ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಸನ | ಜಿಲ್ಲೆ ಮರೆತ ಉಸ್ತುವಾರಿ ಸಚಿವ ರಾಜಣ್ಣ

ನಡೆಯದ ಪ್ರಗತಿ ಪರಿಶೀಲನಾ ಸಭೆ; ಅಧಿಕಾರಿಗಳ ದರ್ಬಾರು– ಜನಪ್ರತಿನಿಧಿಗಳ ಆಕ್ರೋಶ
Published 22 ಜೂನ್ 2024, 6:42 IST
Last Updated 22 ಜೂನ್ 2024, 6:42 IST
ಅಕ್ಷರ ಗಾತ್ರ

ಹಾಸನ: ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಪೂರ್ಣಗೊಂಡು 15 ದಿನಗಳು ಕಳೆದಿವೆ. ರಾಜ್ಯದ ಬೇರೆ ಜಿಲ್ಲೆಗಳ ಉಸ್ತುವಾರಿ ಸಚಿವರು, ತಮ್ಮ ಜಿಲ್ಲೆಗಳ ಪ್ರಗತಿ ಪರಿಶೀಲನೆ ನಡೆಸಿ, ಜನರ ಕಷ್ಟ–ಸುಖಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರು ಮಾತ್ರ ಕಾಣೆಯಾಗಿದ್ದಾರೆ ಎನ್ನುವ ಆಕ್ರೋಶ ಜಿಲ್ಲೆಯ ಜನಪ್ರತಿನಿಧಿಗಳಿಂದ ಕೇಳಿ ಬರುತ್ತಿದೆ.

ಹಾಸನ ಜಿಲ್ಲೆಯ ಉಸ್ತುವಾರಿ ಸಚಿವ ಕೆ.ಎನ್‌. ರಾಜಣ್ಣ ಅವರು, ಜಿಲ್ಲೆಯನ್ನೇ ಮರೆತಂತೆ ಕಾಣುತ್ತಿದೆ. ಪ್ರಗತಿ ಪರಿಶೀಲನೆ ನಡೆಸುವುದು ಇರಲಿ, ಜಿಲ್ಲೆಯತ್ತ ದೃಷ್ಟಿಯನ್ನೂ ಹಾಯಿಸುತ್ತಿಲ್ಲ. ಬರದ ಬವಣೆಯಿಂದ ನಲುಗಿರುವ ಕೃಷಿಕರಿಗೆ, ಈ ವರ್ಷ ಮುಂಗಾರಿನಲ್ಲಿ ಬಿತ್ತನೆ ಬೀಜ, ರಸಗೊಬ್ಬರ ವಿತರಣೆಯ ಕುರಿತು ಪರಿಶೀಲನೆಯನ್ನೂ ನಡೆಸುತ್ತಿಲ್ಲ ಎನ್ನುವ ದೂರುಗಳು ವ್ಯಾಪಕವಾಗುತ್ತಿವೆ.

ಲೋಕಸಭೆ ಚುನಾವಣೆಗೂ ಎರಡು ತಿಂಗಳು ಮೊದಲು ಉಸ್ತುವಾರಿ ಸಚಿವ ರಾಜಣ್ಣ ಪ್ರಗತಿ ಪರಿಶೀಲನೆ ನಡೆಸಿದ್ದರು. ಅದಾದ ನಂತರ ಚುನಾವಣೆ ನೀತಿ ಸಂಹಿತೆ ಜಾರಿಯಾಗಿದ್ದು, ಯಾವುದೇ ಸಭೆ ನಡೆಸಲು ಅವಕಾಶ ಇರಲಿಲ್ಲ. ಆದರೆ, ಚುನಾವಣೆ ಮುಗಿದು 15 ದಿನ ಕಳೆದರೂ, ಜಿಲ್ಲೆಗೆ ಭೇಟಿ ನೀಡುವಲ್ಲಿ ಸಚಿವ ರಾಜಣ್ಣ ಹಿಂದೇಟು ಹಾಕುತ್ತಿದ್ದಾರೆ ಎನ್ನುವ ಆರೋಪ ಶಾಸಕರಿಂದ ಕೇಳಿ ಬರುತ್ತಿದೆ.

ಕಳೆದ ವರ್ಷ ಜಿಲ್ಲೆಯ ಭೀಕರ ಬರದ ಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೇ ಜಿಲ್ಲೆಯ ಎಂಟೂ ತಾಲ್ಲೂಕುಗಳನ್ನು ಸರ್ಕಾರ ಬರಪೀಡಿತ ಎಂದು ಘೋಷಣೆ ಮಾಡಿದೆ. ರಾಜ್ಯ ಸರ್ಕಾರದಿಂದ ಮೊದಲ ಹಂತದಲ್ಲಿ ತಲಾ ₹ 2 ಸಾವಿರ ಪರಿಹಾರ ಬಿಡುಗಡೆ ಮಾಡಲಾಗಿತ್ತು. ಅದಾದ ನಂತರ ಕೇಂದ್ರದಿಂದ ಬರ ಪರಿಹಾರ ಬಿಡುಗಡೆಯಾಗಿದ್ದು, ಎಷ್ಟು ಜನ ರೈತರಿಗೆ ಬರ ಪರಿಹಾರ ವಿತರಿಸಲಾಗಿದೆ ಎನ್ನುವ ಮಾಹಿತಿಯೂ ಸಿಗುತ್ತಿಲ್ಲ ಎಂದು ಶಾಸಕರುಹೇಳುತ್ತಿದ್ದಾರೆ.

ಶಾಸಕರಿಗೂ ಸಿಗದ ಅನುದಾನ: ಗ್ಯಾರಂಟಿಗಳ ಜಾರಿಯ ಭರದಲ್ಲಿ ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೂ ಅನುದಾನ ಸಿಗುತ್ತಿಲ್ಲ. ತಮ್ಮ ಕ್ಷೇತ್ರಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಅನುದಾನ ಸಿಗದೇ, ಶಾಸಕರು ಜನರಿಗೆ ಉತ್ತರ ಹೇಳದಂತಾಗಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.

‘ಶಾಸಕರು ಕ್ಷೇತ್ರದ ಅಭಿವೃದ್ಧಿ ಮಾಡಲು ಸಮರ್ಪಕ ಅನುದಾನ ಸಿಗುತ್ತಿಲ್ಲ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿವೆ. ಈ ಬಗ್ಗೆ ನಾವು ಯಾರನ್ನು ಪ್ರಶ್ನಿಸಬೇಕು? ಜಿಲ್ಲಾ ಉಸ್ತುವಾರಿ ಸಚಿವ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆಯನ್ನಾದರೂ ಕರೆದರೆ, ಅಲ್ಲಿ ಪ್ರಸ್ತಾಪ ಮಾಡಬಹುದು’ ಎನ್ನುತ್ತಾರೆ ಅರಕಲಗೂಡು ಶಾಸಕ ಎ.ಮಂಜು.

‘ಸರ್ಕಾರ ಕೇವಲ ಗ್ಯಾರಂಟಿ ಜಾರಿ ಮಾಡುತ್ತಿರುವುದಾಗಿ ಹೇಳುತ್ತಿದೆ. ಆದರೆ, ರಸ್ತೆ, ಶಾಲಾ ಕಟ್ಟಡಗಳು, ಕುಡಿಯುವ ನೀರು, ರೈತರಿಗೆ ಬೀಜ, ಗೊಬ್ಬರ ಪೂರೈಕೆಯ ಬಗ್ಗೆ ಯಾರು ನೋಡಿಕೊಳ್ಳಬೇಕು. ತಾಲ್ಲೂಕು ಮಟ್ಟದಲ್ಲಿ ಸಭೆ ನಡೆಸಿದರೆ, ಅಧಿಕಾರಿಗಳು ಇಲ್ಲಸಲ್ಲದ ಸಬೂಬು ಹೇಳುತ್ತಾರೆ’ ಎನ್ನುವುದು ಶಾಸಕ ಸಿಮೆಂಟ್‌ ಮಂಜು ಆರೋಪ.

‘ಸರ್ಕಾರದಿಂದ ಈವರೆಗೆ ₹ 2 ಕೋಟಿ ಶಾಸಕರ ಅನುದಾನ ನೀಡಲಾಗಿದೆ. ಇದರಿಂದ ಏನೂ ಪ್ರಯೋಜನವಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಈವರೆಗೆ ಯಾವುದೇ ಅನುದಾನ ನೀಡಿಲ್ಲ. ಈ ರೀತಿಯಾದರೆ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಸಾಧ್ಯವಿಲ್ಲದೆ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ’ ಎಂದು ಸಿಮೆಂಟ್ ಮಂಜು ಹೇಳುತ್ತಾರೆ.

‘ಜಿಲ್ಲಾ ಮಟ್ಟದ ಕೆಡಿಪಿ ಸಭೆಗಳು ಆಗಾಗ ನಡೆಯಬೇಕು. ನಮ್ಮ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸಲು ಈ ಸಭೆ ಬಹಳ ಮುಖ್ಯವಾಗಿದೆ. ಕೆಡಿಪಿ ಸಭೆ ನಡೆಯದೇ ಇರುವುದರಿಂದ ಜಿಲ್ಲಾಧಿಕಾರಿ ಸೇರಿದಂತೆ ಹಲವು ಅಧಿಕಾರಿಗಳ ಬಳಿ ಕೆಲಸಗಳನ್ನು ಮಾಡಿಸಲು ಸಾಧ್ಯವಾಗುವುದಿಲ್ಲ’ ಎನ್ನುವುದು ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್‌. ಬಾಲಕೃಷ್ಣ ಅವರ ಅಳಲು.

ಲೋಕಸಭೆ ಚುನಾವಣೆ ಮುಗಿದಿದ್ದು, ಜಿಲ್ಲೆಯ ಜನರು ಕಾಂಗ್ರೆಸ್‌ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದಾರೆ. ಇನ್ನಾದರೂ, ಜಿಲ್ಲೆಯ ಜನರು ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಚಿವರು ಕೆಲಸ ಮಾಡಬೇಕು ಎನ್ನುವ ಆಗ್ರಹ ಜನಪ್ರತಿನಿಧಿಗಳದ್ದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT