ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲಿನ ಹತಾಶೆಯಿಂದ ನನ್ನ ಮೇಲೆ ಆಧಾರ ರಹಿತ ಆರೋಪ: ಸಿ.ಎನ್. ಬಾಲಕೃಷ್ಣ

Published 30 ಮೇ 2023, 13:33 IST
Last Updated 30 ಮೇ 2023, 13:33 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ: ‘ಕಾಂಗ್ರೆಸ್ ಮುಖಂಡ ಎಂ.ಎ. ಗೋಪಾಲಸ್ವಾಮಿ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ಹತಾಶೆಯಿಂದ ಆಧಾರರಹಿತ ಆರೋಪ ಮಾಡುತ್ತಿದ್ದಾರೆ’ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಟೀಕಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಟ್ಟಣದಲ್ಲಿ 13 ಸಂಘ, ಸಂಸ್ಥೆಗಳಿಗೆ ಸಮುದಾಯ ಭವನ ನಿರ್ಮಿಸಿಕೊಳ್ಳಲು 1.05 ಎಕರೆ ನಿವೇಶನ ಮಂಜೂರು ಮಾಡಲಾಗಿದೆ. ಇವು ಸರ್ಕಾರದ ಇಲಾಖೆಯ ಅಡಿಯಲ್ಲಿರುತ್ತದೆ, ಸಂಘ, ಸಂಸ್ಥೆಗಳು ಅದನ್ನು ನಿರ್ವಹಣೆ ಮಾಡುತ್ತವೆ. ಮುಂಬರುವ ದಿನಗಳಲ್ಲಿ ಇನ್ನೂ 7-8 ಸಂಘ, ಸಂಸ್ಥೆಗಳಿಗೆ ನಿವೇಶನ ನೀಡಬೇಕಿದೆ. ತಕರಾರು ತೆಗೆಯದೆ ಒಳ್ಳೆಯ ಕೆಲಸಕ್ಕೆ ಸಹಕಾರ ನೀಡಬೇಕು’ ಎಂದರು.

‘ನನ್ನ ವಿರುದ್ದ ಗೋಪಾಲಸ್ವಾಮಿ ಹಗುರವಾಗಿ ಮಾತನಾಡಿದ್ದಾರೆ. ಮನಬಂದಂತೆ ವರ್ತಿಸುವುದು ಸರಿಯಲ್ಲ. ನಾನು ಯಾರ ಬಗ್ಗೆಯೂ ಟೀಕೆ ಮಾಡುವುದಿಲ್ಲ. ಅರ್ಜಿ ಸಲ್ಲಿಸಿದ ಎಲ್ಲಾ ರೈತರಿಗೆ ಬೆಳೆ ಸಾಲ ವಿತರಿಸಲಾಗಿದೆ. ಇದರಲ್ಲಿ ತಾರತಮ್ಯ ಮಾಡಿಲ್ಲ’ ಎಂದ ಅವರು, ‘ಅಗತ್ಯ ಮಾರ್ಗದರ್ಶನ ನೀಡಬೇಕು. ಅನಗತ್ಯವಾಗಿ ಚರ್ಚೆ ಬೇಡ. ಗೋಪಾಲಸ್ವಾಮಿ ಮಾತನಾಡುವುದನ್ನು ಗಮನಿಸಿದರೆ ಅನಿವಾರ್ಯವಾಗಿ ವಿಧಾನಪರಿಷತ್ ಸದಸ್ಯರಾದಂತೆ ಕಾಣುತ್ತದೆ. ನಾನು ಎರಡು ಸಲ ಶಾಸಕನಾಗಿ ಅಭಿವೃದ್ಧಿ ಕೈಗೊಂಡಿದ್ದೇನೆ. ಅವರು ವಿಧಾನಪರಿಷತ್ ಸದಸ್ಯರಾಗಿದ್ದ ಅವಧಿಯಲ್ಲಿ ಮಾಡಿದ ಕೆಲಸಗಳ ಬಗ್ಗೆ ತಿಳಿಸಲಿ. ವಿಧಾನಸಭಾ ಚುನಾವಣೆಯಲ್ಲಿ ಸೋಲಿನಿಂದ ಧೃತಿಗೆಟ್ಟು ಉದ್ವೇಗಕ್ಕೆ ಒಳಗಾಗಿದ್ದಾರೆ. ಮಾಹಿತಿ ಕೊರತೆಯಿಂದ ಅನಗತ್ಯವಾಗಿ ದೂರುತ್ತಿದ್ದಾರೆ. ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವುದನ್ನು ಕಲಿಯಬೇಕು’ ಎಂದು ಮೂದಲಿಸಿದರು.

‘ಯಾವುದೇ ಸರ್ಕಾರ ಇದ್ದರೂ ಆಯಾ ಕಾಲಘಟ್ಟದಲ್ಲಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಕೈಗೊಂಡಿರುವೆ. ಈ ಬಾರಿ ಗೆಲುವಿನ ಅಂತರ ಕಡಿಮೆ ಇರಬಹುದು. ಆದರೆ, ಹ್ಯಾಟ್ರಿಕ್ ಗೆಲುವು ಪಡೆಯಲು ಕ್ಷೇತ್ರದ ಎಲ್ಲಾ ವರ್ಗದ ಜನರು ಆಶೀರ್ವಾದ ಮಾಡಿದ್ದಾರೆ. ಮುಂದೆಯೂ ಸರ್ಕಾರದಿಂದ ಅನುದಾನ ತಂದು ಇನ್ನಷ್ಟು ಅಭಿವೃದ್ದಿಪಡಿಸಲಾಗುವುದು’ ಎಂದರು.

ಮುಖಂಡರಾದ ಸಿ.ಟಿ. ಅಶೋಕ್ ಕುಮಾರ್, ನಾಗರಾಜು ಇದ್ದರು.

ಗೋಪಾಲಸ್ವಾಮಿ ಆರ್‌‌‌ಟಿಐ ಕಾರ್ಯಕರ್ತರಾಗುವುದು ಸೂಕ್ತ

‘ತಾಲ್ಲೂಕಿನಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಹಕಾರ ಇಲಾಖೆ ಸೇರಿ ಅನೇಕ ಇಲಾಖೆಗಳ ವಿರುದ್ದ ಅರ್ಜಿ ಬರೆಯುವುದು ಕಾಂಗ್ರೆಸ್ ಮುಖಂಡ ಎಂ.ಎ. ಗೋಪಾಲಸ್ವಾಮಿ ಅವರ ಕೆಲಸವಾಗಿದೆ. ಅತ್ಯಂತ ಹೆಚ್ಚು ಅರ್ಜಿಗಳು ತಾಲ್ಲೂಕಿನಲ್ಲಿ ಸಲ್ಲಿಕೆಯಾಗಿವೆ. ಬೇರೆ ಜಿಲ್ಲೆಯ ವ್ಯಕ್ತಿಯೋರ್ವರಿಂದಲೂ ಅರ್ಜಿ ಹಾಕಿಸಲಾಗಿದೆ. ಹಾಗಾಗಿ ಗೋಪಾಲಸ್ವಾಮಿ ಆರ್‌‌‌ಟಿಐ ಕಾರ್ಯಕರ್ತರಾಗುವುದು ಸೂಕ್ತ. ಅರ್ಜಿ ಸಮಿತಿಯ ಅಧ್ಯಕ್ಷರಾಗುವುದು ಒಳಿತು’ ಎಂದು ಗೋಪಾಲಸ್ವಾಮಿ ವಿರುದ್ದ ಶಾಸಕ ಸಿ.ಎನ್. ಬಾಲಕೃಷ್ಣ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT