ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಸನ | ಕ್ರಿಸ್‌‌ಮಸ್‌‌ಗೆ ಸಂಭ್ರಮದ ಸಿದ್ಧತೆ

ದೀಪಾಲಂಕಾರದಲ್ಲಿ ಕಂಗೊಳಿಸಿದ ಚರ್ಚುಗಳು, ಸೆಂಟಾಕ್ಲಾಸ್‌ ಪ್ರತಿಕೃತಿ ನಿರ್ಮಾಣ
ಸಂತೋಷ್‌ ಸಿ.ಬಿ.
Published 24 ಡಿಸೆಂಬರ್ 2023, 6:17 IST
Last Updated 24 ಡಿಸೆಂಬರ್ 2023, 6:17 IST
ಅಕ್ಷರ ಗಾತ್ರ

ಹಾಸನ: ಕ್ರಿಸ್ಮಸ್‌ ಆಚರಣೆಗೆ ಜಿಲ್ಲೆಯಲ್ಲಿ ಸಿದ್ಧತೆಗಳು ಭರದಿಂದ ಆರಂಭವಾಗಿವೆ. ಗೋದಲಿ ನಿರ್ಮಾಣ, ಕ್ರಿಸ್ಮಸ್‌ ಟ್ರೀ, ಅಲಂಕಾರ ಮಾಡಲಾಗಿದೆ. ಚರ್ಚ್‌ಗಳು, ಕ್ರೈಸ್ತ ಶಿಕ್ಷಣ ಸಂಸ್ಥೆಗಳ ಕಚೇರಿಗಳು ಹಾಗೂ ಕ್ರೈಸ್ತರ ಮನೆಗಳು ವಿದ್ಯುದ್ದೀಪಗಳ ಅಲಂಕಾರದಿಂದ ಝಗಮಗಿಸುತ್ತಿವೆ. ಸಡಗರದಿಂದ ಹಬ್ಬ ಆಚರಿಸಲು ಸಜ್ಜಾಗಿವೆ.

ಡಿಸೆಂಬರ್ 25 ರಂದು ಕ್ರಿಸ್ಮಸ್ ಅನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಜಿಲ್ಲೆಯಲ್ಲಿಯೂ ಕ್ರೈಸ್ತ ಸಮುದಾಯದವರು ಅದ್ದೂರಿಯಾಗಿ ವಿಶೇಷ ಹಬ್ಬವನ್ನು ಸಂಭ್ರಮಿಸುವ ಕ್ಷಣಕ್ಕಾಗಿ ಎದುರು ನೋಡುತ್ತಿದ್ದಾರೆ.

ಚರ್ಚ್‌ಗಳಲ್ಲಿ ಡಿಸೆಂಬರ್ 24ರ ರಾತ್ರಿ 11.30 ರಿಂದ ಡಿಸೆಂಬರ್ 25ರ ಮಧ್ಯರಾತ್ರಿ 2.30ರ ವರೆಗೂ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಧರ್ಮಗುರುಗಳು ಚರ್ಚ್‌ನಲ್ಲಿ ಪ್ರವಚನ ಹಾಗೂ ಯೇಸುವಿನ ಕುರಿತು ವಿಷಯಗಳನ್ನು ತಿಳಿಸಲಿದ್ದಾರೆ.

‘ಡಿಸೆಂಬರ್ 24ರಂದು ರಾತ್ರಿ 11.30ಕ್ಕೆ ಚರ್ಚ್‌ನಲ್ಲಿ ಕೇಕ್ ಕತ್ತರಿಸಿ ಸಿಹಿ ಹಂಚಿ ಸಂಭ್ರಮಿಸಲಾಗುತ್ತದೆ. ಜಗತ್ತಿನಲ್ಲಿ ಶಾಂತಿ, ನೆಮ್ಮದಿಯ ವಾತಾವರಣ ಸೃಷ್ಟಿಯಾಗಲಿ. ರೈತರು, ಜನರಿಗೆ ಒಳಿತಾಗಲಿ ಎಂದು ಪ್ರಾರ್ಥನೆ ಸಲ್ಲಿಸಲಾಗುವುದು’ ಎಂದು ಸಂತ ಅಂತೋಣಿ ಚರ್ಚ್‌ ಧರ್ಮಗುರು ಫಾ.ಪ್ಯಾಟ್ರಿಕ್ ಜೋನ್ಸ್ ತಿಳಿಸಿದರು.

ವಿಶೇಷವಾಗಿ ಯೇಸುವಿನ ಜನನದ ವಿಶೇಷ ದೃಶ್ಯಾವಳಿಗಳ ಪ್ರದರ್ಶನವು ದೇವಾಲಯದ ಎದುರಿನ ಆವರಣದಲ್ಲಿ ನಡೆಯಲಿದೆ. ಕ್ರಿಸ್ಮಸ್ ಅನ್ನು ವಾರವೆಲ್ಲ ಆಚರಿಸುತ್ತೇವೆ‌. ಈ ಸಂದರ್ಭದಲ್ಲಿ ವಿಶೇಷವಾದ ಉಡುಗೆ– ತೊಡುಗೆ, ಆಹಾರ ಪದ್ಧತಿ ಅನುಸರಿಸಲಾಗುತ್ತದೆ ಎನ್ನುತ್ತಾರೆ ಅವರು.

ಸಂಪ್ರದಾಯಗಳ ಪ್ರಕಾರ, ಕ್ರಿಸ್ಮಸ್ ಆಚರಣೆಗಳು ಡಿಸೆಂಬರ್ 24 ರಂದು ಪ್ರಾರಂಭವಾಗುತ್ತವೆ. ಇದನ್ನು ಕ್ರಿಸ್ಮಸ್ ಈವ್ ಎಂದು ಕರೆಯಲಾಗುತ್ತದೆ.

ಸಿಎಸ್‌ಐ ವೆಸ್ಲಿ ಚರ್ಚ್‌‌‌‌ ವಿಶೇಷ

ನಗರದ ಆರ್‌ಸಿ ರಸ್ತೆಯ ಸಿಎಸ್ಐ ವೆಸ್ಲಿ ಚರ್ಚ್‌ನಲ್ಲಿ ಡಿಸೆಂಬರ್ 25 ಬೆಳಿಗ್ಗೆ 8 ರಿಂದ 11 ರವರೆಗೆ ಆರಾಧನೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಡಿಸೆಂಬರ್ 24ರ ಸಂಜೆ 7 ಗಂಟೆಗೆ ಕ್ಯಾಂಡಲ್ ಲೈಟ್ ಸರ್ವಿಸ್ (ಮೆರವಣಿಗೆ) ಏರ್ಪಡಿಸಲಾಗಿದ್ದು, ಕತ್ತಲೆನಿಂದ ಬೆಳಕಿನೆಡೆಗೆ ಎಂಬ ನಂಬಿಕೆಯೊಂದಿಗೆ ಸಮುದಾಯದವರು ಇದರಲ್ಲಿ ಭಾಗವಹಿಸಲಿದ್ದಾರೆ. 

ಸ್ಲೇಟರ್ಸ್ ಹಾಲ್ ಸರ್ಕಲ್‌ನಿಂದ ರಕ್ಷಣಾಪುರಂ ಸುತ್ತ ಸಾಗಿ ಚರ್ಚ್‌ನಲ್ಲಿ ಸಮಾರೋಪಗೊಳ್ಳಲಿದೆ.

ನಂತರ ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸಲಾಗುವುದು. ಡಿಸೆಂಬರ್ 1 ರಿಂದ ಇಲ್ಲಿಯವರೆಗೂ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಯೇಸು ಜನನದ ಕುರಿತು ಹಾಡುಗಳನ್ನು ಹಾಡುವ ಮೂಲಕ ಯೇಸುವನ್ನು ಸ್ಮರಿಸಲಾಗಿದೆ. ಈ ದಿನಗಳಲ್ಲಿ ಮಕ್ಕಳ ಕ್ರಿಸ್ಮಸ್, ಮಹಿಳೆ , ಯುವಜನರ ಕ್ರಿಸ್ಮಸ್ ಕಾರ್ಯಕ್ರಮವನ್ನು ಮಾಡಲಾಗಿತ್ತು ಎಂದು ಸಿಎಸ್ಐ ವೆಸ್ಲಿ ಚರ್ಚ್‌ನ ಫಾ.ವಿನೀತ್ ಸ್ವರೂಪ ತಿಳಿಸಿದ್ದಾರೆ.

‘ಜಾನಪದ ಕಲೆಯ ಪರಿಚಯ’

ಈ ಬಾರಿ ಕ್ರಿಸ್ಮಸ್ ವಿಶೇಷವಾಗಿ ಡಿಸೆಂಬರ್ 27ರಂದು ನಗರದ ಸಂತ ಜೋಸೆಫ್ ಶಾಲೆಯ ಆವರಣದಲ್ಲಿ ಸಮುದಾಯದ ಯುವಕರಿಗೆ ಹಾಗೂ ಮಕ್ಕಳಿಗೆ ಜಾನಪದ ಕಲೆಯ ಬಗ್ಗೆ ಪರಿಚಯಿಸಲು ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಸಂಗೀತ, ನೃತ್ಯ ಸೇರಿದಂತೆ ಧಾರ್ಮಿಕ ಹಿನ್ನೆಲೆಯ ಪ್ರವಚನಗಳು ಇರಲಿವೆ ಎಂದು ಫಾ.ಪ್ಯಾಟ್ರಿಕ್ ಜೋನ್ಸ್‌ ಹೇಳಿದರು.

ಸೇಂಟ್‌ ಅಂತೋಣಿ ಚರ್ಚ್ ಅಡಿಯಲ್ಲಿ ಹತ್ತು ಸಂಘ ರಚನೆಗೊಂಡಿದ್ದು, ಕ್ರಿಸ್ಮಸ್ ಹಿನ್ನೆಲೆಯಲ್ಲಿ ಈಗಾಗಲೇ ಸರ್ಕಾರಿ ಹಾಗೂ ಖಾಸಗಿ ವಲಯದ ಅಧಿಕಾರಿಗಳನ್ನು ಭೇಟಿ ಮಾಡಿ, ಅವರ ಸೇವೆಯನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT