ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಕಲಗೂಡು: ಹೆದ್ದಾರಿ ಬದಿ ಅಸಹನೀಯ ವಾತಾವರಣ

Published 9 ಫೆಬ್ರುವರಿ 2024, 6:39 IST
Last Updated 9 ಫೆಬ್ರುವರಿ 2024, 6:39 IST
ಅಕ್ಷರ ಗಾತ್ರ

ಅರಕಲಗೂಡು: ಪಟ್ಟಣದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿ ಬದಿ ಸಮರ್ಪಕವಾಗಿ ಚರಂಡಿ ಹಾಗೂ ಪಾದಚಾರಿ ರಸ್ತೆ ನಿರ್ಮಿಸದೇ ನಿರ್ಲಕ್ಷ್ಯ ವಹಿಸಿದ್ದು, ಜನರ ಓಡಾಟ ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ.

ಹೊಳೆನರಸೀಪುರ- ಮಲ್ಲಿಪಟ್ಟಣ ಹಾಗೂ ಹಾಸನ- ರಾಮನಾಥಪುರ, ಪಿರಿಯಾಪಟ್ಟಣ ಮಾರ್ಗವಾಗಿ ಪಟ್ಟಣದಲ್ಲಿ ಮುಖ್ಯ ರಸ್ತೆ ಹಾದು ಹೋಗಿದೆ. ರಸ್ತೆ ಮಾರ್ಗದ ಎರಡು ಬದಿ ಉತ್ತಮವಾದ ಚರಂಡಿ, ಪಾದಚಾರಿ ರಸ್ತೆ ನಿರ್ಮಿಸದ ಕಾರಣ ಸಾರ್ವಜನಿಕರು ತಿರುಗಾಡಲೂ ಕಷ್ಟಕರವಾಗಿದೆ.

ಪಟ್ಟಣದ ಕೋಟೆ ಕೊತ್ತಲು ಗಣಪತಿ ದೇವಸ್ಥಾನ ಮುಂಭಾಗದ ಮಲ್ಲಿಪಟ್ಟಣ ತಿರುವಿನಲ್ಲಿ, ಚರಂಡಿ ಕಿತ್ತು ವರ್ಷಗಳೇ ಉರುಳಿವೆ. ಪಟ್ಟಣದ ಮುಖ್ಯ ರಸ್ತೆ ಮಾರ್ಗದ ರಸ್ತೆ ಬದಿ ವೈಜ್ಞಾನಿಕವಾಗಿ ಚರಂಡಿ ವ್ಯವಸ್ಥೆ ಹಾಗೂ ಪಾದಚಾರಿ ರಸ್ತೆ ಇಲ್ಲವಾಗಿದೆ.

ಕೆಲವು ಕಡೆ ಚರಂಡಿಗಳು ಬಾಯ್ತೆರೆದುಕೊಂಡಿದ್ದು, ದುರ್ವಾಸನೆಯಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಮಳೆಗಾಲ ಬಂತೆಂದರೆ ಚರಂಡಿಗಳು ತುಂಬಿ, ರಸ್ತೆ ಮೇಲೆ ಹರಿಯುತ್ತದೆ. ಕೊಳಚೆ ನೀರು ಎಲ್ಲೆಂದರಲ್ಲಿ ಹರಿದು ಅನಾರೋಗ್ಯದ ತಾಣವಾಗುತ್ತದೆ.

ಪಟ್ಟಣದ ಕೋಟೆ ಮಲ್ಲಿಪಟ್ಟಣ ಮಾರ್ಗದಲ್ಲಿ ಚರಂಡಿ ಕಿತ್ತು ಅಧ್ವಾನವಾಗಿದೆ. ಪುನೀತ್ ರಾಜಕುಮಾರ್ ಸರ್ಕಲ್‌ನಲ್ಲಿ ಚರಂಡಿ ಹಾಳಾಗಿ ಬಾಯ್ತೆರೆದುಕೊಂಡು ದುರ್ವಾಸನೆ ಬೀರುತ್ತಿದೆ. ಇಲ್ಲಿ ಶುದ್ಧ ಕುಡಿಯುವ ನೀರಿನ ಘಟಕವಿದ್ದು, ನೀರು ಕೊಂಡೊಯ್ಯಲು ಬರುವ ಸಾರ್ವಜನಿಕರು, ಸ್ಥಳೀಯ ನಿವಾಸಿಗಳು ಮೂಗು ಮುಚ್ಚಿಕೊಳ್ಳಬೇಕಿದೆ.

ತಾಲ್ಲೂಕು ಕಚೇರಿ ಪಕ್ಕದಲ್ಲಿರುವ ಕಾರಣ ತಾಲ್ಲೂಕಿನ ವಿವಿಧ ಹಳ್ಳಿಗಳಿಂದ ಬರುವ ರೈತರು ಹಾಗೂ ಶಾಲಾ– ಕಾಲೇಜು ವಿದ್ಯಾರ್ಥಿಗಳು ಕೊತ್ತಲು ಗಣಪತಿ ದೇವಸ್ಥಾನದ ಆವರಣದಲ್ಲಿ ಕೂರುತ್ತಾರೆ. ಪಕ್ಕದಲ್ಲಿಯೇ ಇರುವ ಚರಂಡಿ ದುರ್ವಾಸನೆಯಿಂದ ಕಂಗೆಡುವಂತಾಗಿದೆ.

ಮುಖ್ಯವಾಗಿ ಕೊಡ್ಲಿಪೇಟೆ, ಶನಿವಾರಸಂತೆ, ಸೋಮವಾರಪೇಟೆ ಕಡೆಗೆ ಓಡಾಡುವ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಮಲ್ಲಿಪಟ್ಟಣ ಮಾರ್ಗದ ಸರ್ಕಲ್‌ನಲ್ಲಿ ನಿಲುಗಡೆ ಮಾಡಲಾಗುತ್ತದೆ. ಬಸ್‌ಗಾಗಿ ಕಾಯುವ ಜನರು ದುರ್ವಾಸನೆ ಸಹಿಸಿಕೊಂಡೇ ನಿಲ್ಲಬೇಕಿದೆ. ಬಸ್ ಹತ್ತುವಾಗ ಹಾಗೂ ಇಳಿಯುವಾಗ ಜನರು ನೂಕುನುಗ್ಗಲಿನಲ್ಲಿ ಚರಂಡಿ ಕಡೆಗೆ ಬೀಳುವುದು ತಪ್ಪಿಲ್ಲ.

ಕೋಟೆ ಮಲ್ಲಿಪಟ್ಟಣ ಸರ್ಕಲ್ ತಿರುವಿನಲ್ಲಿ ಎರಡು ವರ್ಷಗಳಿಂದ ಚರಂಡಿ ಹಾಳಾಗಿದೆ. ಲೋಕೋಪಯೋಗಿ ಇಲಾಖೆ, ಪಟ್ಟಣ ಪಂಚಾಯಿತಿ ಸರಿಪಡಿಸಲಿ ಎಂದು ಕಾಲಾಹರಣ ಮಾಡುತ್ತಿದ್ದರೆ, ಚರಂಡಿ ಅವ್ಯವಸ್ಥೆಗೂ, ತಮಗೂ ಸಂಬಂಧ ಇಲ್ಲ ಎಂಬಂತೆ ಪಟ್ಟಣ ಪಂಚಾಯಿತಿ ವರ್ತಿಸುತ್ತಿದೆ. ಜನಸಾಮಾನ್ಯರು ಸಮಸ್ಯೆ ಅನುಭವಿಸುವುದು ಮಾಮೂಲಿಯಾಗಿದೆ ಎಂಬುದು ಸಾರ್ವಜನಿಕರ ಆಕ್ರೋಶ.

ಮುಖ್ಯವಾಗಿ ರಾಜ್ಯ ಹೆದ್ದಾರಿ ಮಾರ್ಗದಲ್ಲಿ ವೈಜ್ಞಾನಿಕವಾಗಿ ಚರಂಡಿ, ಪಾದಚಾರಿ ಮಾರ್ಗ ಇಲ್ಲದೇ ಇರುವುದು ಪಟ್ಟಣದ ಸೌಂದರ್ಯಕ್ಕೂ ಮಾರಕವಾಗಿದೆ. ಕ್ಷೇತ್ರದ ಜನಪ್ರತಿನಿಧಿ ಹಾಗೂ ಅಧಿಕಾರಿಗಳು ಸಮಸ್ಯೆ ಬಗೆಹರಿಸಬೇಕು ಎಂಬುದು ಜನರ ಒತ್ತಾಯ.

ರಾಜ್ಯ ಹೆದ್ದಾರಿಯಲ್ಲಿ ಪಾದಚಾರಿ ಮಾರ್ಗ ನಿರ್ಮಿಸಿಲ್ಲ. ಪಾದಚಾರಿಗಳ ಓಡಾಟ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಸಾಕಷ್ಟು ಅಡಚಣೆಯಾಗಿದೆ
-ಸಂತೋಷ್ ವರ್ತಕ
ರಾಜ್ಯ ಹೆದ್ದಾರಿ ಬದಿ ಚರಂಡಿ ನಿರ್ಮಿಸಲು ಇಲಾಖೆಯಲ್ಲಿ ಅನುದಾನದ ಕೊರತೆ ಇದೆ. ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ.
- ಬಿಂದು, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್
ಪಂಚಾಯಿತಿ ಎಂಜಿನಿಯರ್‌ಗೆ ಹೇಳಿದರೆ ಲೋಕೋಪಯೋಗಿ ಇಲಾಖೆಯತ್ತ ಬೊಟ್ಟು ಮಾಡುತ್ತಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ತ್ರಿಶಂಕು ಸ್ಥಿತಿ ನಿರ್ಮಾಣವಾಗಿದೆ
- ಎಚ್.ಎಸ್. ರಶ್ಮಿ ಪ.ಪಂ. ಸದಸ್ಯೆ
ಹೆದ್ದಾರಿ ಬದಿ ಚರಂಡಿ ನಿರ್ಮಿಸುವುದು ಲೋಕೋಪಯೋಗಿ ಇಲಾಖೆ ಜವಾಬ್ದಾರಿ. ಈ ಕುರಿತು ಅವರ ಗಮನಕ್ಕೆ ತರಲಾಗುವುದು
- ಜಗದೀಶ್ ಪ.ಪಂ. ಎಂಜಿನಿಯರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT