ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೌಡಿಗಳಿಂದ ಹೂವಿನ ಅಭಿಷೇಕ ಮಾಡಿಸಿಕೊಂಡ ಸಿಪಿಐ ಅಮಾನತಿಗೆ ಎಚ್‌.ಡಿ ರೇವಣ್ಣ ಆಗ್ರಹ

ಗ್ರಾಮೀಣ ವೃತ್ತದ ಸರ್ಕಲ್‌ ಇನ್‌ಸ್ಪೆಕ್ಟರ್‌ ಅಮಾನತ್ತಿಗೆ ಶಾಸಕ ರೇವಣ್ಣ ಆಗ್ರಹ
Last Updated 3 ಅಕ್ಟೋಬರ್ 2020, 12:11 IST
ಅಕ್ಷರ ಗಾತ್ರ

ಹಾಸನ: ರೌಡಿಗಳಿಂದ ಹೂವಿನ ಅಭಿಷೇಕ ಮಾಡಿಸಿಕೊಂಡಿರುವ ಗ್ರಾಮಾಂತರ ವೃತ್ತದ ಇನ್‌ಸ್ಪೆಕ್ಟರ್‌ ಪಿ.ಸುರೇಶ್ ವಿರುದ್ಧ ವಾಗ್ದಾಳಿ ನಡೆಸಿರುವ ಶಾಸಕ ಎಚ್.ಡಿ.ರೇವಣ್ಣ, ಅಧಿಕಾರಿಯನ್ನು ಕೂಡಲೇ ಅಮಾನತು ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

‘ಸಿಪಿಐ ಸುರೇಶ್ ಅವರು ರೌಡಿಗಳನ್ನು ಬೆಳೆಸುವ ಅಧಿಕಾರಿ. ಶ್ರವಣಬೆಳಗೊಳ ಬಾಹುಬಾಲಿಗೆ ನಡೆದಂತೆ ಸಿಪಿಐಗೆ ಹೂವಿನ ಅಭಿಷೇಕ ಮಾಡಿದ್ದಾರೆ. ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಎರಡು ಹೋಬಳಿಗಳು ಇವರ ವ್ಯಾಪ್ತಿಗೆ ಒಳಪಡುತ್ತದೆ. ರೌಡಿಗಳ ಜತೆ ಸಂಬಂಧ ಇರುವ ಅಧಿಕಾರಿ ನನ್ನ ಕ್ಷೇತ್ರಕ್ಕೆ ಬೇಡ’ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಆಯಕಟ್ಟಿನ ಸ್ಥಳಕ್ಕೆ ನಿಯೋಜಿಸುವ ಮುನ್ನ ಅಧಿಕಾರಿಯ ಹಿನ್ನೆಲೆ ತಿಳಿದುಕೊಳ್ಳಬೇಕು. ಉದ್ದೇಶಪೂರ್ವಕವಾಗಿ ಪ್ರಾಮಾಣಿಕ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಒಂದು ಸಮಾಜದವರನ್ನು ಗುರಿಯಾಗಿಟ್ಟುಕೊಂಡು ಹೀಗೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಏನೇ ಅನಾಹುತ ಆದರೂ ಅದಕ್ಕೆ ದಕ್ಷಿಣ ವಲಯ ಐಜಿಪಿಯೇ ನೇರ ಕಾರಣ. ಅವರು ರಬ್ಬರ್ ಸ್ಟಾಂಪ್ನಂತೆ ಆಗಿದ್ದಾರೆ. ಇದಕ್ಕೆಲ್ಲಾ ಕಾಲವೇ ಉತ್ತರ ನೀಡುತ್ತದೆ ಎಂದರು.

‘ಐಜಿಪಿ ಹೆಸರು ಪ್ರಸ್ತಾಪಿಸದೆ ವಾಗ್ದಾಳಿ ನಡೆಸಿದ ರೇವಣ್ಣ, ಬಿಜೆಪಿ ಅಣತಿಯಂತೆ ಐಜಿಪಿ ವರ್ಗಾವಣೆ ಮಾಡಿದ್ದಾರೆ. ನಗರದ ಪೆನ್ಷನ್‌ ಮೊಹಲ್ಲಾ ಠಾಣೆಯಲ್ಲಿ ಬಿಜೆಪಿ ಕಾರ್ಯಕರ್ತರ ಮೇಲಿನ 18 ಪ್ರಕರಣಗಳಲ್ಲಿ ಬಿ ರಿಪೋರ್ಟ್ ಹಾಕಿರುವುದಾಗಿ ಸುರೇಶ್ ಬಹಿರಂಗವಾಗಿ ಹೇಳಿದ್ದಾರೆ. ಈ ಸಂಬಂಧ ರಾಜ್ಯ, ಕೇಂದ್ರ ಗೃಹಸಚಿವರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ಬರೆಯುತ್ತೇನೆ’ ಎಂದು ಗುಡುಗಿದರು.

‘ಸರ್ಕಲ್ ಇನ್‌ಸ್ಪೆಕ್ಟರ್‌ಗೆ ಸರ್ಕಾರ ಮಂಡಿಯೂರಿದೆ. ಇದೆಲ್ಲಾ ಸಿ.ಎಂ ಹಾಗೂ ಗೃಹ ಸಚಿವರ ಗಮನಕ್ಕೆ ಇದೆಯೋ‌ ಇಲ್ಲವೋ ಗೊತ್ತಿಲ್ಲ. ಹೊಳೆನರಸೀಪುರ, ಚನ್ನರಾಯಪಟ್ಟಣಗಳಲ್ಲಿ ನಿತ್ಯ ಕೊಲೆಗಳು ಆಗುತ್ತಿವೆ. ಜಿಲ್ಲೆಯಲ್ಲಿ ಅಧಿಕಾರಿಗಳ ವರ್ಗಾವಣೆ ದಂಧೆ ನಡೆಯುತ್ತಿದೆ. ಚನ್ನರಾಯಪಟ್ಟಣ ಸಿಪಿಐ ‌₹25 ಲಕ್ಷ ನೀಡಿ ಬಂದಿದ್ದಾರೆ. ಗುಮಾಸ್ತರ ವರ್ಗಾವಣೆಗೆ ₹10, ₹20 ಸಾವಿರ ನಡೆಯುತ್ತಿದೆ. ಹೇಳುವವರು, ಕೇಳುವವರು ಯಾರು ಇಲ್ಲ. ಸುರೇಶ್‌ನನ್ನು ಜಿಲ್ಲೆಗೆ ವರ್ಗಾವಣೆ ಮಾಡುವುದಿಲ್ಲ ಎಂದು ಉಸ್ತುವಾರಿ ಸಚಿವ ಗೋಪಾಲಯ್ಯ ಹೇಳಿದ್ದರು. ಇದು ಅವರ ಗಮನಕ್ಕೆಬಂದಿದೆಯೋ, ಇಲ್ಲವೋ ಗೊತ್ತಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಹಾಸನ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ತವರು ಜಿಲ್ಲೆ ಎಂಬುದನ್ನು ಅಧಿಕಾರಿಗಳು ಮರೆಯಬಾರದು. ಹಿಂದೆ ಬಿಗಿ ಪೊಲೀಸ್‌ ಭದ್ರತೆ ನಡುವೆಯೂ ನನ್ನ ತಾಯಿ, ಪತ್ನಿ ಮೇಲೆ ಆ್ಯಸಿಡ್‌ ದಾಳಿ ನಡೆಯಿತು. ನನ್ನ ಮೇಲೂ ದಾಳಿ ನಡೆಸಲು ಯೋಜಿಸಲಾಗಿತ್ತು. ಆದರೆ, ನಾನು ಒಂದು ಗಂಟೆ ತಡವಾಗಿ ಸ್ಥಳಕ್ಕೆ ಹೋಗಿದ್ದರಿಂದ ತಪ್ಪಿತ್ತು. ಈಗಲೂ ತಾಯಿ ನೋವು ಅನುಭವಿಸುತ್ತಿದ್ದಾರೆ’ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT