ಗುರುವಾರ , ಆಗಸ್ಟ್ 18, 2022
25 °C
ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ: ವನ್ಯಜೀವಿ ಅರಣ್ಯಕ್ಕೆ ಸ್ಥಳಾಂತರ

ಸಕಲೇಶಪುರ: ಮನೆಗೆ ನುಗ್ಗುತ್ತಿದ್ದ ನರಹಂತಕ ಕಾಡಾನೆ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಕಲೇಶಪುರ: ಮಲೆನಾಡಿನ ಈ ಭಾಗದ ಕಾಫಿ ತೋಟಗಳಲ್ಲಿಯೇ ಹಲವು ವರ್ಷಗಳಿಂದ ಅಡ್ಡಾಡಿಕೊಂಡು ಜೀವ, ಬೆಳೆ ಹಾಗೂ ಆಸ್ತಿಪಾಸ್ತಿ ಹಾನಿ ಮಾಡುತ್ತಿದ್ದ ಮಕ್ನ (ಗುಂಡೂ ಅಲ್ಲ ಹೆಣ್ಣೂ ಅಲ್ಲ) ಕಾಡಾನೆಯನ್ನು ಸೆರೆ ಹಿಡಿದು ಸ್ಥಳಾಂತರ ಮಾಡುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಹರಸಾಹಸಪಟ್ಟರು.

ತಾಲ್ಲೂಕಿನ ಉದೇವಾರ ಗ್ರಾಮದ ಮನೆಯೊಂದರ ಮೇಲೆ ಮಂಗಳವಾರ ರಾತ್ರಿ ದಾಳಿ ಮಾಡಿ, ಬಾಗಿಲು ಜಖಂಗೊಳಿಸಿದ್ದ ಈ ಆನೆ, ಇದೇ ಗ್ರಾಮದ ಕಾಫಿ ತೋಟದಲ್ಲಿ ಬುಧವಾರ ಬೆಳಿಗ್ಗೆ ಪತ್ತೆಯಾಯಿತು. ನಾಗರಹೊಳೆಯ ಮತ್ತಿಗೋಡು ಹಾಗೂ ದುಬಾರೆ ಆನೆ ಧಾಮಗಳಿಂದ ಕಾರ್ಯಾಚರಣೆಗೆ ಬಂದಿದ್ದ ಮಹೇಂದ್ರ, ಕರ್ನಾಟಕ ಭೀಮ, ಮಹಾರಾಷ್ಟ್ರ ಭೀಮ, ಸುಗ್ರೀವ, ಧನಂಜಯ್ಯ, ಹರ್ಷ ಆನೆಗಳೊಂದಿಗೆ ತೆರಳಿದ ಅರಣ್ಯ ಇಲಾಖೆಯ ವೆಂಕಟೇಶ್‌, ಬಂದೂಕಿನಿಂದ ಅರವಳಿಕೆ ಚುಚುಮದ್ದು ಹಾರಿಸುವಲ್ಲಿ ಯಶಸ್ವಿಯಾದರು.

ಕೆಲವು ನಿಮಿಷಗಳ ನಂತರ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದ ಆನೆಯ ಕುತ್ತಿಗೆ ಹಾಗೂ ಕಾಲುಗಳಿಗೆ ಸರಪಳಿ ಹಾಗೂ ರೋಪ್‌ ಕಟ್ಟಲಾಯಿತು. ಎಚ್ಚರವಾಗುತ್ತಲೇ ಕುಮ್ಮಿ ಆನೆಗಳೊಂದಿಗೆ ಸುಮಾರು ಒಂದು ಗಂಟೆಗಳ ಕಾಲ ಕಾಳಗ ನಡೆಸಿತು. ಕಾರ್ಯಾಚರಣೆಯಲ್ಲಿ ನುರಿತ ಆನೆಗಳು ಹಾಗೂ ಇಲಾಖೆ ಸಿಬ್ಬಂದಿ, ಯಾವುದೇ ಸಮಸ್ಯೆ ಆಗದಂತೆ ಕಾಡಾನೆಯನ್ನು ಸುಮಾರು ಒಂದೂವರೆ ಕಿ.ಮೀ. ದೂರ ಎಳೆದು ತಂದರು.

ನಂತರ ಅದಕ್ಕೆ ರೆಡಿಯೋ ಕಾಲರ್ ಅಳವಡಿಸಿ, ಕ್ರೇನ್‌ ಸಹಾಯದಿಂದ ಲಾರಿಗೆ ಹತ್ತಿಸಲಾಯಿತು. ಬಲಶಾಲಿಯಾಗಿರುವ ಸೆರೆ ಹಿಡಿದ ಆನೆ, ಕಾರ್ಯಾಚರಣೆ ಸಂದರ್ಭದಲ್ಲಿ ಕುಮ್ಕಿ ಆನೆಯೊಂದನ್ನು ಬೆದರಿಸಿ ಅಟ್ಟಿದ್ದಲ್ಲದೆ, ಕಾಲಿಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿಕೊಂಡಿತ್ತು. ವೀಕ್ಷಿಸುತ್ತಿದ್ದ ಇಲಾಖೆಯ ಸಿಬ್ಬಂದಿ ಸೇರಿದಂತೆ ನೂರಾರು ಮಂದಿ ಎದ್ದು ಬಿದ್ದು ಓಡಿ ಹೋದ ಪ್ರಸಂಗ ನಡೆಯಿತು.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಶಂಕರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕೆ.ಎನ್‌. ಬಸವರಾಜು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್‌, ಡಾ. ಮುಜೀಬ್‌ ಮಾರ್ಗದರ್ಶನದಲ್ಲಿ ವಲಯ ಅರಣ್ಯ ಅಧಿಕಾರಿ ಶಿಲ್ಪಾ, ಆಲೂರು, ಬೇಲೂರು ಹಾಗೂ ಯಸಳೂರು ವಲಯಗಳ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ, ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು