ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಾಸನಾಂಬೆಗೆ ಉಘೇ ಉಘೇ’ ಅಧಿದೇವತೆಯ ವಿಶ್ವರೂಪ ದರ್ಶನ

ಮೊಳಗಿದ ಭಕ್ತರ ಜಯಘೋಷ, ಬಗೆ ಬಗೆಯ ಹೂವುಗಳಿಂದ ದೇವಾಲಯ ಪ್ರಾಂಗಣ ಸಿಂಗಾರ
Last Updated 17 ಅಕ್ಟೋಬರ್ 2019, 13:24 IST
ಅಕ್ಷರ ಗಾತ್ರ

ಹಾಸನ: ‘ಹಾಸನಾಂಬೆ ಉಘೇ ಉಘೇ’ ಎಂಬ ಭಕ್ತರ ಜಯಘೋಷದ ನಡುವೆ ಗುರುವಾರ ಮಧ್ಯಾಹ್ನ 12.35ಕ್ಕೆ ಅಧಿದೇವತೆ ತನ್ನ ವಿಶ್ವರೂಪ ನೀಡಿದಳು.

ಹಾಸನದ ಅಧಿದೇವತೆ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆಯಿತು. ಅ. 29 ರ ವರೆಗೆ ಹಾಸನಾಂಬ ಉತ್ಸವ ನಡೆಯಲಿದೆ. ದೇವಾಲಯದ ಪ್ರಾಂಗಣವನ್ನು ಬಗೆ ಬಗೆಯ ಹೂವುಗಳಿಂದ ಸಿಂಗಾರ ಮಾಡಲಾಗಿದೆ.

ಬೆಳಿಗ್ಗೆಯಿಂದಲೇ ದೇಗುಲದ ಆವರಣದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡವು. ಸಂಪ್ರದಾಯದಂತೆ ತಳವಾರ ವಂಶದ ನರಸಿಂಹರಾಜ ಅರಸ್‌ ಅವರು ಬಾಳೆ ಕಂದು ಕಡಿಯುತ್ತಿದ್ದಂತೆ ಭಕ್ತರು ಜಯಘೋಷ ಮೊಳಗಿಸಿದರು. ಇದೇ ವೇಳೆ ಪಂಜಿನ ಪೂಜೆ ನೆರವೇರಿಸಲಾಯಿತು. ಬಾಳೆ ಕಂದಿನ ಎಳೆ, ಬನ್ನಿ ಪಡೆಯಲು ಭಕ್ತರು ಮುಗಿಬಿದ್ದರು.

ಹೊರಗಡೆ ಜಯಘೋಷ, ಒಳಗಡೆ ಮಂಗಳವಾದ್ಯ ಮೊಳಗಿದ ನಂತರ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಜಿಲ್ಲಾಧಿಕಾರಿ ಆರ್‌.ಗಿರೀಶ್‌, ತಹಶೀಲ್ದಾರ್‌ ಮೇಘನಾ, ಆಡಳಿತಾಧಿಕಾರಿ ಎಚ್‌.ಎಲ್.ನಾಗರಾಜ್‌ ಸಮ್ಮುಖದಲ್ಲಿ ವರ್ಷದಿಂದ ಮುಚ್ಚಿದ್ದ ದೇಗುಲದ ಗರ್ಭಗುಡಿ ಬಾಗಿಲ ಬೀಗ ಮುದ್ರೆ ತೆರೆಯಲಾಯಿತು.

ಮೊದಲ ದಿನ ಸಾರ್ವಜನಿಕರಿಗೆ ಅವಕಾಶ ಇಲ್ಲದಿದ್ದರೂ ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಬಳಿಕ ಎಲ್ಲರಿಗೂ ದರ್ಶನ ಮಾಡಲು ಅವಕಾಶ ನೀಡಲಾಯಿತು. ಗರ್ಭಗುಡಿ ಆವರಣ ಸ್ವಚ್ಛಗೊಳಿಸಿ ದೇವಿಗೆ ಆಭರಣ ಧಾರಣೆ ಮಾಡಿದ ನಂತರ ನೈವೇದ್ಯ, ಮಹಾ ಮಂಗಳಾರತಿ ಹಾಗೂ ಅಭಿಷೇಕ ನಡೆಯಲಿದೆ.

ದೇವಿಯ ವಿಶ್ವರೂಪ ದರ್ಶನದಿಂದ ಪುಣ್ಯ ಲಭಿಸುವುದು ಎಂಬ ನಂಬಿಕೆಯಿಂದ ಬಾಗಿಲು ತೆರೆದ ತಕ್ಷಣ ದರ್ಶನ ಪಡೆಯಲು ಭಕ್ತರು ಮುಗಿಬೀಳುವುದು ಸಾಮಾನ್ಯವಾಗಿದೆ.

ಪೊಲೀಸ್‌ ವರಿಷ್ಠಾಧಿಕಾರಿ ರಾಮ್‌ ನಿವಾಸ್‌ ಸೆಪಟ್‌, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎನ್‌.ನಂದಿನಿ, ಶಾಸಕ ಪ್ರೀತಂ ಗೌಡ, ಎತ್ತಿನಹೊಳೆ ವಿಶೇಷ ಭೂ ಸ್ವಾಧೀನಾಧಿಕಾರಿ ಗಿರೀಶ್‌ ನಂದನ್‌, ಹಾಸನ ಉಪವಿಭಾಗಾಧಿಕಾರಿ ನವೀನ್‌ ಭಟ್‌, ಅರಸೀಕೆರೆ ತಹಶೀಲ್ದಾರ್‌, ನಗರಸಭೆ ಆಯುಕ್ತ ಕೃಷ್ಣಮೂರ್ತಿ ಹಾಜರಿದ್ದರು.

ಜಿಲ್ಲಾ ಖಜಾನೆಯಲ್ಲಿದ್ದ ದೇವಿಯ ಆಭರಣಗಳನ್ನು ಸೋಮವಾರವೇ ದೇವಸ್ಥಾನಕ್ಕೆ ಕೊಂಡೊಯ್ಯಲಾಗಿತ್ತು. ಮಳೆಯಿಂದ ರಕ್ಷಣೆಗಾಗಿ ಸರದಿ ಸಾಲುಗಳಿಗೆ ಚಾವಣಿ ನಿರ್ಮಿಸಲಾಗಿದೆ. ಗಣ್ಯರ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಭಕ್ತರ ನೂಕುನುಗ್ಗಲು ತಡೆಯಲು ಬಿಗಿಪೊಲೀಸ್‌ ಬಂದೋಬಸ್ತ್‌ ಜತೆಗೆ ಬ್ಯಾರಿಕೇಡ್‌ ಅಳವಡಿಸಲಾಗಿದೆ. ಕುಡಿಯುವ ನೀರು, ಮೊಬೈಲ್‌ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ.

ಅ.18ರಿಂದ ಅಹೋರಾತ್ರಿ ಹಾಸನಾಂಬೆ ದರ್ಶನ (ನೈವೇದ್ಯ ಸಮಯ ಹೊರತು ಪಡಿಸಿ) ನಡೆಯಲಿದ್ದು, ಮೊದಲ ಮತ್ತು ಕೊನೆ ದಿನ ದೇವಿ ದರ್ಶನಕ್ಕೆ ಸಾರ್ವಜನಿಕರಿಗೆ ದರ್ಶನ ಇಲ್ಲ. ನೇರ ದರ್ಶನಕ್ಕೆ ₹ 1 ಸಾವಿರ (ನಾಲ್ಕು ಲಾಡು ಉಚಿತ) , ಶೀಘ್ರ ದರ್ಶನಕ್ಕೆ ₹ 300 ಟಿಕೆಟ್‌ (ಎರಡು ಲಾಡು) ಸೌಲಭ್ಯ ಕಲ್ಪಿಸಲಾಗಿದೆ.

ಜೆಡಿಎಸ್ ನ ಯಾವುದೇ ಶಾಸಕರು, ಜನಪ್ರತಿನಿಧಿಗಳು ಬಂದಿರಲಿಲ್ಲ. ವಿಧಾನ ಪರಿಷತ್‌ ಸದಸ್ಯ ಎಂ.ಗೋಪಾಲಸ್ವಾಮಿ, ಜಿಲ್ಲಾ ಪ್ರಧಾನ ಮತ್ತು ಸೇಷನ್ಸ್‌ ನ್ಯಾಯಾಧೀಶ ಶಿವಣ್ಣ, ಉಪ ಲೋಕಾಯುಕ್ತ ಸುಭಾಶ್‌ ಬಿ ಅಡಿ ಮೊದಲ ದಿನ ದರ್ಶನ ಪಡೆದರು.

ಸಪ್ತಮಾತೃಕೆಯ ಇತಿಹಾಸ ಬಣ್ಣಿಸುವ ಹಿನ್ನಲೆಯಲ್ಲಿ ₹ 3.50 ಲಕ್ಷ ವೆಚ್ಚದಲ್ಲಿ ಹಾಸನಾಂಬ ರಥ ನಿರ್ಮಿಸಲಾಗಿದೆ. ಜಿಲ್ಲೆಯ ಏಳು ತಾಲ್ಲೂಕುಗಳಿಗೂ ಹಾಸನಾಂಬ ರಥ ಸಂಚರಿಸಿ, ಸಪ್ತಮಾತೃಕೆಯರ ಇತಿಹಾಸ ವರ್ಣನೆ ಜತೆಗೆ ಕಲಾವಿದರು ಹಾಸನಾಂಬೆ ಕುರಿತು ಹಾಡುಗಳನ್ನು ಪ್ರಸ್ತುತ ಪಡಿಸುವರು.

ಹಣತೆ ಉರಿಯುತ್ತಲೇ ಇತ್ತು..
ದೇವಾಲಯದ ಬಾಗಿಲು ತೆಗೆಯುವ ವೇಳೆ ಮೊದಲ ಸಲ ಸಾಕ್ಷಿಯಾದ ಉಸ್ತುವಾರಿ ಸಚಿವ ಮಾಧುಸ್ವಾಮಿ, ‘ಹಿಂದಿನ ವರ್ಷ ಇಟ್ಟಿದ್ದ ಎಡೆ ಹಾಗೆಯೇ ಇತ್ತು. ಹಚ್ಚಿದ ಹಣತೆ ಉರಿಯುತ್ತಲೇ ಇತ್ತು. ಹೂ ಕೂಡ ತಾಜವಾಗಿತ್ತು’ ಎಂದು ಹೇಳಿದರು.

‘ದೇವಿಯ ಆಶೀರ್ವಾದದಿಂದ ನಾಡಿಗೆ ಉತ್ತಮ ಮಳೆಯಾಗಿ, ಬೆಳೆ ಹುಲುಸಾಗಿದೆ. ನಾಡಿಗೆ ಬರಗಾಲ ಇತ್ಯಾದಿ ಸಮಸ್ಯೆ ಬಾರದಂತೆ ಕಾಪಾಡು ತಾಯೆ ಎಂದು ವಿನಂತಿ ಮಾಡಿಕೊಂಡಿದ್ದೇನೆ. ಭಕ್ತರಿಗೆ ಬೇಕಾದ ಮೂಲಭೂತ ಸೌಲಭ್ಯ ಕಲ್ಪಿಸಲಾಗಿದೆ’ ಎಂದರು.

ಭಕ್ತರಿಗೆ ಮೂಲ ಸೌಲಭ್ಯ
ಶಾಸಕ ಪ್ರೀತಂಗೌಡ ಮಾತನಾಡಿ, ‘ಹಾಸನಾಂಬೆ ಉತ್ಸವದಲ್ಲಿ ಜಿಲ್ಲೆ, ರಾಜ್ಯ ಹಾಗೂ ಹೊರಗಡೆಯಿಂದಲೂ ಲಕ್ಷಾಂತರ ಭಕ್ತರು ಬರುತ್ತಾರೆ. ಇವರಿಗೆ ಬೇಕಾದ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಲಾಗಿದೆ. ಇಡೀ ಉತ್ಸವ ಅತ್ಯಂತ ಯಶಸ್ವಿಯಾಗಿ ನಡೆಯಬೇಕು. ಆ ನಿಟ್ಟಿನಲ್ಲಿ ಬೇಕಾದ ಎಲ್ಲಾ ಮುನ್ನೆಚ್ಚರಿಕೆ ವಹಿಸಲಾಗಿದೆ’ಎಂದು ಹೇಳಿದರು.

ಊಟದ ವ್ಯವಸ್ಥೆ
ಹಾಸನಾಂಬೆ ದರ್ಶನಕ್ಕೆ ಬರುವ ಭಕ್ತರಿಗಾಗಿ ಮಧ್ಯಾಹ್ನ ಮತ್ತು ರಾತ್ರಿ ಭೋಜನದ ವ್ಯವಸ್ಥೆ ಮಾಡಲಾಗಿದೆ. ದೇವಾಲಯದ ಸಮೀಪದ ಚನ್ನಕೇಶವ ದೇವಾಲಯದ ಸಮುದಾಯ ಭವನದಲ್ಲಿ ಉಚಿತ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಸ್ವಯಂ ಸೇವಕರು, ಸ್ಕೌಟ್ಸ್‌, ಗೈಡ್ಸ್‌ ವಿದ್ಯಾರ್ಥಿಗಳು ಭಕ್ತರಿಗೆ ನೀರು, ಮಜ್ಜಿಗೆ ಪೂರೈಸಿದರು.

ಗಮನಸೆಳೆದ ಮೆರವಣಿಗೆ
ನಗರದಲ್ಲಿ ಜಾನಪದ ಕಲಾತಂಡಗಳ ಮೆರವಣಿಗೆ ಗಮನ ಸೆಳೆಯಿತು. ಕೋಲಾಟ, ಸುಗ್ಗಿ ಕುಣಿತ, ಕಂಸಾಲೆ, ವೀರಗಾಸೆ, ಸೋಮನ ಕುಣಿತ, ಮರಗಾಲು ಸೇರಿದಂತೆ 38 ಕಲಾತಂಡಗಳ 380 ಕಲಾವಿದರು ದೇವಸ್ಥಾನದ ಮುಂಭಾಗದಿಂದ ಕಲಾಭವನದವರೆಗೆ ಮೆರವಣಿಗೆ ನಡೆಸಿದರು.

ಪ್ರತಿ ದಿನ 25 ಸಾವಿರ ಭಕ್ತರು
‘ಪ್ರತಿ ದಿನ ಹಾಸನಾಂಬೆ ದರ್ಶನಕ್ಕೆ 25 ಸಾವಿರ ಜನರು ಭೇಟಿ ನೀಡಲಿದ್ದಾರೆ. ಶನಿವಾರ, ಭಾನುವಾರ, ಮಂಗಳವಾರ ಮತ್ತು ಶುಕ್ರವಾರ ಹೊರ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಉತ್ಸವದ ಯಶಸ್ಸಿಗಾಗಿ ತಿಂಗಳ ಮುಂಚೆಯೇ ಪೂರ್ವಭಾವಿ ಸಭೆ ನಡೆಸಲಾಗಿತ್ತು. ನಾಲ್ಕನೇ ಬಾರಿ ದೇವಸ್ಥಾನದ ಆಡಳಿತಾಧಿಕಾರಿ ಕಾರ್ಯ ನಿರ್ವಹಿಸುವ ಅವಕಾಶ ದೊರೆತಿದ್ದು, ಬಾಗಿಲು ತೆರೆದ ವೇಳೆ ದೀಪ ಉರಿಯುತ್ತಿತ್ತು’ ಎಂದು ದೇವಸ್ಥಾನದ ಆಡಳಿತಾಧಿಕಾರಿ ಎಚ್.ಎಲ್‌.ನಾಗರಾಜ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT