಿದ್ಧೇವೆ. ಶಿವಕಾಶಿಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಪಟಾಕಿ ತರಿಸಲಾಗಿದೆ. ಪಟಾಕಿ ಮಾರಾಟವಾಗದಿದ್ದರೆ ಅದರ ನಷ್ಟವನ್ನು ಸರ್ಕಾರವೇ ಭರಿಸಬೇಕು’ ಎಂದು ಪಟಾಕಿ ವರ್ತಕರು ಅಳಲು ತೋಡಿಕೊಂಡರು. ‌

‘ಸರ್ಕಾರಿ ಹಸಿರು ಪಟಾಕಿ ಮಾತ್ರ ಬಳಸಿ, ದೀಪಾವಳಿ ಆಚರಿಸುವಂತೆ ಹೇಳಿದೆ. ಮಾಲಿನ್ಯ ಉಂಟು ಮಾಡುವ ಪಟಾಕಿಗಳ ತಯಾರಿ ಮತ್ತು ಮಾರಾಟವನ್ನು ನಿಷೇಧಿಸಿ, 2018ರಲ್ಲಿ ಸುಪ್ರೀಂ ಕೋರ್ಟ್‌ ಆದೇಶಿಸಿತ್ತು. ಮಾರ್ಚ್‌ ನಲ್ಲಿ ಲಾಕ್‌ಡೌನ್‌ ಹೇರಲಾಯಿತು. ಪಟಾಕಿಗಾಗಿ ನಾವು ಏಪ್ರಿಲ್‌ ನಲ್ಲಿಯೇ ಪೂರ್ತಿ ಹಣ ಪಾವತಿಸಿದ್ದೇವೆ. ಮೊದಲೇ ಪಟಾಕಿ ನಿಷೇಧಿಸಿದ್ದರೆ ಸಾಲ ಮಾಡಿ ವ್ಯಾಪಾರಕ್ಕೆ ಕೈ ಹಾಕುತ್ತಿರಲಿಲ್ಲ. ಈಗ ಖರೀದಿಸಿ ತಂದಿರುವ ಪಟಾಕಿ ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ. ಸರ್ಕಾರದ ಆದೇಶದಿಂದ ವರ್ತಕರಿಗೆ ದಿಕ್ಕು ತೋಚದಂತಾಗಿದೆ’ ಎಂದು ಪಟಾಕಿ ವರ್ತಕರ ಸಂಘದ ಅಧ್ಯಕ್ಷ ಮಂಜುನಾಥ್‌ ತಿಳಿಸಿದರು. 

‘ಪಟಾಕಿ ನಿಷೇಧದಿಂದ ಸಣ್ಣ ವ್ಯಾಪಾರಿಗಳಿಂದ ದೊಡ್ಡ ವ್ಯಾಪಾರಿಗಳವರೆಗೆ ₹1 ರಿಂದ ₹ 5 ಲಕ್ಷ ದವರೆಗೆ ಸೇರಿ ಕೋಟ್ಯಂತರ ರೂಪಾಯಿ ನಷ್ಟವಾಗಲಿದೆ. ಹಲವರು ಆಭರಣ ಅಡವಿಟ್ಟು ಸಾಲ ಮಾಡಿ ಪಟಾಕಿ ಖರೀದಿಸಿದ್ದಾರೆ. ಸಾಲ ತೀರಿಸುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ. ಸರ್ಕಾರದ ಆದೇಶ ವಿರುದ್ಧ ಬೆಂಗಳೂರು, ಹುಬ್ಬಳ್ಳಿ–ಧಾರಾವಾಡ ಜಿಲ್ಲೆಗಳಲ್ಲಿ ಕೋರ್ಟ್‌ಗೆ ಹೋಗಲು ನಿರ್ಧರಿಸಿದ್ದಾರೆ. ಸರ್ಕಾರದಿಂದ ಅಧಿಕೃತ ಆದೇಶ ಬಂದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು’ಎಂದರು.

‘ಸರ್ಕಾರದಿಂದ ಈ ವರೆಗೂ ಪಟಾಕಿ ನಿಷೇಧ ಮಾಡಿರುವ ಕುರಿತು ಅಧಿಕೃತ ಆದೇಶ ಬಂದಿಲ್ಲ. ಆದೇಶ ಬಂದ ಬಳಿಕ ಜಿಲ್ಲಾಧಿಕಾರಿ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ಎಂದು ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸಿ.ಕೆ. ಹರೀಶ್ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು