ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ಧರ್ಮದ ಸಂವಿಧಾನ ಧಿಕ್ಕರಿಸಿ

ಸರ್ವ ಜನರ ಸಂವಿಧಾನ ಸಮಾವೇಶದಲ್ಲಿ ನಿವೃತ್ತ ಪ್ರಾಧ್ಯಾಪಕ ಮಹೇಶ್‌ ಚಂದ್ರ ಗುರು ಕರೆ
Last Updated 24 ಸೆಪ್ಟೆಂಬರ್ 2019, 13:34 IST
ಅಕ್ಷರ ಗಾತ್ರ

ಹಾಸನ: ‘ಸ್ವಾತಂತ್ರ್ಯ, ಸಮಾನತೆ ದೊರೆಯದ ಹಿಂದೂ ಧರ್ಮ ಸಂವಿಧಾನ ಧಿಕ್ಕರಿಸಿ, ಅಂಬೇಡ್ಕರ್‌ ರಚಿಸಿದ ಸಂವಿಧಾನ ಸ್ವೀಕರಿಸಬೇಕು’ ಎಂದು ಮೈಸೂರು ವಿಶ್ವವಿದ್ಯಾಲಯ ನಿವೃತ್ತ ಪ್ರಾಧ್ಯಾಪಕ ಮಹೇಶ ಚಂದ್ರ ಗುರು ಕರೆ ನೀಡಿದರು.

ನಗರದ ಅಂಬೇಡ್ಕರ್‌ ಭವನದಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕ ಏರ್ಪಡಿಸಿದ್ದ ಸರ್ವ ಜನರ ಸಂವಿಧಾನ ಸಮಾವೇಶದಲ್ಲಿ ಮಾತನಾಡಿದರು.

‘ದೇಶದಲ್ಲಿ ಎರಡು ಸಂವಿಧಾನಗಳಿವೆ. ಒಂದು ಹಿಂದೂ ಧಾರ್ಮಿಕ ಸಂವಿಧಾನ, ಮತ್ತೊಂದು ಅಂಬೇಡ್ಕರ್‌ ಸಂವಿಧಾನ. ಹಿಂದೂ ಸಂವಿಧಾನದಲ್ಲಿ ಶೋಷಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ, ದಬ್ಬಾಳಿಕೆಯನ್ನು ಏಕೆ ಒಪ್ಪಿಕೊಳ್ಳಬೇಕು? ಜೀತದಾಳುಗಳಾಗಿ ಯಾಕೆ ಬದುಕಬೇಕು? ಹಿಂದೂ ಧರ್ಮ ಬಿಟ್ಟರೆ ಮೀಸಲಾತಿ ಸಿಗುವುದಿಲ್ಲ ಎಂಬ ಭಯ ಹುಟ್ಟಿಸಲಾಗುತ್ತಿದೆ. ಆದರೆ ಎಲ್ಲಾ ಧರ್ಮಗಳಲ್ಲೂ ಮೀಸಲಾತಿ ಇದೆ’ ಎಂದು ತಿಳಿಸಿದರು.

‘ಅಂಬೇಡ್ಕರ್‌ ರಚಿಸಿದ ಸಂವಿಧಾನ ಯೇಸು, ಪೈಂಗಬರ, ಬುದ್ದನಿಂದ ಪ್ರೇರಿತವಾಗಿದೆ. ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು ಎಂಬ ಮಾತಿನಂತೆ ಇತಿಹಾಸ ಪ್ರಜ್ಞೆ ಇಲ್ಲದೆ ಹಿಂದೂಳಿದವರು ಕೋಮವಾದಿಗಳಿಗೆ ಮತ ಹಾಕಿದ್ದಾರೆ. ಈಗಲಾದರೂ ಎಚ್ಚೇತ್ತುಕೊಂಡು ಬುದ್ಧನ ಮಾರ್ಗದಲ್ಲಿ ಸಾಗಬೇಕು. ನೇರ ಮತ್ತು ನಿಷ್ಠುರತೆಯಿಂದ ಮಾತನಾಡಿದರೆ ಹೆದರಿಸಲು ಕೇಸ್‌ ಹಾಕುತ್ತಾರೆ. ಇಂತಹ ಕೇಸ್‌ಗಳಿಗೆ ಹೆದರುವುದಿಲ್ಲ. ಪ್ರತಿಯೊಂದು ಕೇಸ್‌ ನನಗೆ ಭಾರತ ರತ್ನ ಇದ್ದಂತೆ. ವಕೀಲರನ್ನು ನೇಮಕ ಮಾಡಿಕೊಳ್ಳದೇ ನಾನೇ ಹೋರಾಟ ಮಾಡುತ್ತೇನೆ’ ಎಂದು ಗುಡುಗಿದರು.

‘ಜಾಗತೀಕರಣ, ಉದಾರೀಕರಣ, ಖಾಸಗೀಕರಣದಿಂದ ದೇಶದಲ್ಲಿ ರೈತರು, ಯುವಕರು, ಕಾರ್ಮಿಕರು, ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಪ್ರವಾಹದಿಂದ ಸಾವಿರಾರು ಜನರ ಬದುಕು ಬೀದಿಗೆ ಬಂದಿದೆ. ಪ್ರಧಾನಿ ಮೋದಿ ಅವರು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ. ಮೋದಿ ಸರ್ಕಾರ ಶ್ರೀಮಂತರ ಪರವಾಗಿದೆ. ರಾಜ್ಯದಲ್ಲೂ ಕುಟುಂಬ ರಾಜಕಾರಣ ವಿರುದ್ಧ ಹೋರಾಡಬೇಕು’ ಎಂದು ಕರೆ ನೀಡಿದರು.

ಸಮಿತಿ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್‌ ಮಾತನಾಡಿ, ‘ಹೋರಾಟಗಾರರ ತ್ಯಾಗ, ಬಲಿದಾನದಿಂದ ಚಳವಳಿ ಮುಂದೆ ಸಾಗುತ್ತಿದೆ. ದಲಿತರು ತಲೆ ಎತ್ತುವಂತೆ ಮಾಡಿದವರು ಬಿ.ವಿ.ಚಂದ್ರಪ್ರಸಾದ್‌ ತ್ಯಾಗಿ ಎಂಬುದನ್ನು ಮರೆಯಬಾರದು. ಪೇಜಾವರ ಸ್ವಾಮೀಜಿ ಅವರ ತಲೆಯಲ್ಲಿ ಯಾವ ಸಂವಿಧಾನ ಇದೆ ಗೊತ್ತಿಲ್ಲ. ನಮಗೆ ಗೊತ್ತಿರುವುದು ಅಂಬೇಡ್ಕರ್‌ ರಚಿಸಿದ ಸಂವಿಧಾನ ಮಾತ್ರ‌’ ಎಂದರು.

‘ರಾಮನ ಹೆಸರಿನಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಉದ್ಯೋಗ ಇಲ್ಲದೆ ಯುವ ಜನರು ಪರದಾಡುತ್ತಿದ್ದಾರೆ. ಬ್ಯಾಂಕ್‌ ಗಳನ್ನು ವೀಲಿನ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಅಂಬಾನಿ, ಅದಾನಿ, ಬಿರ್ಲಾ ಅವರಿಗೆ ವಹಿಸುವ ಹುನ್ನಾರ ನಡೆದಿದೆ. ಮೀಸಲಾತಿ ಭಿಕ್ಷೆ ಅಲ್ಲ. ಅದು ಸಾಮಾಜಿಕ ಪಾಲುದಾರಿಕೆ’ ಎಂದು ನುಡಿದರು.

ಚಿತ್ರ ಕಲಾವಿದ ಕೆ.ಟಿ.ಶಿವಪ್ರಸಾದ್‌ ಮಾತನಾಡಿದರು. ಜಿಲ್ಲಾ ಸಂಚಾಲಕ ಬಿ.ಎಲ್.ಲಕ್ಷ್ಮಣ್‌ ಬೇಲೂರು ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ಮಹಾಂತಪ್ಪ, ನಿವೃತ್ತ ತಹಶೀಲ್ದಾರ್‌ ನಾಗೇಶಯ್ಯ ಅವರನ್ನು ಸನ್ಮಾನಿಸಲಾಯಿತು.

ಸಮಾವೇಶದಲ್ಲಿ ಮುಖಂಡರಾದ ಕಾರಳ್ಳಿ ಶ್ರೀನಿವಾಸ್‌, ಚಂದ್ರು ಬೆಳ್ತಂಗಡಿ, ಸುಂದರ್‌ ಮಾಸ್ತರ್‌, ಎಸ್‌.ಎಸ್‌.ಪ್ರಸಾದ್‌, ಮಲ್ಲೇಶ್‌ ಅಂಬುಗ, ಟಿ.ಡಿ.ಸುಮಾ ಹಾಜರಿದ್ದರು. ಪ್ರಸನ್ನ ಸ್ವಾಗತಿಸಿದರು. ಮಹೇಶ್‌ ಅಂಬುಗ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಮಾವೇಶಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿನ ಅಂಬೇಡ್ಕರ್‌ ಪ್ರತಿಮೆಗೆ ಮಾರ್ಲಾಪಣೆ ಮಾಡಲಾಯಿತು. ಬಳಿಕ ಅಲ್ಲಿಂದ ವೇದಿಕೆ ಕಾರ್ಯಕ್ರಮಕ್ಕೆ ನೂರಾರು ಜನರು ಮೆರವಣಿಗೆಯಲ್ಲಿ ಬಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT