ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈನೋದ್ಯಮಕ್ಕೂ ಕುತ್ತು ತಂದ ಮಳೆ ಅಭಾವ

ಹಾಲಿನ ಇಳುವರಿ ಕುಸಿತ: ಬೆಣ್ಣೆಯ ಉತ್ಪಾದನೆ ಇಳಿಕೆ: ಹಳ್ಳಿ ಜನರಿಗೆ ಆರ್ಥಿಕ ಸಂಕಷ್ಟ
Published 27 ಏಪ್ರಿಲ್ 2024, 6:47 IST
Last Updated 27 ಏಪ್ರಿಲ್ 2024, 6:47 IST
ಅಕ್ಷರ ಗಾತ್ರ

ಆಲೂರು: ಮಳೆ ಇಲ್ಲದೇ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನ, ಜಾನುವಾರುಗಳಿಗೆ ಕುಡಿಯಲು ಮತ್ತು ಕೃಷಿಗೆ ನೀರಿಲ್ಲದಂತಾಗಿದೆ. ಜಾನುವಾರುಗಳಿಗೆ ಆಹಾರಕ್ಕೂ ಹಾಹಾಕಾರ ಎದುರಾಗಿದೆ.

ಕುಟುಂಬದ ಆರ್ಥಿಕ ಸಂಪನ್ಮೂಲಕ್ಕೆ ಮೂಲಾಧಾರವಾಗಿದ್ದ ಹಸುಗಳಿಗೆ ಆಹಾರ ದೊರಕದೇ ಹಾಲಿನ ಪ್ರಮಾಣ ಇಳಿಮುಖವಾಗುತ್ತಿದೆ. ಒಂದು ಹಸುವಿನಿಂದ ಪ್ರತಿದಿನ ಹತ್ತು ಲೀಟರ್ ಹಾಲು ಕರೆಯುತ್ತಿದ್ದವರೂ, ಈಗ ಐದು ಲೀಟರ್‌ಗೆ ಇಳಿದಿದೆ.

ಹಸುಗಳಿಗೆ ಹಿಂಡಿ ಮತ್ತು ಪಶು ಆಹಾರವನ್ನು ಎಷ್ಟೇ ಹಾಕಿದರೂ, ಭೂಮಿಯಲ್ಲಿರುವ ಅಲ್ಪಸ್ವಲ್ಪ ಹುಲ್ಲನ್ನು ಆಹಾರವಾಗಿ ಸೇವಿಸಿದರೆ ಮಾತ್ರ ಹಾಲಿನ ಪ್ರಮಾಣ ಉತ್ತಮವಾಗಿರುತ್ತದೆ. ಇಲ್ಲದಿದ್ದರೆ ಹಾಲಿನ ಪ್ರಮಾಣ ಕುಸಿಯುತ್ತದೆ ಎನ್ನುತ್ತಾರೆ ರೈತರು.

ಕೆರೆ ಕಟ್ಟೆಗಳಲ್ಲಿ ನೀರಿಲ್ಲದಿರುವುದರಿಂದ ಅಲ್ಲಿ ದೊರಕುವ ಗೋಡು ಮಣ್ಣನ್ನು ರೈತರು, ಕೃಷಿ ಭೂಮಿಗಳಿಗೆ ರವಾನಿಸುತ್ತಿದ್ದು, ಕೆರೆ ಅಂಗಳದಲ್ಲಿ ಹುಲ್ಲು ಇಲ್ಲವಾಗಿದೆ. ಮಳೆ ಆಗದಿರುವುದರಿಂದ ಬೇರೆಲ್ಲೂ ಹುಲ್ಲು ಬೆಳೆದಿಲ್ಲ. ಹಸುಗಳು ಮೇವಿಲ್ಲದೆ ಸೊರಗುವಂತಾಗಿದೆ.

ಪ್ರತಿ ವಾರದ ಸಂತೆದಿನ ಕನಿಷ್ಠ 20 ಕ್ಕೂ ಹೆಚ್ಚು ಮಹಿಳೆಯರು ನೂರಾರು ಸೇರು ಬೆಣ್ಣೆಯನ್ನು ಸಂತೆಗೆ ತರುತ್ತಿದ್ದರು. ಬೆಳಿಗ್ಗೆ ಸುಮಾರು 9ರಿಂದ 10 ಗಂಟೆಯೊಳಗೆ ಸಂಪೂರ್ಣ ಮಾರಾಟವಾಗುತ್ತಿತ್ತು. ಎರಡು ವಾರಗಳಿಂದ ಕೇವಲ ಹತ್ತಾರು ಸೇರು ಮಾತ್ರ ಬೆಣ್ಣೆ ಮಾರಾಟಕ್ಕೆ ಬರುತ್ತಿದೆ. ವಾರ ಕಳೆದಂತೆ ಕನಿಷ್ಠ ಮಟ್ಟಕ್ಕೆ ತಲುಪುತ್ತಿದೆ. ಒಂದು ಸೇರು ಬೆಣ್ಣೆಗೆ ₹ 270 ಬೆಲೆ ಇದ್ದರೂ, ಸಂತೆಯಲ್ಲಿ ಬೆಣ್ಣೆ ಸಿಗುತ್ತಿಲ್ಲ. ಹಾಲಿನ ಪ್ರಮಾಣ ಕಡಿಮೆ ಆಗಿರುವುದರಿಂದ ಬೆಣ್ಣೆ ಸಿಗುತ್ತಿಲ್ಲ ಎನ್ನುವುದು ರೈತರ ಮಾತು.

ಮಳೆಯಿಲ್ಲದೆ ಒಂದೆಡೆ ಕುಡಿಯಲು ನೀರಿಲ್ಲ. ಜಾನುವಾರುಗಳು ಮೇಯಲು ಹುಲ್ಲು ಇಲ್ಲ. 15 ದಿನಗಳಿಂದ ಡೈರಿಗೆ ಬರುತ್ತಿದ್ದ ಹಾಲು ಶೇ 50 ರಷ್ಟು ಕಡಿಮೆಯಾಗಿದೆ. ಹೈನೋದ್ಯಮ ಕುಂಠಿತಗೊಳ್ಳುತ್ತಿರುವುದರಿಂದ ಇದನ್ನೇ ನಂಬಿದ ಕುಂಟುಂಬಗಳು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿವೆ.

ಕೆಲವರು ಕೊಳವೆ ಬಾವಿಯಿಂದ ನೀರೆತ್ತಿ ಹಸುಗಳಿಗೆ ಕುಡಿಸುತ್ತಿದ್ದಾರೆ. ಹೊರಗಿನ ಆಹಾರ ಎಷ್ಟೇ ತಿಂದರೂ ಹುಲ್ಲು ತಿಂದರೆ ಮಾತ್ರ ಹಸುಗಳು ಉತ್ತಮ ಹಾಲು ಕೊಡುತ್ತವೆ.

-ಶಿವನಂಜೇಗೌಡ ಹಾಲಿನ ಡೈರಿ ಮರಸು ಕೊಪ್ಪಲು

ಹುಲ್ಲು ಇಲ್ಲದಿರುವುದರಿಂದ ಹಸುಗಳು ಹಾಲು ಕಡಿಮೆಯಾಗಿದೆ. ವಾರಕ್ಕೆ ಕನಿಷ್ಠ ಆರು ಸೇರಿ ಬೆಣ್ಣೆ ಮಾರುತ್ತಿದ್ದೆ. ಈಗ ಎರಡು ಸೇರು ಬೆಣ್ಣೆ ಸಿಗಲಾರದಂತಾಗಿದೆ.

-ಲಲಿತಮ್ಮ ಗೃಹಿಣಿ ಕದಾಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT