ಬುಧವಾರ, ಮೇ 18, 2022
27 °C
ಹೊನ್ನೇನಹಳ್ಳಿ, ಹಿರೀಸಾವೆಯಲ್ಲಿ ಚೌಡೇಶ್ವರಿ ದೇವಿ ಆರಾಧನೆ

ಹಿರೀಸಾವೆ: 15 ದಿನ ನಮ್ಮೂರ ಹಬ್ಬ ಸಂಭ್ರಮ

ಹಿ.ಕೃ.ಚಂದ್ರು Updated:

ಅಕ್ಷರ ಗಾತ್ರ : | |

Prajavani

ಹಿರೀಸಾವೆ: ಹೊನ್ನೇನಹಳ್ಳಿ ಮತ್ತು ಹಿರೀಸಾವೆಯ ಗ್ರಾಮ ದೇವತೆ ಚೌಡೇಶ್ವರಿ ದೇವಿಯ ‘ನಮ್ಮೂರ ಹಬ್ಬ’ ಶುಕ್ರವಾರದಿಂದ ಆರಂಭವಾಗಿದ್ದು, 15 ದಿನಗಳವರೆಗೆ ಸಂಭ್ರಮ ಮೇಳೈಸಲಿದೆ.

ಗ್ರಾಮದ ಎಲ್ಲ ವರ್ಗದ ಜನರು ನಮ್ಮೂರ ಹಬ್ಬದಲ್ಲಿ ಭಾಗಿಯಾಗುತ್ತಾರೆ. ಕೊರೊನಾದಿಂದ ಎರಡು ವರ್ಷದಿಂದ ಈ ಹಬ್ಬ ಆಚರಿಸಿರಲಿಲ್ಲ. ಈ ವರ್ಷ ಅದ್ಧೂರಿಯಾಗಿ ಆಚರಿಸಲು ಸಿದ್ಧತೆ ನಡೆದಿದ್ದು, ಹೆಚ್ಚಿ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ.

ಯುಗಾದಿ ಹಬ್ಬದ ನಂತರ ಈ ಹಬ್ಬವನ್ನು ಆಚರಿಸುವುದು ವಾಡಿಕೆ. ಹೆಬ್ಬಾರಮ್ಮ ದೇವಸ್ಥಾನಕ್ಕೆ ಶುಕ್ರವಾರ ಹಸಿರು ಚಪ್ಪರ ಹಾಕುವ ಮೂಲಕ ಹಬ್ಬ ಪ್ರಾರಂಭವಾಗಿದೆ. ಎರಡು
ಗ್ರಾಮಗಳಲ್ಲಿ ಚೌಡೇಶ್ವರಿ ಮತ್ತು ಹೆಬ್ಬಾರಮ್ಮ ದೇವರ ಮೆರವಣಿಗೆ ಸಾಗುವ ಬೀದಿಗಳಲ್ಲಿ ಪಾದರಕ್ಷೆ ಧರಿಸಿ ಓಡಾಡುವಂತಿಲ್ಲ.

ದೇವರ ಮನೆತನದವರು ಮಾಂಸಾಹಾರ, ರೊಟ್ಟಿ ಮತ್ತು ಕಂಟು ಪದಾರ್ಥ ಮಾಡುವುದಿಲ್ಲ. ಈ ಹಬ್ಬದಲ್ಲಿ ಮನೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುತ್ತಾರೆ.

ಪ್ರತಿ ದಿನ ರಾತ್ರಿ ಒಂದೊಂದು ಮನೆತನದವರು ಚೌಡೇಶ್ವರಿ ದೇವಿಯ ಉತ್ಸವ ನಡೆಸುತ್ತಾರೆ. ಗ್ರಾಮಗಳಲ್ಲಿ ಜನಪದ ಶೈಲಿಯ ರಂಗ ಕುಣಿತ, ಶೋಭಾನೆ ಪದ, ಜಾಗರಣೆ ನಡೆಯುತ್ತದೆ. ಅಕ್ಕಪಕ್ಕದ ಗ್ರಾಮಸ್ಥರು ಸಹ ರಂಗ ಕುಣಿಯುವುದು ವಿಶೇಷ.

ಏ.19ರಂದು ಹೊನ್ನೇನಹಳ್ಳಿ ಜನರು ಮಣ್ಣಿನ ಮಡಿಕೆಯಲ್ಲಿ ಮಡೆ ತಯಾರಿಸುತ್ತಾರೆ. ಹಸಿ ಈಚಲು ಗರಿಯಿಂದ ಮಡೆ ಅನ್ನ ಬೇಯಿಸುವುದು ವಿಶೇಷ. ಅಂದು ರಾತ್ರಿ ಅಲಂಕೃತ ಮಡೆಗಳನ್ನು ಹೊತ್ತ ಭಕ್ತರು ಹೆಬ್ಬಾರಮ್ಮ ದೇವರ ಜೊತೆಯಲ್ಲಿ ಮೆರವಣಿಗೆ ನಡೆಸುತ್ತಾರೆ. ಹರಕೆ ಹೊತ್ತವರು ಉರುಳು ಸೇವೆ, ಬಾಯಿ ಬೀಗದ ಸೇವೆ ಸಲ್ಲಿಸುತ್ತಾರೆ.

20ರಂದು ಚೌಡೇಶ್ವರಿ ದೇವಿಯ ಬ್ರಹ್ಮ ರಥೋತ್ಸವ ನಡೆಯಲಿದೆ. ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ರಾತ್ರಿ ಸ್ನೇಹಿತರ ಬಳಗದಿಂದ ದಿ. ಮದನ್, ದಿವಾಕರ್, ಬಾಬು ಅವರ ಜ್ಞಾಪಕಾಥರ್ವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.

‘ದೇವಸ್ಥಾನದ ಬಾಗಿಲನ್ನು ಹಬ್ಬ ನಡೆಯುವ ದಿನಗಳಲ್ಲಿ ಮಾತ್ರ ತೆಗೆಯಲಾಗುತ್ತದೆ. ತವರು ಮನೆಯಾದ ಹೊನ್ನೇನಹಳ್ಳಿಗೆ ಒಂದು ದಿನ ಹೋಗಿ ದರ್ಶನ ನೀಡಿ, ಹಿರೀಸಾವೆಗೆ ಮರಳುತ್ತದೆ. ವರ್ಷದಲ್ಲಿ 15 ದಿನ ದೇವಿಗೆ ಪೂಜೆ ಸಲ್ಲಿಸುವ ಅವಕಾಶ ಭಕ್ತರಿಗೆ ಸಿಗುತ್ತದೆ’ ಎಂದು ಗ್ರಾಮಸ್ಥರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.