ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೇತರಿಕೆ ಕಾಣದ ಪುಷ್ಪೋದ್ಯಮ, ಲಾಕ್‌ಡೌನ್‌ ತೆರವುಗೊಂಡರೂ ಕಡಿಮೆ ದರಕ್ಕೆ ಖರೀದಿ

Last Updated 4 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಹಾಸನ: ಕೊರೊನಾ ಸೋಂಕು ಹರಡುವುದನ್ನು ತಪ್ಪಿಸಲು ಹೇರಿದ್ದ ಲಾಕ್‌ಡೌನ್ ತೆರವಿನ ಬಳಿಕವೂ ಜಿಲ್ಲೆಯಲ್ಲಿಪುಷ್ಪೋದ್ಯಮ ಚೇತರಿಕೆ ಕಂಡಿಲ್ಲ

ತೋಟಗಾರಿಕೆ ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 554.31 ಹೆಕ್ಟೇರ್‌ ಪ್ರದೇಶದಲ್ಲಿ ಹೂವು
ಬೆಳೆಯಲಾಗುತ್ತದೆ. ಅರಕಲಗೂಡು, ಹಾಸನ, ಹೊಳೆನರಸೀಪುರದಲ್ಲಿ ಈ ಉದ್ಯಮವನ್ನು ನಂಬಿಕೊಂಡು
ನೂರಾರು ಕುಟುಂಬಗಳು ಜೀವನ ನಡೆಸುತ್ತಿವೆ.

ಪ್ರಸ್ತುತ ಹೊರಗಿನಿಂದ ಹೂವು ಬರುತ್ತಿಲ್ಲ. ಸ್ಥಳೀಯವಾಗಿ ಬೆಳೆದಿರುವ ಹೂವುಗಳನ್ನು ಕಡಿಮೆ ದರಕ್ಕೆ ಖರೀದಿಸಲಾಗುತ್ತಿದೆ.

ದೇಶದಾದ್ಯಂತ ಲಾಕ್‌ಡೌನ್ ಜಾರಿಗೊಳಿಸಿದ ನಂತರ ಹೂವಿನ ವಹಿವಾಟು ಸ್ಥಗಿತಗೊಂಡಿತು. ಈ ಅವಧಿಯಲ್ಲಿಮದುವೆ, ಉತ್ಸವ, ಜಾತ್ರೆ ಇತರೆ ಸಮಾರಂಭಗಳು ನಡೆಯದ ಕಾರಣ ಹೂವಿಗೆ ಬೇಡಿಕೆ ಇರಲಿಲ್ಲ. ಹೂವುಗಳನ್ನು ಕೊಳ್ಳುವವರು ಇಲ್ಲದೇ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದರು. ಹಾಗಾಗಿ ಹೂವುಗಳನ್ನು ಜಮೀನಿನಲ್ಲಿಯೇ ಬಿಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.

‘ನಿರ್ಬಂಧ ತೆರವುಗೊಂಡು ತಿಂಗಳುಗಳು ಕಳೆದರೂ ಹೂವಿನ ವಹಿವಾಟಿನಲ್ಲಿ ಚೇತರಿಕೆ ಕಂಡಿಲ್ಲ. ಮದುವೆ,
ಸಭೆ, ಶುಭ ಸಮಾರಂಭಗಳಲ್ಲಿ ಹೆಚ್ಚಿನ ಜನರು ಸೇರಲು ಅವಕಾಶ ನೀಡಿಲ್ಲ. ಜಾತ್ರೆ, ಉತ್ಸವಗಳು ನಡೆಯುತ್ತಿಲ್ಲ.ಹಬ್ಬಗಳನ್ನು ಸಹ ಸರಳವಾಗಿ ಆಚರಿಸಲಾಗುತ್ತಿದೆ. ಇದರಿಂದ ಸಹಜವಾಗಿಯೇ ಹೂವಿನ ಬೇಡಿಕೆಯೂಕಡಿಮೆಯಾಗಿದೆ’ ಎನ್ನುತ್ತಾರೆ ಹೂವು ಬೆಳೆಗಾರರು.

ಹಾಸನದಲ್ಲಿ ಬೆಳೆಯುವ ಸೇವಂತಿಗೆ, ಗುಲಾಬಿ ಹಾಗೂ ಅಲಂಕಾರಿಕ ಹೂವುಗಳಿಗೆ ಕೇರಳ, ಮೈಸೂರು,
ಮಂಗಳೂರು ಮತ್ತು ಬೆಂಗಳೂರಿನಲ್ಲೂ ಬೇಡಿಕೆ ಹೆಚ್ಚಿದೆ. ಗೊರೂರು, ಚನ್ನರಾಯಪಟ್ಟಣ, ಬೇಲೂರು
ತಾಲ್ಲೂಕಿನಲ್ಲಿ ಸೇವಂತಿಗೆ, ಗುಲಾಬಿ ಬೆಳೆಯಲಾಗುತ್ತದೆ. ಸೇವಂತಿಗೆ ಸಸಿಗಳನ್ನು ತಮಿಳುನಾಡಿನ ಫಾರಂ
ನಿಂದ ತರಿಸಿ ನಾಟಿ ಮಾಡಲಾಗುತ್ತಿದೆ.

ಲಾಕ್‌ಡೌನ್ ಸಂದರ್ಭದಲ್ಲಿ 35 ಹೆಕ್ಟೇರ್‌ ಪ್ರದೇಶದಲ್ಲಿ ಹೂವು ಬೆಳೆ ನಾಶವಾಗಿದ್ದು, ನಷ್ಟಕ್ಕೆ ಒಳಗಾದ 184
ಬೆಳೆಗಾರರಿಗೆ ₹ 7.65 ಲಕ್ಷ ಪರಿಹಾರ ಧನ ವಿತರಿಸಲಾಗಿದೆ.

‘ಹಾಸನ ಹೂವುಗಳಿಗೆ ಹೊರ ಜಿಲ್ಲೆ, ರಾಜ್ಯಗಳಿಗೆ ಸರಬರಾಜು ಮಾಡಲಾಗುತ್ತಿದೆ. ಸ್ಥಳೀಯವಾಗಿಯೂ ಬೇಡಿಕೆ
ಇದೆ. ಗುಲಾಬಿಗೆ ಬೆಂಗಳೂರು ಮತ್ತು ಅನ್ಯ ರಾಜ್ಯಗಳಲ್ಲಿ ಬೇಡಿಕೆ ಹೆಚ್ಚು. ಲಾಕ್‌ಡೌನ್‌ ತೆರವು ಬಳಿಕ ಮತ್ತೆ ಹೂವು ವಹಿವಾಟು ಆರಂಭವಾಗಿವೆ. ಕ್ರಮೇಣ ಚೇತರಿಕೆ ಕಾಣಲಿದೆ’ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಯೋಗೇಶ್‌ ತಿಳಿಸಿದರು.

‘ನಷ್ಟಕ್ಕೆ ಒಳಗಾದ 35 ಹೆಕ್ಟೇರ್‌ ಪ್ರದೇಶದ ಹೂವು ಬೆಳೆಗಾರರಿಗೆ ₹ 25 ಸಾವಿರ ಪರಿಹಾರ ವಿತರಿಸಲಾಗಿದೆ. ಬೆಳೆ ಸಮೀಕ್ಷೆ ಹೊರತುಪಡಿಸಿ 314.17 ಹೆಕ್ಟೇರ್‌ ಪ್ರದೇಶದ 1525 ರೈತರು ಅರ್ಜಿ ಸಲ್ಲಿಸಿದ್ದಾರೆ. ಇವರಿಗೆ ಪರಿಹಾರ ಒದಗಿಸಲು ₹ 78.54 ಲಕ್ಷ ಅನುದಾನ ಅವಶ್ಯವಿದೆ’ ಎಂದರು.

‘ಹಾಸನ ಮಾರುಕಟ್ಟೆ ಮತ್ತು ಮೈಸೂರಿನಲ್ಲಿ ಹೂವು ಮಾರಾಟ ಮಾಡಲಾಗುತ್ತಿದೆ. ದಲ್ಲಾಳಿಗಳು ಅಳತೆಯಲ್ಲಿ
ಮೋಸ ಮಾಡುತ್ತಾರೆ. ರೈತರಿಂದ ಒಂದು ಮಾರು ಹೂವು ಅನ್ನು ₹3 ರಿಂದ ₹8ರ ವರೆಗೂ ಖರೀದಿಸುತ್ತಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ ಒಂದು ಮಾರು ಹೂವು ₹ 50 ರಿಂದ ₹70 ರ ವರೆಗೆ ಇತ್ತು. ಚೆಂಡು ಹೂವು ಕೆ.ಜಿ ಗೆ ₹25, ಕನಕಾಂಬರ ₹250ಇದೆ. ಶೇಕಡಾ 15 ರಷ್ಟು ವಹಿವಾಟು ನಡೆಯುತ್ತಿದೆ. ಹೊರಗಿನಿಂದ ಹೂ ಬರುತ್ತಿಲ್ಲ. ಸ್ಥಳೀಯರು ಬೆಳೆದ ಹೂವುಗಳಷ್ಟೆ ಬರುತ್ತಿದೆ. ಹೇಳಿಕೊಳ್ಳುವಂತಹ ವ್ಯಾಪಾರವೂ ಇಲ್ಲ’ ಎಂದು ರೈತರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT