ಗುರುವಾರ , ಜೂನ್ 30, 2022
25 °C
ಇಂದಿನಿಂದ ಎರಡನೇ ಹಂತದ ವೈದ್ಯರ ನಡೆ ಹಳ್ಳಿ ಕಡೆ

ಹಾಸನ ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆ ಹೆಚ್ಚಿಸಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಕೋವಿಡ್ ಸೋಂಕು ಪತ್ತೆ ಕಾರ್ಯ ಇನ್ನಷ್ಟು ಪರಿಣಾಮಕಾರಿಯಾಗಿಸಲು ಜಿಲ್ಲೆಯಲ್ಲಿ  ರ್‍ಯಾಟ್‌ ಹಾಗೂ ರ್‍ಯಾಪಿಡ್‌ ಪರೀಕ್ಷೆಗಳನ್ನು ಹೆಚ್ಚಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಸೂಚನೆ ನೀಡಿದರು.

ತಹಶೀಲ್ದಾರ್‌ಗಳೊಂದಿಗೆ ಮಂಗಳವಾರ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು, ಪ್ರತಿ ತಾಲ್ಲೂಕುಗಳಲ್ಲಿ ಎರಡನೇ ಹಂತದಲ್ಲಿ ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಬುಧವಾರದಿಂದ ಪ್ರಾರಂಭಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಪತ್ತೆಯಾಗುವ ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಆರೈಕೆ ಕೇಂದ್ರಗಳಿಗೆ ಕರೆತಂದು ಸೂಕ್ತ ಚಿಕಿತ್ಸೆ ನೀಡಬೇಕು. ಜತೆಗೆ ಪರಿಹಾರ ಪೋರ್ಟ್‍ಲ್‍ನಲ್ಲಿ ದಾಖಲಿಸಬೇಕು ಎಂದು ನಿರ್ದೇಶನ ನೀಡಿದರು.

ಎಲ್ಲಾ ಕೋವಿಡ್ ಕೇಂದ್ರಗಳಲ್ಲಿ ವೈದ್ಯರೇ ಕಡ್ಡಾಯವಾಗಿ ಸೋಂಕಿತರ ತಪಾಸಣೆ ನಡೆಸಿ  ಆತ್ಮ ವಿಶ್ವಾಸ ತುಂಬಬೇಕು. ವೈದ್ಯರ ಕೊರತೆ ಇದ್ದರೆ ಸ್ಥಳೀಯವಾಗಿ ಕ್ಲಿನಿಕ್ ನಡೆಸುತ್ತಿರುವ ಎಂ.ಬಿ.ಬಿ.ಎಸ್ ವೈದ್ಯರನ್ನು ನೇಮಿಸಿಕೊಂಡು ಚಿಕಿತ್ಸೆ ನೀಡಬೇಕು. ಆಶಾ ಕಾರ್ಯಕರ್ತೆಯರು ವಾರದಲ್ಲಿ ಎರಡು ದಿನ ಸೋಂಕಿತರ ಮನೆ ಮನೆಗಳಿಗೆ ಭೇಟಿ ನೀಡಿ ಅವರ ಆರೋಗ್ಯ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸಿ ಸಲಹೆ, ಸೂಚನೆ ನೀಡಬೇಕು ಎಂದು ನಿರ್ದೇಶನ ನೀಡಿದರು.

ಸೋಂಕಿತರ ಪ್ರಾಥಮಿಕ ಸಂಪರ್ಕಿತರ ಗುರುತಿಸುವಿಕೆ ಕಾರ್ಯ ಚುರುಕುಗೊಳಿಸಿ, 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಆದಷ್ಟು ಬೇಗ ಲಸಿಕೆ ನೀಡಬೇಕು. ಹೋಂ ಐಸೊಲೇಶನ್ ಹಾಗೂ ಹೋಮ್ ಕ್ವಾರಂಟೈನ್‍ನಲ್ಲಿ ಇರುವವರಿಗೆ ಸೀಲ್ ಹಾಕಬೇಕು. ಮುಂದಿನ ಒಂದು ವಾರದೊಳಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಇಳಿಮುಖವಾಗವಂತೆ ಹೆಚ್ಚಿನ ನಿಗಾವಹಿಸಿ, ಆಸ್ಪತ್ರೆಗಳಲ್ಲಿ ಯಾವುದೇ ರೀತಿಯ ಮಾತ್ರೆಗಳು ಕೊರತೆಯಾಗದಂತೆ ನೋಡಿಕೊಳ್ಳಿ ಎಂದು ನಿರ್ದೇಶಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಎ. ಪರಮೇಶ್  ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿ ಕೋವಿಡ್ ತಪಾಸಣೆಗೆ ಹೆಚ್ಚಿನ ರ್‍ಯಾಟ್‌ ಕಿಟ್ ಗಳನ್ನು ಪೂರೈಸಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಸೂಚಿಸಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕವಿತ ರಾಜಾರಾಂ, ಉಪವಿಭಾಗಾಧಿಕಾರಿ  ಬಿ.ಎ.ಜಗದೀಶ್, ಗಿರೀಶ್ ನಂದನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ. ಸತೀಶ್ ಕುಮಾರ್, ಆರ್.ಸಿ.ಎಚ್.ಅಧಿಕಾರಿ ಡಾ.ಕಾಂತರಾಜ್ ಹಾಗೂ ತಹಶೀಲ್ದಾರ್‌ಗಳು ಇದ್ದರು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು