ಗುರುವಾರ , ಆಗಸ್ಟ್ 5, 2021
23 °C
ಸಂಪೂರ್ಣ ಲಾಕ್‍ಡೌನ್‌ಗೆ ಒತ್ತಾಯ

ಹಾಸನ: ಕೊರೊನಾ ತಡೆಯುವಲ್ಲಿ ಸರ್ಕಾರ ವಿಫಲ: ಕಾಂಗ್ರೆಸ್ ಮುಖಂಡ ದೇವರಾಜೇಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಹಾಸನ: ರಾಜ್ಯದಲ್ಲಿ ಕೊರೊನಾ ಸೋಂಕು ತಡೆಗಟ್ಟುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಕಾಂಗ್ರೆಸ್ ಮುಖಂಡ
ದೇವರಾಜೇಗೌಡ ಆರೋಪಿಸಿದರು.

ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಹುತೇಕ ಮಂದಿ ದುಡಿಮೆ ಇಲ್ಲದೆ,ಆದಾಯವೂ ಇಲ್ಲದೆ ವಲಸೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಸಂಪೂರ್ಣ ಲಾಕ್‌ಡೌನ್‌ ಮಾಡುವುದರಿಂದ ಸೋಂಕು ಹರಡುವುದನ್ನು ತಪ್ಪಿಸಬಹುದು. ಸೋಂಕು ಕಾಣಿಸಿಕೊಂಡ ದಿನದಿಂದಲೂ ಸೂಕ್ತ ಕ್ರಮ ಕೈಗೊಳ್ಳದೇ ಮನಸ್ಸಿಗೆ ಬಂದಂತೆ ನಿರ್ಧಾರ ಕೈಗೊಳ್ಳುವ ಮೂಲಕ ಜನರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಕಿಡಿ ಕಾರಿದರು.

ರೋಗ ಇಲ್ಲದೆ ಇದ್ದ ಸಂದರ್ಭದಲ್ಲಿ ಲಾಕ್‍ಡೌನ್ ಮಾಡಲಾಗಿತ್ತು. ಆದರೆ, ಸೋಂಕು ಮೀತಿ ಮೀರಿರುವ ಸಂದರ್ಭದಲ್ಲಿ
ಲಾಕ್‌ಡೌನ್‌ ತೆರವು ಮಾಡಲಾಗಿದೆ. ಸರ್ಕಾರದ ಬೇಜವಾಬ್ದಾರಿ ನಡವಳಿಕೆಯಿಂದಾಗಿ ಸೋಂಕು ಸಮುದಾಯಕ್ಕೆ ಹರಡುತ್ತಿದೆ. ಇಂಥ ಸಂದರ್ಭದಲ್ಲೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಸಚಿವರು ಹಾಗೂ ಅಧಿಕಾರಿಗಳ ಮಧ್ಯೆ ಹೊಂದಾಣಿಕೆ ಇಲ್ಲದೆ ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಕಳಪೆ ಗುಣಮಟ್ಟದ ಪಿಪಿಇ ಕಿಟ್ ವಿತರಣೆಯಿಂದ ಕೊರೊನಾ ವಾರಿಯರ್ಸ್ ಗಳಿಗೂ ರೋಗ ಹರಡಿದೆ. ಕೊರೊನಾ ಸಾಮಗ್ರಿ ಖರೀದಿಸುವಲ್ಲೂ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಪ್ರಧಾನಮಂತ್ರಿ ಅವರು ಘೋಷಣೆ ಮಾಡಿದ ₹ 20 ಲಕ್ಷ ಕೋಟಿ ಪರಿಹಾರ ಸೂಕ್ತ ರೀತಿ ಬಳಕೆಯಾಗಿಲ್ಲ. ಹಾಗೆಯೇ ರಾಜ್ಯದ ಮುಖ್ಯಮಂತ್ರಿ ಘೋಷಣೆ ಮಾಡಿದ ₹ 660 ಕೋಟಿ ಪರಿಹಾರವೂ ಸರಿಯಾದ ರೀತಿಯಲ್ಲಿ ಹಂಚಿಕೆಯಾಗಿಲ್ಲ ಎಂದರು.

ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಹಾಸಿಗೆಗಳ ಕೊರತೆ ಎದುರಾಗಿದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕಟ್ಟಿಸಿದ್ದ 600 ಹಾಸಿಗೆಗಳ ಆಸ್ಪತ್ರೆಯನ್ನು ಜೆಡಿಎಸ್ ಮುಖಂಡರು ದ್ವೇಷ ರಾಜಕಾರಣದಿಂದ ನೆಲಸಮಗೊಳಿಸಿದ್ದು ಸಮಸ್ಯೆಗಳಿಗೆ ಕಾರಣ ಎಂದು ಆರೋಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು