ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರದಲ್ಲಿ ನಾಲ್ಕು ದಿನ ಸಂಪೂರ್ಣ ಲಾಕ್‌ಡೌನ್‌

ಸೋಮವಾರ, ಬುಧವಾರ, ಶುಕ್ರವಾರ ಅಗತ್ಯ ವಸ್ತು ಖರೀದಿಗೆ ಅವಕಾಶ
Last Updated 18 ಮೇ 2021, 12:08 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ಕೋವಿಡ್‌ ಎರಡನೇ ಅಲೆ ನಿಯಂತ್ರಣಕ್ಕಾಗಿ ವಾರದಲ್ಲಿ ನಾಲ್ಕು ದಿನ ಸಂಪೂರ್ಣ
ಲಾಕ್‍ಡೌನ್ ಮಾಡಲು ತೀರ್ಮಾನಿಸಲಾಗಿದೆ.

ಪ‍್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಂಗಳವಾರ ವಿಡಿಯೊ ಸಂವಾದ ನಡೆಸಿದ ಬಳಿಕ ಸುದಿಗೋಷ್ಠಿಯಲ್ಲಿ
ಮಾತನಾಡಿದ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಪ್ರತಿ ಸೋಮವಾರ, ಬುಧವಾರ ಹಾಗೂ ಶುಕ್ರವಾರ
ಬೆಳಿಗ್ಗೆ 6 ರಿಂದ 10ರ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಡಲಾಗುವುದು. ಆಸ್ಪತ್ರೆ,
ಔಷಧಿ ಮಳಿಗೆಗಳು, ಹಾಲಿನ ಬೂತ್, ಪೆಟ್ರೋಲ್ ಬಂಕ್‍ಗಳು, ಹೋಟೆಲ್‌ನಲ್ಲಿ ಪಾರ್ಸೆಲ್‌ ಸೇವೆ
ಎಂದಿನಂತೆ ಇರಲಿದೆ. ಮೇ 24ರವರೆಗೂ ಈ ಲಾಕ್‌ಡೌನ್‌ ಜಾರಿಯಲ್ಲಿರುತ್ತದೆ ಎಂದು ತಿಳಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಸೋಂಕು ಹೆಚ್ಚಿರುವುದರಿಂದ ಹೋಂ ಐಸೋಲೆಷನ್‍ನಲ್ಲಿರುವ 60
ವರ್ಷ ಮೇಲ್ಪಟ್ಟ ಸೋಂಕಿತರನ್ನು ಗುರುತಿಸಿ ಚಿಕಿತ್ಸೆ ನೀಡಲಾಗುವುದು. ಹೋಂ ಕ್ವಾರಂಟೈನಲ್ಲಿ ಇರುವವರನ್ನು ಕೋವಿಡ್ ಕೇರ್ ಸೆಂಟರ್‌ಗೆ ಕರೆತರಲಾಗುವುದು. ಪ್ರತಿ ತಾಲ್ಲೂಕಿನಲ್ಲೂ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪ ಸಂಖ್ಯಾತರ ಇಲಾಖೆ ಹಾಸ್ಟೆಲ್‌ಗಳನ್ನು ಸೋಂಕಿತರ ಚಿಕಿತ್ಸೆಗೆ ಬಳಸಿಕೊಳ್ಳಲಾಗುವುದು. 27 ಕೋವಿಡ್‌ ಆರೈಕೆ ಕೇಂದ್ರ ತೆರೆಯಲಾಗಿದ್ದು, ವೈದ್ಯರು, ಶುಶ್ರೂಷಕರನ್ನು ನಿಯೋಜಿಸಲಾಗಿದೆ. ಪ್ರತಿ ತಾಲ್ಲೂಕಿನಿಂದ 100ರೋಗಿಗಳನ್ನು ಕೇಂದ್ರಕ್ಕೆ ದಾಖಲಿಸಲಾಗುವುದು. ಕೊರೊನಾ ಸೋಂಕಿತರಿಗೆ ಮಾತ್ರೆ, ಊಟ ಹಾಗೂ ವಸತಿಗೆ ಕೊರತೆಯಾಗದಂತೆ ಕ್ರಮ ವಹಿಸಲಾಗಿದೆ ಎಂದು ಹೇಳಿದರು.

ಗ್ರಾಮೀಣ ಭಾಗದಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪದಾರ್ಥ ಪಡೆಯಲು ಸಾರ್ವಜನಿಕರಿಗೆ
ಅನುಕೂಲವಾಗುವ ಉದ್ದೇಶದಿಂದ ಲಾಕ್‍ಡೌನ್‍ನಿಂದ ವಿನಾಯಿತಿ ನೀಡಲಾಗಿದೆ. ಪ್ರತಿದಿನ ಬೆಳಗ್ಗೆ 8
ರಿಂದ 12 ಹಾಗೂ ಸಂಜೆ 4 ರಿಂದ 8ರ ವರೆಗೆ ಆಹಾರ ಸಾಮಗ್ರಿ ವಿತರಿಸಲಾಗುವುದು. ಕೊರೊನಾ
ಸೋಂಕಿತರ ಮನೆಗಳಿಗೆ ನೇರವಾಗಿ ಪಡಿತರ ತಲುಪಿಸಲು ತಹಶೀಲ್ದಾರ್‌ಗಳಿಗೆ ಸೂಚಿಸಲಾಗಿದೆ
ಎಂದರು.

ಜಿಲ್ಲೆಯಲ್ಲಿ 350 ಆಕ್ಸಿಜನ್ ಸಹಿತ ಬೆಡ್‍ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಮುಂದಿನ ಎರಡು
ದಿನಗಳಲ್ಲಿ 4 ಕೆ.ಎಲ್ ವೈದ್ಯಕೀಯ ಆಮ್ಲಜನಕ ಪೂರೈಕೆ ಆಗಲಿದೆ. 50 ವೆಂಟಿಲೇಟರ್‌ಗೆ ಪ್ರಸ್ತಾವನೆ
ಕಳುಹಿಸಿದ್ದು, ವಾರದಲ್ಲಿ ಅದು ಲಭ್ಯವಾಗುವ ನಿರೀಕ್ಷೆಯಿದೆ. ಜಿಲ್ಲೆಯಲ್ಲಿ ರೆಮ್‌ಡಿಸಿವಿರ್‌ ಚುಚ್ಚುಮದ್ದಿಗೆ
ಯಾವುದೇ ಕೊರತೆಯಿಲ್ಲ. ಸಾರ್ವಜನಿಕರು ಇಲ್ಲಸಲ್ಲದ ವದಂತಿಗಳಿಗೆ ಕಿವಿಗೊಡಬಾರದು ಎಂದು
ವಿವರಿಸಿದರು.

ಖಾಸಗಿ ಆಸ್ಪತ್ರೆಗಳು ಕೋವಿಡ್ ಚಿಕಿತ್ಸೆಗೆ ಸರ್ಕಾರ ನಿಗದಿ ಪಡಿಸಿದ ದರಕ್ಕಿಂತ ಹೆಚ್ಚು ಶುಲ್ಕ ಪಡೆಯುತ್ತಿವೆ
ಎಂಬ ದೂರು ಬಂದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳ ಮೇಲೆ ನಿಗಾ ಇಡಲು ತಂಡ ರಚಿಸಿದ್ದು, ನಿತ್ಯ ತಂಡದ ಅಧಿಕಾರಿಗಳು ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿವೆ. ಹೆಚ್ಚು ಹಣ ಪಡೆದಿದ್ದಾರೆ
ವಾಪಸ್ ಕೊಡಿಸಲಾಗುವುದು. ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಹಣ ಸುಲಿಗೆ ಬಗ್ಗೆಯೂ ಗಮನ ಹರಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸೋಂಕಿತರು ಹತ್ತು ದಿನದ ಬಳಿಕ ಆಸ್ಪತ್ರೆಗೆ ಬಂದು ದಾಖಲಾಗುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳು ಕಡೆ
ಕ್ಷಣದಲ್ಲಿ ಹಿಮ್ಸ್ ಕೋವಿಡ್ ಆಸ್ಪತ್ರೆಗೆ ಸೋಂಕಿತರನ್ನು ಕಳುಹಿಸುತ್ತಿವೆ. ಹಾಗಾಗಿ ಸೋಂಕಿತರ ಮರಣ
ಪ್ರಮಾಣ ಹೆಚ್ಚಾಗಿದೆ. ಇದನ್ನು ಕಡಿಮೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು
ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಉಸ್ತುವಾರಿ ಕಾರ್ಯದರ್ಶಿ ನವೀನ್‍ರಾಜ್ ಸಿಂಗ್, ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಶ್ರೀನಿವಾಸ್‌ಗೌಡ,
ಜಿಲ್ಲಾ ಪಂಚಾಯಿತಿ ಸಿಇಒ ಬಿ.ಎ. ಪರಮೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT