ಗುರುವಾರ , ಡಿಸೆಂಬರ್ 3, 2020
23 °C
ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಾಳೆ

ಹೊಳೆನರಸೀಪುರ: ಅಧ್ಯಕ್ಷ ಸ್ಥಾನ ನಿರೀಕ್ಷೆಯಲ್ಲಿ ಅಭ್ಯರ್ಥಿಗಳು

ಎಚ್.ವಿ. ಸುರೇಶ್‍ಕುಮಾರ್ Updated:

ಅಕ್ಷರ ಗಾತ್ರ : | |

Prajavani

ಹೊಳೆನರಸೀಪುರ: ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನ.9ಕ್ಕೆ ನಡೆಯಲಿದ್ದು, ಅಧಿಕಾರದ ಗದ್ದುಗೆ ಏರಲು ಅಭ್ಯರ್ಥಿಗಳು ಕಸರತ್ತು ನಡೆಸಿದ್ದಾರೆ.

ಪಟ್ಟಣದಲ್ಲಿ 23 ವಾರ್ಡ್‌ಗಳಿದ್ದು ಎಲ್ಲ ವಾರ್ಡ್‌ಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ, ಉಪಾಧ್ಯಕ್ಷ ಸ್ಥಾನ ಬಿಸಿಎಂ ಮಹಿಳೆಗೆ ಮೀಸಲಾಗಿದೆ. ಎಲ್ಲ ವಾರ್ಡ್‌ಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳೇ ಗೆಲುವು ಸಾಧಿಸಿರುವುದರಿಂದ ಅವಿರೋಧ ಆಯ್ಕೆ ನಿಶ್ಚಿತ. ಶಾಸಕ ಎಚ್.ಡಿ.ರೇವಣ್ಣ ಅವರು ಸೂಚಿಸುವ ಅಭ್ಯರ್ಥಿಯು ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ. ಉಪಾಧ್ಯಕ್ಷ ಸ್ಥಾನ ಬಿಸಿಎಂ ‘ಬಿ’ ಮಹಿಳೆಗೆ ಮೀಸಲಾಗಿದ್ದು, 19ನೇ ವಾರ್ಡ್‌ನ ತ್ರಿಲೋಚನಾ ಉಪಾಧ್ಯಕ್ಷೆಯಾಗುವುದು ನಿಶ್ಚಿತವಾಗಿದೆ.

1ನೇ ವಾರ್ಡ್‌ನ ಜಿ.ಕೆ.ಸುಧಾ ನಳಿನಿ 3ನೇ ಬಾರಿಗೆ ಸದಸ್ಯರಾಗಿ ಆಯ್ಕೆಯಾಗಿದ್ದು, ಇವರಿಗೆ ಅಧ್ಯಕ್ಷ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಇದೆ. 2ನೇ ವಾರ್ಡ್‌ನ ಜ್ಯೋತಿ ಸಹ ಆಕಾಂಕ್ಷಿಯಾಗಿದ್ದು, ಅಧಿಕಾರ ಒಲಿದುಬರಲೆಂದು ದೇವಾಲಯಗಳಿಗೆ ಭೇಟಿ ನೀಡಿ ಪ್ರಾರ್ಥಿಸುತ್ತಿದ್ದಾರೆ.

7ನೇ ವಾರ್ಡ್‌ನ ಶಫಿನಾಜ್, 9ನೇ ವಾರ್ಡ್‌ನ ಸಿ.ಜೆ.ವೀಣಾ, 13ನೇ ವಾರ್ಡ್‌ನ ಟಿ.ಶಾಂತಿ, 17ನೇ ವಾರ್ಡ್‌ನ ನಾಗಮಣಿ, 20ನೇ ವಾರ್ಡ್‌ನ ಮಮತಾ ಕುಮಾರಿ, 22ನೇ ವಾರ್ಡ್‌ನ ಡಿ.ಜಯಲಕ್ಷ್ಮಿ, 23ನೇ ವಾರ್ಡ್‌ನ ಸಾವಿತ್ರಿ ರೇವಣ್ಣ ಅವರೂ ಸಹ ಅಧ್ಯಕ್ಷೆ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ಅಧ್ಯಕ್ಷೆ, ಉಪಾಧ್ಯಕ್ಷೆ ಆಯ್ಕೆ ವಿಚಾರವಾಗಿ ಶಾಸಕ ರೇವಣ್ಣ ಯಾರಿಗೂ ಗುಟ್ಟು ಬಿಟ್ಟುಕೊಟ್ಟಿಲ್ಲ. ಸದಸ್ಯರು ಯಾರನ್ನು ಸೂಚಿಸುತ್ತಾರೋ ಅವರನ್ನೇ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನಾಗಿ ಘೋಷಿಸಲಾಗುವುದು ಎಂದು ರೇವಣ್ಣ ಹೇಳುತ್ತಿದ್ದಾರೆ. ಆದರೆ, ಆ ರೀತಿ ಶಿಫಾರಸು ಮಾಡುವವರು ಯಾರೂ ಇಲ್ಲ. ಹೀಗಾಗಿ, ಯಾರು ಅಧ್ಯಕ್ಷರಾಗಬಹುದು ಎಂಬ ಕುತೂಹಲ ಪಟ್ಟಣದ ನಿವಾಸಿಗಳಲ್ಲಿದೆ.

***

ನಾನು 3ನೇ ಬಾರಿ ಗೆದ್ದಿದ್ದು, ಕಲಾಪಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವುದರಿಂದ ನನ್ನನ್ನೇ ಅಧ್ಯಕ್ಷೆಯನ್ನಾಗಿ ಮಾಡುತ್ತಾರೆ ಎಂಬ ನಿರೀಕ್ಷೆ ಇದೆ.
ಜಿ.ಕೆ.ಸುಧಾ ನಳಿನಿ, 1ನೇ ವಾರ್ಡ್‌ ಸದಸ್ಯೆ

***

ಶಾಸಕ ಎಚ್‌.ಡಿ.ರೇವಣ್ಣ ಅವರು ಸೂಚಿಸಿದರೆ ನಾನೂ ಅಧ್ಯಕ್ಷೆಯಾಗಲು ಸಿದ್ಧ.
ಜ್ಯೋತಿ, 2ನೇ ವಾರ್ಡ್‌ ಸದಸ್ಯೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.