ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶುಂಠಿ ಧಾರಣೆ ಕುಸಿತ: ವೆಚ್ಚದ ಅರ್ಧದಷ್ಟೂ ಆದಾಯ ಸಿಗುವುದು ಕಷ್ಟ

Published 29 ಆಗಸ್ಟ್ 2024, 23:30 IST
Last Updated 29 ಆಗಸ್ಟ್ 2024, 23:30 IST
ಅಕ್ಷರ ಗಾತ್ರ

ಕೊಣನೂರು: ಮಾರುಕಟ್ಟೆಯಲ್ಲಿ ಹಸಿ ಶುಂಠಿ ಧಾರಣೆಯು ದಿಢೀರ್ ಕುಸಿತ ಕಂಡಿದೆ.

ಮತ್ತೊಂದೆಡೆ ಕೊಳೆರೋಗದಿಂದಾಗಿ ಅವಧಿಗೆ ಮುನ್ನವೇ ಶುಂಠಿ ಕೊಯ್ಲು ಆರಂಭಗೊಂಡಿದ್ದು, ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಫೆಬ್ರುವರಿಯಲ್ಲಿ ಶುಂಠಿ ನಾಟಿ ಆಗಿದ್ದು, 6 ತಿಂಗಳಾದರೂ ನಿರೀಕ್ಷೆಗೆ ತಕ್ಕಂತೆ ಬೆಳವಣಿಗೆ ಆಗಿಲ್ಲ. ನಿರಂತರ ಮಳೆಯಿಂದಾಗಿ ಕೊಳೆರೋಗ ಆವರಿಸಿದೆ. ಹೀಗಾಗಿ, ಫಸಲು ಕರಗಿ ಹೋಗುವ ಬದಲು ಸಿಕ್ಕಷ್ಟು ಸಿಗಲಿ ಎಂದು ಜುಲೈ ಕೊನೆಯ ವಾರದಿಂದಲೇ ರೈತರು ಶುಂಠಿ ಕಟಾವು ಮಾಡಿ ಮಾರಾಟ ಮಾಡುತ್ತಿದ್ದಾರೆ.

60 ಕೆ.ಜಿ ತೂಕದ ಚೀಲಕ್ಕೆ ಆರಂಭದಲ್ಲಿ ₹2 ಸಾವಿರ ಬೆಲೆ ದೊರಕಿತ್ತು. ಕೊಯ್ಲು ಹೆಚ್ಚಾದ ಕಾರಣ ಈಗ ದರವು ₹1,100ಕ್ಕೆ ಕುಸಿದಿದೆ.

ಬೆಲೆಯ ಏರಿಳಿತ:

2023ರ ಜನವರಿಯಲ್ಲಿ ಹಸಿ ಶುಂಠಿ ಬೆಲೆ ಪ್ರತಿ ಚೀಲಕ್ಕೆ (60 ಕೆ.ಜಿ) ₹2,000ದಿಂದ ₹2,200 ಇತ್ತು. ಮಾರ್ಚ್‌– ಏಪ್ರಿಲ್‌ನಲ್ಲಿ ₹5 ಸಾವಿರಕ್ಕೆ ತಲುಪಿತ್ತು. ಮೇ ಮತ್ತು ಜೂನ್‌ನಲ್ಲಿ ₹10,000ರಿಂದ ₹11,000ದವರೆಗೂ ಮುಟ್ಟಿತ್ತು. 

ಅದೇ ವರ್ಷದ ಜುಲೈ–ಆಗಸ್ಟ್‌ನಲ್ಲಿ ಹೊಸ ಶುಂಠಿಯು ಮಾರುಕಟ್ಟೆಗೆ ಬಂದಿದ್ದರಿಂದ ಬೆಲೆಯು ₹3,500ಕ್ಕೆ ಇಳಿದಿತ್ತು. ಸೆಪ್ಟೆಂಬರ್‌ನಲ್ಲಿ ₹3,800 ಹಾಗೂ ಅಕ್ಟೋಬರ್‌ನಲ್ಲಿ ₹4 ಸಾವಿರದಿಂದ ₹5 ಸಾವಿರ ತಲುಪಿತ್ತು. ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ₹4500-₹4800 ಬೆಲೆ ಇದ್ದರೆ, ಪ್ರಸಕ್ತ ವರ್ಷದ ಜನವರಿ ಮತ್ತು ಫೆಬ್ರುವರಿಯಲ್ಲಿ ₹4000– ₹4500 ಬೆಲೆ ಇತ್ತು ಎಂದು ವ್ಯಾಪಾರಿಗಳು ಹೇಳುತ್ತಾರೆ.

ಕಳೆದ ವರ್ಷ ಶುಂಠಿ ಬೆಲೆ ಏರಿಕೆ ಜೊತೆಗೆ ಬಿತ್ತನೆ ಬೀಜ ಗೊಬ್ಬರ ಕೂಲಿ ದರವೂ ಏರಿತ್ತು. ಇದರಿಂದಾಗಿ ಉತ್ಪಾದನಾ ವೆಚ್ಚ ಹೆಚ್ಚಾಗಿದ್ದು ಈಗ ಬೆಲೆ ಕುಸಿದಿದೆ
ಕೆ.ಟಿ. ಸತೀಶ್ ಶುಂಠಿ ಬೆಳೆಗಾರ
ಅರಕಲಗೂಡು ತಾಲ್ಲೂಕಿನಲ್ಲಿ ಮಳೆಯಿಂದ ಕೊಳೆರೋಗ ಬಾಧಿಸಿದೆ. ಕಳೆದ ವರ್ಷಕ್ಕಿಂತ ಹೆಚ್ಚು ಶುಂಠಿ ಉತ್ಪಾದನೆ ಆಗಿದೆ. ಹೀಗಾಗಿ ಬೆಲೆ ಕುಸಿದಿದೆ
ಡಿ. ರಾಜೇಶ್ ಹಿರಿಯ ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ
ಕೂಲಿ ವೆಚ್ಚ ಸಿಗುವುದು ಕಷ್ಟಕರ
‘ಈ ಬಾರಿ ಬಿತ್ತನೆ ಶುಂಠಿ ಬೆಲೆ 60ಕೆ.ಜಿ.ಗೆ ₹5500ರಿಂದ ₹6500 ವರೆಗೆ ಇತ್ತು. ಜೊತೆಗೆ ಕೂಲಿ ಪೈಪ್‌ಲೈನ್‌ ಕೋಳಿಗೊಬ್ಬರ ರಾಸಾಯನಿಕಗಳ ದರಗಳಲ್ಲೂ ಗಣನೀಯವಾಗಿ ಏರಿಕೆಯಾಗಿದೆ. 1 ಎಕರೆಯಲ್ಲಿ ಶುಂಠಿ ಬೆಳೆಯಲು ಈ ವರ್ಷ ₹5.5ಲಕ್ಷದಿಂದ ₹6 ಲಕ್ಷ ವೆಚ್ಚವಾಗಿದೆ’ ಎಂದು ರೈತರು ವಿವರಿಸುತ್ತಾರೆ. ಈಗಿನ ಬೆಲೆಯಲ್ಲಿ ಒಂದು ಎಕರೆಯಲ್ಲಿ ಬೆಳೆದ ಶುಂಠಿ ಮಾರಾಟ ಮಾಡಿದರೆ ₹2 ಲಕ್ಷದಿಂದ ₹2.5 ಲಕ್ಷ ಸಿಗುತ್ತಿದೆ. ಬೆಳೆಗಾರರು ಈಗಾಗಲೇ ಎಕರೆಗೆ ₹5 ಲಕ್ಷಕ್ಕೂ ಖರ್ಚು ಮಾಡಿದ್ದು ಮಾಡಿದ್ದ ಖರ್ಚಿನ ಅರ್ಧದಷ್ಟು ಮಾತ್ರ ಆದಾಯ ಸಿಗುವಂತಾಗಿದೆ ಎಂದು ಹೇಳುತ್ತಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT