ಮಂಗಳವಾರ, ಸೆಪ್ಟೆಂಬರ್ 21, 2021
21 °C
ನಗರಸಭೆ ಅಧ್ಯಕ್ಷ ಆರ್‌.ಮೋಹನ್‌ಗೆ ಮನವಿ ಸಲ್ಲಿಕೆ

ಪೌರಕಾರ್ಮಿಕರಿಗೆ ಉಚಿತ ನಿವೇಶನ: ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಒಂದು ತಿಂಗಳ ಒಳಗೆ ಬಾಕಿ ಇರುವ ಪೌರ ಕಾರ್ಮಿಕರಿಗೆ ಉಚಿತ ನಿವೇಶನ ನೀಡಿ, ಮನೆ ನಿರ್ಮಿಸಿಕೊಟ್ಟು ಕೆಲಸ ಖಾಯಂ ಮಾಡಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿ ಪೌರ ಕಾರ್ಮಿಕ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮಂಗಳವಾರ ನಗರಸಭೆ ಅಧ್ಯಕ್ಷ ಆರ್‌.ಮೋಹನ್ ಅವರಿಗೆ ಮನವಿ ಸಲ್ಲಿಸಲಾಯಿತು.

ನಿವೇಶನ ಮತ್ತು ಸೂರು ಪೌರ ಕಾರ್ಮಿಕರ ಎರಡು ದಶಕದ ಕನಸಾಗಿದ್ದು, ಹಾಸನದ 41 ಪೌರ ಕಾರ್ಮಿಕರಿಗೆ ಬೇಲೂರು ರಸ್ತೆಯಲ್ಲಿ 20x30 ರ ಅನುಪಾತದಲ್ಲಿ ಮನೆ ಹಕ್ಕು ಪತ್ರ ವಿತರಿಸಲಾಗಿದೆ. ಮನೆ ನಿರ್ಮಾಣ ಅಂತಿಮ ಹಂತಕ್ಕೆ ಬಂದಿದೆ. ನಗರಸಭೆಯಲ್ಲಿ ಇನ್ನೂ 45 ಮಂದಿ ಕಾಯಂ ನೌಕರರಿದ್ದು, ಅವರೂ ಯಾವುದೇ ನಿವೇಶನ ಹಾಗೂ ಮನೆ ಹೊಂದಿರುವುದಿಲ್ಲ ಎಂದು ತಿಳಿಸಿದ್ದಾರೆ.

‘ಹಿಂದೆ ಗುರುತಿಸಲಾದ ಜಾಗದ ಬಗ್ಗೆ ಕಾನೂನು ತಕರಾರು ಇರುವುದರಿಂದ ಈಗಾಗಲೇ ಪೌರ ಕಾರ್ಮಿಕರಿಗೆ ಹಂಚಲಾಗಿರುವ ನಿವೇಶನಗಳ ಸಮೀಪವೇ ಖಾಸಗಿ ಭೂಮಿ ಇದ್ದು, ಅದನ್ನು ನಗರಸಭೆ ಖರೀದಿಸಿ ಉಳಿದ ಪೌರ ಕಾರ್ಮಿಕರಿಗೂ ನಿವೇಶನ ಹಂಚಬೇಕು. ಕೂಡಲೇ ಮನೆ ನಿರ್ಮಿಸಿಕೊಡಲು ಕ್ರಮ ಕೈಗೊಳ್ಳಬೇಕು ಹಾಗೂ ಹಾಸನ ನಗರಸಭೆಯ ಎಲ್ಲ ಪೌರ ಕಾರ್ಮಿಕರಿಗೂ ವೇತನ ನೀಡಬೇಕು’ ಎಂದು ಆಗ್ರಹಿಸಿದರು.

‘ನಿರ್ಮಾಣವಾಗುತ್ತಿರುವ ಮನೆಗಳನ್ನು ತ್ವರಿತವಾಗಿ ಪೌರ ಕಾರ್ಮಿಕರಿಗೆ ಹಸ್ತಾಂತರ ಮಾಡಬೇಕು. 10 ವರ್ಷಕ್ಕಿಂತ ಹೆಚ್ಚು ಕೆಲಸ ಮಾಡುತ್ತಿರುವ ನೇರ ಪೌರ ಕಾರ್ಮಿಕರನ್ನು ನೇರ ಪಾವತಿಗೆ ಹಾಗೂ ಕಾಯಂಗೊಳಿಸಲು ಕ್ರಮ ಕೈಗೊಳ್ಳಬೇಕು. ಪೌರ ಕಾರ್ಮಿಕರಿಗೆ ರೈನ್ ಕೋಟ್, ಶೂ, ಮಾಸ್ಕ್ ಮತ್ತು ಕೈಗವಸುಗಳನ್ನು ಕಾಲಕಾಲಕ್ಕೆ ವಿತರಿಸಿ, ನೇರ ಪಾವತಿದಾರರಿಗೆ ಸಮವಸ್ತ್ರದ ಹಣ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪೌರ ಕಾರ್ಮಿಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಯೋಗೀಶ್ ಗೌಡ, ಗೌರವಾಧ್ಯಕ್ಷ ನಾಗರಾಜ್ ಹೆತ್ತೂರ್, ಕಾರ್ಯದರ್ಶಿ ಪರಶುರಾಮ್, ನಲ್ಲಪ್ಪ, ಮಾರಾಣ್ಣ, ಮುನಿಯಪ್ಪ ಹಾಗೂ ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು