ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಹಾಸ್ಟೆಲ್‌ಗಳಿಗೆ ಬಾಡಿಗೆ ಕಟ್ಟಡಗಳೇ ಗತಿ

ವರ್ಷದಿಂದ ವರ್ಷಕ್ಕೆ ಪ್ರವೇಶಾತಿಗೆ ಹೆಚ್ಚುತ್ತಿರುವ ಬೇಡಿಕೆ, ಮೂಲ ಸೌಲಭ್ಯ ಕೊರತೆ
Last Updated 4 ಅಕ್ಟೋಬರ್ 2021, 5:17 IST
ಅಕ್ಷರ ಗಾತ್ರ

ಹಾಸನ: ಪ್ರತಿ ವರ್ಷ ವಿದ್ಯಾರ್ಥಿ ನಿಲಯಗಳಿಗೆ ಪ್ರವೇಶಾತಿ ಬಯಸುವ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗುತ್ತಿದೆ. ಆದರೆ, ಬೇಡಿಕೆಗೆ ತಕ್ಕಷ್ಟು ವಿದ್ಯಾರ್ಥಿ ನಿಲಯ ಹಾಗೂ ಮೂಲ ಸೌಕರ್ಯದ ಕೊರತೆಯಿಂದ ಅನೇಕ ವಿದ್ಯಾರ್ಥಿಗಳು ಸೀಟು ಸಿಗದೆ ವಂಚಿತರಾಗುತ್ತಿದ್ದಾರೆ.

ಹಲವು ಹಾಸ್ಟೆಲ್‌ಗಳ ಕಟ್ಟಡಗಳು ಶಿಥಿಲಗೊಂಡು, ಚಾವಣಿಯ ಸಿಮೆಂಟ್‌ ಉದುರುತ್ತಿದೆ. ಶೌಚಾಲಯ, ಬಿಸಿ ನೀರಿನ ವ್ಯವಸ್ಥೆ ಇಲ್ಲ. ಆಲೂರು ತಾಲ್ಲೂಕಿನಲ್ಲಿಬಾಲಕರ ವಸತಿ ನಿಲಯವನ್ನು ಕೋವಿಡ್ ಆರೈಕೆ ಕೇಂದ್ರಕ್ಕೆ ಬಳಸಿಕೊಳ್ಳಲಾಗಿದೆ. ಇನ್ನು ಮಲೆನಾಡು ಭಾಗದಲ್ಲಿ ಶೇ 60ರಷ್ಟು ಪೋಷಕರು ತಮ್ಮ ಮಕ್ಕಳನ್ನು ಹೊರ ಜಿಲ್ಲೆಗಳಲ್ಲಿ ಓದಿಸುತ್ತಿದ್ದಾರೆ.

ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ 96 ವಿದ್ಯಾರ್ಥಿ ನಿಲಯಗಳಿದ್ದು, 13 ವಿದ್ಯಾರ್ಥಿನಿಲಯಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಅಲ್ವ ಸಂಖ್ಯಾತರ ಇಲಾಖೆಯ 11 ವಿದ್ಯಾರ್ಥಿ ನಿಲಯಗಳ ಪೈಕಿ 2 ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಹಿಂದುಳಿದ ವರ್ಗಗಳ ಇಲಾಖೆಯ 116 ವಿದ್ಯಾರ್ಥಿ ನಿಲಯಗಳ ಪೈಕಿ 28 ವಿದ್ಯಾರ್ಥಿ ನಿಲಯಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ.

ಹೊಸ ಕಟ್ಟಡ ಮಂಜೂರು ಮಾಡುವಂತೆ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಅನೇಕ ವಿದ್ಯಾರ್ಥಿ ನಿಲಯಗಳು ಈಗಾಗಲೇ ಮಂಜೂರಾಗಿವೆ, ಕೆಲವು ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.

ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯಗಳಲ್ಲಿ 3,163 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿದೆ. ಏಳು ಕಟ್ಟಡಗಳು ಮಂಜೂರಾಗಿದ್ದು, ಟೆಂಡರ್‌ ಪ್ರಕ್ರಿಯೆ ಮುಗಿದಿದೆ. ಹಾಸನ ಜಿಲ್ಲಾ ಕೇಂದ್ರವಾದ್ದರಿಂದ ಬೇಡಿಕೆ ಹೆಚ್ಚು. ಹಾಸನ ತಾಲ್ಲೂಕಿನಲ್ಲಿಯೇ ಸಮಾಜ ಕಲ್ಯಾಣ ಇಲಾಖೆಯ 24 ಹಾಸ್ಟೆಲ್‌ಗಳಿವೆ. ಇನ್ನೂ 6 ಹಾಸ್ಟೆಲ್‌ ಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ಪ್ರಸ್ತಾವ ಸಲ್ಲಿಸಲಾಗಿದೆ.

‘ಸಮಾಜ ಕಲ್ಯಾಣ ಇಲಾಖೆಯ ಗ್ರೂಪ್‌ ಎ, ಬಿ, ಸಿ, ಡಿ ಹುದ್ದೆ ಸೇರಿ ಒಟ್ಟು 603 ಹುದ್ದೆಗಳು ಮಂಜೂರಾತಿ ಇದ್ದು, 237 ಹುದ್ದೆಗಳು ಮಾತ್ರ ಭರ್ತಿ ಆಗಿವೆ. ಗ್ರೂಪ್‌ ಡಿ ಹುದ್ದೆಗಳಾದ ಕಾವಲುಗಾರರು, ಅಡುಗೆ ಸಹಾಯಕರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡಿದ್ದು, ಯಾವುದೇ ಸಮಸ್ಯೆ ಉಂಟಾಗದಂತೆ ನಿರ್ವಹಣೆ ಮಾಡಲಾಗುತ್ತಿದೆ’ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಚ್‌.ವಿ.ಮಂಜುನಾಥ್‌ ತಿಳಿಸಿದರು.

‘ಹಿಂದುಳಿದ ವರ್ಗಗಳ ಇಲಾಖೆ ಹಾಸ್ಟೆಲ್‌ಗಳಲ್ಲಿ 9,175 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. 81 ವಿದ್ಯಾರ್ಥಿ ನಿಲಯಗಳು ಸ್ವಂತ ಕಟ್ಟಡ ಹೊಂದಿದ್ದು, 28 ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ. 7 ಕಟ್ಟಡಗಳು ದಾನಿಗಳ ನೆರವಿನಿಂದ ಉಚಿತ ಕಟ್ಟಡದಲ್ಲಿ ನಡೆಯತ್ತಿವೆ. 6 ಹಾಸ್ಟೆಲ್‌ಗಳ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. 29 ಹಾಸ್ಟೆಲ್‌ಗಳಿಗೆ ನಿವೇಶನಗಳಿದ್ದು, ಕಟ್ಟಡ ಮಂಜೂರಾತಿಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಇಲಾಖೆಯ ಜಿಲ್ಲಾ ಅಧಿಕಾರಿ ಹಾಕಪ್ಪ ಆರ್‌‌. ಲಮಾಣಿ ಮಾಹಿತಿ ನೀಡಿದರು.

ಹಿಂದುಳಿದ ವರ್ಗಗಳ ಇಲಾಖೆಯಲ್ಲಿ 629 ಹುದ್ದೆ ಮಂಜೂರಾತಿ ಇದ್ದು, ಈ ಪೈಕಿ 223 ಹುದ್ದೆಗಳು ಮಾತ್ರವೇ ಭರ್ತಿಯಾಗಿವೆ. ಇನ್ನೂ 406 ಹುದ್ದೆಗಳು ಖಾಲಿ ಇದೆ ಎಂದು ತಿಳಿಸಿದರು.

ಜಿಲ್ಲೆಯ ಅಲ್ಪಸಂಖ್ಯಾತರ ಇಲಾಖೆಯಲ್ಲಿ 11 ವಿದ್ಯಾರ್ಥಿ ನಿಲಯಗಳಲ್ಲಿ 650 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದಾರೆ. ಹಾಸನ ಮತ್ತು ಚನ್ನರಾಯಪಟ್ಟಣದ ತಲಾ ಒಂದೊಂದು ಹಾಸ್ಟೆಲ್‌ಗಳು ಮಾತ್ರ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ತಾಲ್ಲೂಕು ಕೇಂದ್ರದಲ್ಲಿ ಅರ್ಜಿ ಸಲ್ಲಿಸುವವರ ಸಂಖ್ಯೆ ಕಡಿಮೆ ಇದ್ದು, ನಗರ ಪ್ರದೇಶಗಳಲ್ಲಿ ಬೇಡಿಕೆ ಹೆಚ್ಚಿದೆ.

‘ಹಾಸ್ಟೆಲ್‌ನಲ್ಲಿ ಶೇ 75ರಷ್ಟು ಅಲ್ಪ ಸಂಖ್ಯಾತರಿಗೆ ಹಾಗೂ ಶೇ 25ರಷ್ಟು ಇತರೆ ವರ್ಗದವರಿಗೂ ಪ್ರವೇಶಾತಿ ನೀಡಲಾಗುತ್ತಿದೆ’ ಎಂದು ಅಲ್ಪ ಸಂಖ್ಯಾತರ ಇಲಾಖೆ ಜಿಲ್ಲಾ ಅಧಿಕಾರಿ ಜಿನೇಂದ್ರ ಮಾಹಿತಿ ನೀಡಿದರು.

ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಬಾಡಿಗೆ ಕಟ್ಟಡದಲ್ಲಿ ಹಲವು ಹಾಸ್ಟೆಲ್‌ಗಳು ನಡೆಯುತ್ತಿದ್ದು, ವಿದ್ಯಾರ್ಥಿಗಳಿಗೆ ಕೊಠಡಿ ಕೊರತೆ ಇಲ್ಲ. ಸಮಾಜ ಕಲ್ಯಾಣ ಇಲಾಖೆಯ ಎರಡುಹಾಸ್ಟೆಲ್‌ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಬಿಸಿಎಂ ಇಲಾಖೆಯ 22 ಹಾಸ್ಟೆಲ್ ಗಳಲ್ಲಿ 1,580 ವಿದ್ಯಾರ್ಥಿಗಳಿದ್ದಾರೆ. ನಾಲ್ಕು ಬಾಡಿಗೆ ಕಟ್ಟಡಹಾಗೂ ನಾಲ್ಕು ಕಟ್ಟಡಗಳ ಕಾಮಗಾರಿ ಮುಕ್ತಾಯ ಹಂತ ತಲುಪಿದೆ.

ಆಲೂರು ತಾಲ್ಲೂಕು ಕೇಂದ್ರದಲ್ಲಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಮಾತ್ರ ಸರ್ಕಾರಿ ಕಟ್ಟಡದಲ್ಲಿದೆ. ಮೆಟ್ರಿಕ್ ಪೂರ್ವ ಬಾಲಕಿಯರ ಮತ್ತು ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯಗಳು ಖಾಸಗಿ ಕಟ್ಟಡದಲ್ಲಿ ನಡೆಯುತ್ತಿವೆ. ಬಾಲಕರ ವಸತಿ ನಿಲಯವನ್ನು ಕೋವಿಡ್ ಆರೈಕೆ ಕೇಂದ್ರವಾಗಿ ಬಳಸಿಕೊಂಡಿರುವ ಕಾರಣ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯದಲ್ಲಿ ಅವಕಾಶ ಕಲ್ಪಿಸಲಾಗಿದೆ.

‘ಮರಸು ಗ್ರಾಮದ ಸರ್ವೇ ನಂ. 189 ರಲ್ಲಿ ಎರಡು ವಸತಿ ನಿಲಯಗಳ ಕಟ್ಟಡ ನಿರ್ಮಾಣ ಮಾಡಲು ಒಂದು ಎಕರೆ ಜಾಗ ಮಂಜೂರಾಗಿದೆ. ಕಟ್ಟಡಗಳು ನಿರ್ಮಾಣ ಕಾರ್ಯ ಆರಂಭವಾಗಿಲ್ಲ ’ ಎನ್ನುತ್ತಾರೆ ಹಿಂದುಳಿದ ವರ್ಗಗಳ ಕಲ್ಯಾಣಧಿಕಾರಿ ಎಚ್. ಆರ್. ಲಮಾಣಿ.

ಸಕಲೇಶಪುರ ತಾಲ್ಲೂಕು ಮಲೆನಾಡಿನ ಗುಡ್ಡಗಾಡು ಪ್ರದೇಶವಾದರೂ ವಿದ್ಯಾರ್ಥಿ ನಿಲಯ ಕೊರತೆ ಇಲ್ಲ. ಹತ್ತು ಪಿಯು ಕಾಲೇಜುಗಳು, ಎರಡು ಪ್ರಥಮ ದರ್ಜೆ ಕಾಲೇಜುಗಳು, ಎರಡು ಐಟಿಐ ಕಾಲೇಜುಗಳನ್ನು ಹೊರತುಪಡಿಸಿದರೆ ವೃತ್ತಿಪರ ಕಾಲೇಜುಗಳು ಇಲ್ಲ. ಶೇ 60ಕ್ಕೂ ಹೆಚ್ಚು ಮಂದಿ ಪೋಷಕರು ತಮ್ಮ ಮಕ್ಕಳನ್ನು ಹೊರ ಜಿಲ್ಲೆಗಳಲ್ಲಿ ಓದಿಸುತ್ತಿದ್ದಾರೆ.

ಕಿತ್ತೂರು ರಾಣಿ ಚನ್ನಮ್ಮ ಹಾಗೂ ಅಂಬೇಡ್ಕರ್ ವಸತಿ ನಿಲಯ, ಬ್ಯಾಕರವಳ್ಳಿ ಹಾಗೂ ಹೆತ್ತೂರಿನಲ್ಲಿ ಎರಡು ಮೊರಾರ್ಜಿ ವಸತಿ ಶಾಲೆಗಳು ಇವೆ. ಕೆಲ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ. ಕೋವಿಡ್‌ –19 ಹಿನ್ನೆಲೆಯಲ್ಲಿ ಮಕ್ಕಳ ದಾಖಲಾತಿ ಕೂಡ ಕಡಿಮೆ ಆಗಿದೆ.

ಅರಕಲಗೂಡು ತಾಲ್ಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ಗಳಲ್ಲಿ 300 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಇದ್ದಾರೆ. ಉನ್ನತ ಶಿಕ್ಷಣ ನೀಡುವ ಶೈಕ್ಷಣಿಕ ಸಂಸ್ಥೆಗಳ ಕೊರತೆಯಿಂದ ಪೋಷಕರು ತಮ್ಮ ಮಕ್ಕಳಿಗೆ ನಗರ ಪ್ರದೇಶಗಳಲ್ಲಿ ಶಿಕ್ಷಣ ಕೊಡಿಸುತ್ತಿದ್ದಾರೆ.ಹೋಬಳಿ ಮಟ್ಟದಲ್ಲಿ ವಸತಿ ಶಾಲೆಗಳಿರುವ ಕಾರಣ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ.

ಎ.ಮಂಜು ಸಚಿವರಾಗಿದ್ದ ವೇಳೆ ₹ 18 ಕೋಟಿ ವೆಚ್ಚದಲ್ಲಿ ಕಬ್ಬಳಿಗೆರೆ ಬಳಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಹಾಗೂ ದೊಡ್ಡಮಗ್ಗೆ ಮೊರಾರ್ಜಿ ವಸತಿ ಶಾಲೆಗಳನ್ನು ನಿರ್ಮಿಸಿದ್ದರು.

‘ಕೊಣನೂರು ನಿಲಯದ ಕಟ್ಟಡ ಹಳೆಯದಾಗಿದ್ದು, ಹೊಸ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪಿ.ಎಚ್.ಲಿಂಗರಾಜ್ ತಿಳಿಸಿದರು.

‘ಹಿಂದುಳಿದ ವರ್ಗದ ಕೊಣನೂರು ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಸ್ವಲ್ಪ ಮಟ್ಟಿಗೆ ಕಡಿಮೆ ಇದೆ. ದೊಡ್ಡಮಗ್ಗೆ, ರುದ್ರಪಟ್ಟಣ ಹಾಗೂ ಗಂಗೂರು ನಿಲಯಗಳ ದುರಸ್ತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದು ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ಎಸ್.ಬಿ ಉಳ್ಳಾಗಡ್ಡಿ ತಿಳಿಸಿದರು.

ಅರಸೀಕೆರೆ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯ ಕೆಲವೊಂದುವಿದ್ಯಾರ್ಥಿ ನಿಲಯಗಳಲ್ಲಿ ಮೂಲಸೌಕರ್ಯ ಕೊರತೆ ಇದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕೆಲ ವಿದ್ಯಾರ್ಥಿ ನಿಲಯಗಳು ಶಿಥಿಲಾವಸ್ಥೆಯಲ್ಲಿವೆ, ಕೆಲವೊಂದು ಹಾಸ್ಟೆಲ್ ಗಳಿಗೆ ಕಾಂಪೌಂಡ್ ಇಲ್ಲ. ಜೇನುಕಲ್ಲು ಬಡಾವಣೆಯ ಬಿಸಿಎಂ ಹಾಸ್ಟೆಲ್ ನಲ್ಲಿ182 ವಿದ್ಯಾರ್ಥಿಗಳಿದ್ದು, ಶೌಚಾಲಯ ವ್ಯವಸ್ಥೆ ಸಮರ್ಪಕವಾಗಿಲ್ಲ.

‘ಶಿಥಿಲಗೊಂಡಿರುವ ಹಾಸ್ಟೆಲ್ ಕಟ್ಟಡಗಳಿಗೆ ಪರ್ಯಾಯವಾಗಿ ನೂತನ ಕಟ್ಟಡಗಳ ಅವಶ್ಯಕತೆ ಇದೆ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ನಾರಾಯಣಪ್ಪ ಹೇಳಿದರು.

ಹೊಳೆನರಸೀಪುರ ತಾಲ್ಲೂಕಿನಲ್ಲಿಹಿಂದುಳಿದ ವರ್ಗ ಹಾಗೂ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ಗಳು ಭರ್ತಿಯಾಗಿವೆ.120 ವಿದ್ಯಾರ್ಥಿಗಳಿಗೆ 10 ಕಂಪ್ಯೂಟರ್ ಮಾತ್ರ ಇದೆ. ಗ್ರಂಥಾಲಯದಲ್ಲಿಪುಸ್ತಕಕೊರತೆ. ಹಲವು ಹಾಸ್ಟೆಲ್‌ಗಳಿಗೆಮೂಲಸೌಲಭ್ಯ ಕಲ್ಪಿಸಲಾಗಿದೆ.

ಪ್ರಜಾವಾಣಿ ತಂಡ: ಕೆ.ಎಸ್‌.ಸುನಿಲ್‌, ಜೆ.ಎಸ್‌.ಮಹೇಶ್‌, ಜಿ.ಚಂದ್ರಶೇಖರ್, ಸಿದ್ದರಾಜು, ಜಾನೇಕೆರೆ ಪರಮೇಶ್‌, ಹರೀಶ್‌, ರಂಗನಾಥ್, ಸುರೇಶ್ ಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT