ಸೋಮವಾರ, ಜನವರಿ 17, 2022
18 °C
ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ ಅಭಿಮಾನಿಗಳು

ಹಾಸನ ಕಸಾಪ: ನೂತನ ಸಾರಥಿ ಮಲ್ಲೇಶಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಕುತೂಹಲ ಕೆರಳಿಸಿದ್ದ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷರಾಗಿ ನಿವೃತ್ತ ಪ್ರಾಧ್ಯಾಪಕ ಎಚ್.ಎಲ್.ಮಲ್ಲೇಶಗೌಡ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಐವರು ಸ್ಪರ್ಧಿಗಳು ಕಣದಲ್ಲಿದ್ದರು. ಭಾನುವಾರ ನಡೆದ ಚುನಾವಣೆಯಲ್ಲಿ ಮಲ್ಲೇಶ್‌ಗೌಡರು ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಮೊದಲ ಬಾರಿಗೆ ಸಾಹಿತ್ಯ ಪರಿಷತ್ ಗಾದಿ ಏರಿದ್ದಾರೆ.

ಚಲಾವಣೆಯಾದ ಒಟ್ಟು 8,230 ಮತಗಳಲ್ಲಿ ಮಲ್ಲೇಶಗೌಡ ಅವರು 4,854 ಮತ ಪಡೆದರು. ಪತ್ರಕರ್ತ ರವಿ ನಾಕಲಗೂಡು 2,773 ಮತ ಪಡೆದರೆ, ಗಂಜಲಗೂಡು ಗೋಪಾಲೇಗೌಡ 487 ಮತ ಪಡೆಯಲಷ್ಟೇ ಶಕ್ತರಾದರು.

ನಾಮಪತ್ರ ಸಲ್ಲಿಸುವುದಕ್ಕಷ್ಟೇ ತಮ್ಮ ಚುನಾವಣೆ ಸೀಮಿತಗೊಳಿಸಿದ್ದ ಬಿ.ಎ.ಮಮತಾ 29 ಮತ ಪಡೆದರೆ, ಕಣದಿಂದ ನಿವೃತರಾಗಿದ್ದ ಬಿ.ಎನ್.ರಾಮಕುಮಾರ್ ಶರ್ಮಾ 28 ಮತ ಪಡೆದರು.

ಒಟ್ಟು 59 ಮತಗಳು ತಿರಸ್ಕೃತವಾಗಿರುವುದರಿಂದ ಚಲಾವಣೆಯಾದ ಮತಗಳಲ್ಲಿ 8,171 ಕ್ರಮ ಬದ್ಧವಾಗಿವೆ ಎಂದು ಚುನಾವಣಾ ಅಧಿಕಾರಿಯೂ ಆದ ತಹಶೀಲ್ದಾರ್‌ ನಟೇಶ್‌ ತಿಳಿಸಿದರು.

ಬೆಳಗ್ಗೆ 8 ಗಂಟೆಗೆ ಜಿಲ್ಲಾದಾದ್ಯಂತ ಆರಂಭವಾದ ಮತದಾನದಲ್ಲಿ ಎಲ್ಲಾ ಕಡೆ ಮತದಾರರು ಅತ್ಯುತ್ಸಾಹದಿಂದ ಹಕ್ಕು ಚಲಾವಣೆ ಮಾಡಿದರು. ಸಂಜೆ 4 ಗಂಟೆವರೆಗೆ ಎಲ್ಲಾ ಕಡೆಗಳಲ್ಲಿ ಶಾಂತಿಯುತವಾಗಿ ಮತದಾನ ನಡೆಯಿತು. ಸಂಜೆ 5 ಗಂಟೆಗೆ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಆರಂಭವಾದ ಮತ ಎಣಿಕೆ ರಾತ್ರಿ 7 ಗಂಟೆಗೆ ಮುಕ್ತಾಯವಾಯಿತು.

ಆಲೂರು ತಾಲ್ಲೂಕು ಹೊರತು ಪಡಿಸಿ ಉಳಿದೆಲ್ಲಾ ಕಡೆಗಳಲ್ಲೂ ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡ ಮಲ್ಲೇಶಗೌಡರು ಕಡೆವರೆಗೂ ಮುಂಚೂಣಿ ಕಾಯ್ದುಕೊಂಡು ಅಂತಿಮವಾಗಿ ವಿಜಯಮಾಲೆಗೆ ಕೊರಳೊಡ್ಡಿದರು.

ಮಲ್ಲೇಶಗೌಡರ ಗೆಲುವು ಖಚಿತವಾಗುತ್ತಿದ್ದಂತೆ ಅವರ ಅಪಾರ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಪರಿಷತ್‌ ಸಾರಥಿಯಾಗಿ ಕನ್ನಡದ ತೇರು ಎಳೆಯಲು ಅಣಿಯಾದ ಸಾಹಿತಿಗೆ ಹೂವಿನ ಹಾರ
ಹಾಕಿ ಆತ್ಮೀಯವಾಗಿ ಅಭಿನಂದಿಸಿ, ಶುಭಕೋರಿದರು.

‘ಕಳೆದ 36 ವರ್ಷಗಳಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಮಾತೃಭಾಷೆಯನ್ನು ಬೋಧನೆ ಮಾಡಿರುವ ಮಲ್ಲೇಶಗೌಡರು, ಮುಂದೆ ಸಾಹಿತ್ಯ ಕಂಪನ್ನು ಜಿಲ್ಲೆ, ನಾಡಿಗೆ ಪಸರಿಸುವ ಕೆಲಸ ಮಾಡಲಿ. ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ತನ್ನದೇ ಮಹತ್ವ ಪಡೆದಿರುವ ಪರಿಷತ್ತನ್ನು ಉತ್ತಮ ರೀತಿಯಲ್ಲಿ ಕಟ್ಟಿ, ಬೆಳೆಸಲಿ’ ಎಂದು ಜಿಲ್ಲಾ ಜೆಡಿಎಸ್ ವಕ್ತಾರ ರಘು ಹೊಂಗೆರೆ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.