ಸೋಮವಾರ, ಜನವರಿ 20, 2020
19 °C
ಬಲ್ಕ್‌ ಮಿಲ್ಕ್‌ ಕೂಲರ್‌ ಕೇಂದ್ರಕ್ಕೆ ಶಾಸಕ ಎಚ್‌.ಡಿ.ರೇವಣ್ಣ ಚಾಲನೆ

ಹಾಮೂಲ್‌ಗೆ ₹ 50 ಕೋಟಿ ಲಾಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಹಾಸನ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಹಾಮೂಲ್‌) 2019–20ನೇ ಸಾಲಿನಲ್ಲಿ ನವೆಂಬರ್‌ ಅಂತ್ಯಕ್ಕೆ ಸುಮಾರು ₹ 50 ಕೋಟಿ ತೆರಿಗೆ ಪೂರ್ವ ಲಾಭ ಗಳಿಸಿದೆ ಎಂದು ಒಕ್ಕೂಟದ ಅಧ್ಯಕ್ಷರೂ ಆದ ಶಾಸಕ ಎಚ್‌.ಡಿ.ರೇವಣ್ಣ ಹೇಳಿದರು.

ಹಾಸನ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಆವರಣದಲ್ಲಿ ಬಲ್ಕ್‌ ಮಿಲ್ಕ್‌ ಕೂಲರ್‌ ಕೇಂದ್ರ, ಸ್ವಯಂ ಚಾಲಿತ ಹಾಲು ಸಂಗ್ರಹ ಮತ್ತು ಪರೀಕ್ಷಾ ಘಟಕಗಳ ಚಾಲನಾ ಕಾರ್ಯಾಗಾರ ಹಾಗೂ ಹಾಲು ಉತ್ಪಾದಕರ ಸಂಘಗಳ ಕುಂದು ಕೊರತೆಗಳ ಸಮಾಲೋಚನ ಸಭೆಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಪ್ರತಿ ಕೆ.ಜಿ.ಗೆ ₹ 1 ರಂತೆ ಶೇಖರಣಾ ಖರೀದಿ ದರ ಹೆಚ್ಚಿಸಿ ಹಾಲು ಉತ್ಪಾದಕರಿಗೆ ಪ್ರತಿ ಕೆ.ಜಿ.ಗೆ ₹ 28.40 ರಂತೆ ಗರಿಷ್ಟ ದರ ಪಾವತಿಸಲು ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಿದ್ದು, ಅತಿ ಹೆಚ್ಚು ದರ ನೀಡುವ ಒಕ್ಕೂಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಇದರಿಂದ ಸುಮಾರು ₹ 12 ಕೋಟಿ ಹೆಚ್ಚುವರಿ ಖರೀದಿ ವೆಚ್ಚ ತಗಲುತ್ತದೆ ಎಂದು ಮಾಹಿತಿ ನೀಡಿದರು.

ಒಕ್ಕೂಟದ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಾಗ ₹ 25 ಕೋಟಿ ವಹಿವಾಟು ಇತ್ತು. ಈಗ ₹ 1300 ಕೋಟಿ ತಲುಪಿದೆ. ಪ್ರತಿ ವರ್ಷ ‘ಎ’ ಗ್ರೇಡ್‌ ಪಡೆಯುತ್ತಿದ್ದು, ಬ್ಯಾಂಕ್‌ನಲ್ಲಿ ₹ 40 ಕೋಟಿ ಠೇವಣಿ ಇರಿಸಲಾಗಿದೆ ಎಂದರು.

ಪ್ರಸಕ್ತ ಸಾಲಿನಲ್ಲಿ 105 ಸಂಘಗಳಲ್ಲಿ ಬಲ್ಕ್‌ ಮಿಲ್ಕ್ ಕೂಲರ್ (ಬಿಎಂಸಿ) ಘಟಕಗಳನ್ನು ಅಳವಡಿಸಲಾಗಿದೆ. ಬಿಎಂಸಿ ಅಳವಡಿಕೆಗೆ ಸುಮಾರು ₹ 8 ಕೋಟಿ ಅನುದಾನ ನೀಡಲಾಗಿದ್ದು, 400 ಸಂಘಗಳಿಂದ ನಿತ್ಯ 3.20 ಲಕ್ಷ ಲೀಟರ್‌ ಹಾಲನ್ನು ಸಂಘಗಳಲ್ಲಿಯೇ ಶೈತೀಕರಿಸಿ ಟ್ಯಾಂಕರ್‌ಗಳಲ್ಲಿ ಡೇರಿಗೆ ತರಲಾಗುವುದು. ಇದರಿಂದ ಹಾಲಿನ ಗುಣಮಟ್ಟ ಉತ್ತಮಗೊಳ್ಳುವುದರ ಜತೆಗೆ ಸಂಘಗಳಲ್ಲಿ ಹಾಲಿನ ಶೇಖರಣೆ ಹೆಚ್ಚಳ ಮತ್ತು ಆರ್ಥಿಕ ಅಭಿವೃದ್ಧಿಗೆ ಕಾರಣವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಸುಮಾರು 800 ಸಂಘಗಳಲ್ಲಿ ದೈನಂದಿನ ವ್ಯವಹಾರಗಳಲ್ಲಿ ಹಾಲಿನ ಪರೀಕ್ಷೆ ಮತ್ತು ನಿಖರವಾದ ತೂಕಕ್ಕಾಗಿ ಸ್ವಯಂ ಚಾಲಿತ ಹಾಲು ಸಂಗ್ರಹ ಘಟಕ (ಎಎಂಸಿಯು) ಅಳವಡಿಸಲಾಗಿದೆ. ಇದರಿಂದ ಹಾಲು ಉತ್ಪಾದಕರಿಗೆ ಆಯಾ ದಿನವೇ ಅವರು ಪೂರೈಸಿದ ಹಾಲಿನ ತೂಕ, ಗುಣಮಟ್ಟ ಚೀಟಿ ನಿಡಲಾಗುವುದು. 1200 ಸಂಘಗಳ್ಲಲಿ ಎಎಂಸಿಯು ಅಳವಡಿಸಿ, ಎಲ್ಲಾ ಸಂಘಗಳ ವ್ಯವಹಾರ ಪೂರ್ಣವಾಗಿ ಗಣಕೀಕರಣಗೊಳಿಸಲಾಗುವುದು ಎಂದರು.

ಯುಎಚ್‌ಟಿ ಹಾಲಿನ ಉತ್ಪಾದನಾ ಘಟಕದ ಸಾಮರ್ಥ್ಯವನ್ನು ನಿತ್ಯ 2 ರಿಂದ 4 ಲಕ್ಷ ಲೀಟರ್‌ಗೆ ಹೆಚ್ಚಿಸಿದ್ದು, ವಿಸ್ತರಣಾ ಕಾಮಗಾರಿ ವೆಚ್ಚ ಅಂದಾಜು ₹ 66 ಕೋಟಿ ಆಗಿದೆ. ಟರ್ನ್‌ ಕೀ ಆಧಾರದ ಮೇಳೆ ಯಂತ್ರೋಪಕರಣಗಳ ಅಳವಡಿಕೆ, ಸಿವಿಲ್‌ ಕಾಮಗಾರಿ ನಡೆಸಲಾಗಿದೆ ಎಂದು ಹೇಳಿದರು.

ಮೈಸೂರು ರಸ್ತೆಯಲ್ಲಿ ₹ 5 ಕೋಟಿ ವೆಚ್ಚದಲ್ಲಿ ಕಲ್ಯಾಣ ಮಂಟಪ ನಿರ್ಮಿಸುತ್ತಿದ್ದು, ತಿಂಗಳಲ್ಲಿ ಸೇವೆಗೆ ಸರ್ಮಪಿಸಲಾಗುವುದು. ಹಾಲು ಉತ್ಪಾದಕರಿಗೆ ಶೇಕಡಾ 50 ರಿಯಾಯಿತಿ ನೀಡಲಾಗುವುದು. ಅಲ್ಲದೇ ಲಾರಿಗಳಲ್ಲಿ ಹಾಲು ಕಳವು ಮಾಡುತ್ತಿರುವವರನ್ನು ಹಿಡಿದು ಕೊಡಬೇಕು. ತಪ್ಪು ಮಾಡಿದ ಸಿಬ್ಬಂದಿಯಿಂದ ಹಣ ವಸೂಲು ಮಾಡಿ ಶಿಕ್ಷೆ ವಿಧಿಸಲಾಗುತ್ತಿದೆ ಎಂದು ಎಚ್ಚರಿಸಿದರು.

ಪಶುಪಾಲನಾ ಇಲಾಖೆ ಪ್ರಭಾರಿ ಉಪ ನಿರ್ದೇಶಕಿ ಜಾನಕಿ ಮಾತನಾಡಿ, ಸಂಘದ ಚಟುವಟಿಕಗೆ ಪಶು ವೈದ್ಯರನ್ನು ಸೇರಿಸಿಕೊಳ್ಳಬೇಕು. ಹಸುಗಳನ್ನು ತಾಯಿಯಂತೆ ನೋಡಿಕೊಳ್ಳಬೇಕು. ಎಲ್ಲಾ ಜಾನುವಾರುಗಳಿಗೂ ಆಧಾರ್‌ ಮಾದರಿ ನಂಬರ್ ನೀಡುವ ಉದ್ದೇಶದಿಂದ ಕಿವಿಗೆ ಓಲೆ ಹಾಕಿಸಬೇಕು. ಇದರಿಂದ ಸರ್ಕಾರದ ಸೌಲಭ್ಯಗಳು ದೊರೆಯುತ್ತದೆ ಎಂದರು.

ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ, ವ್ಯವಸ್ಥಾಪಕ ಜಯಪ್ರಕಾಶ್‌, ನಿರ್ದೇಶಕರಾದ ಹೊನ್ನವಳ್ಳಿ ಸತೀಶ್‌, ನಾರಾಯಣಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜ್‌ ಇದ್ದರು.

ಪ್ರತಿಕ್ರಿಯಿಸಿ (+)