ಬುಧವಾರ, ನವೆಂಬರ್ 13, 2019
21 °C
ತನಿಖೆಗೆ ಪೋಷಕರ ಒತ್ತಾಯ

ಹೋಟೆಲ್‌ ಹಿಂಭಾಗ ಯುವತಿಯ ಶವ ಪತ್ತೆ: ಇಬ್ಬರ ಬಂಧನ

Published:
Updated:
Prajavani

ಹಾಸನ: ನಗರದ ಸರಾಯು ಹೋಟೆಲ್‌ನಲ್ಲಿ ತಂಗಿದ್ದ ಯುವತಿಯೊಬ್ಬಳು ರಾತ್ರೋರಾತ್ರಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾಳೆ.

ಅರಕಲಗೂಡು ತಾಲ್ಲೂಕು ಸಂತೆಮರೂರು ಗ್ರಾಮದ ಭವಿತಾ(23) ಮೃತ ಯುವತಿ. ಮಗಳ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದು, ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

ಈಗಾಗಲೇ ಪವರ್ ಮತ್ತು ಪುನೀತ್‌ನನ್ನು ವಶಕ್ಕೆ ಪಡೆದಿರುವ ಬಡಾವಣೆ ಪೊಲೀಸರು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಪ್ರೀತಿಸಿದ ಹುಡುಗನನ್ನ ಮದುವೆಯಾಗುವ ಸಲುವಾಗಿ ಹೆತ್ತವರಿಂದ ದೂರವಾದ ಭವಿತಾ, 3–4 ವರ್ಷಗಳಿಂದ ಹಾಸನ, ಮೈಸೂರು, ಬೆಂಗಳೂರು ಸೇರಿದಂತೆ ಅನೇಕ ಕಡೆ ಸುತ್ತಾಡುತ್ತಿದ್ದಳು. ಹಾಸನದ ನಂದಿತ್ ನನ್ನು ಪ್ರೀತಿಸುತ್ತಿದ್ದಳು. ಹುಡುಗ ಅನ್ಯ ಜಾತಿ ಎಂಬ ಕಾರಣಕ್ಕೆ ಪೋಷಕರು ಮದುವೆಗೆ ನಿರಾಕರಿಸಿದ್ದರು.

2014 ರಲ್ಲಿ ಪ್ರೇಮ ಪ್ರಕರಣ ಅರಕಲಗೂಡು ಪೊಲೀಸ್ ಠಾಣೆ ಮೆಟ್ಟಿಲೇರಿತು. ಮದುವೆಯಾಗುವುದಾಗಿ ಇಬ್ಬರು ಮುಚ್ಚಳಿಕೆ ಬರೆದು ಕೊಟ್ಟರು. ಆಗಿನಿಂದ ಯುವತಿಗೆ ಪೋಷಕರಿಗೆ ಸಂಪರ್ಕ ಇರಲಿಲ್ಲ.

ಅ. 7 ರಿಂದ ನಗರದ ಬಿ.ಎಂ ರಸ್ತೆಯಲ್ಲಿರುವ ಸರಾಯು ಹೋಟೆಲ್ ನ ರೂಂ. ನಂ 207 ರಲ್ಲಿ ಉಳಿದು ಕೊಂಡಿದ್ದಳು. ಶನಿವಾರ ರಾತ್ರಿ ತನ್ನ ಸ್ನೇಹಿತ ಪವನ್ ಹಾಗೂ ಮತ್ತೊಬ್ಬ ಯುವತಿಯೊಂದಿಗೆ ಹೋಟೆಲ್ ರೂಂ.ನಲ್ಲಿದ್ದಳು. ಆದರೆ, ಬೆಳಗ್ಗೆ ಹೋಟೆಲ್ ಹಿಂಭಾಗ ಮೃತದೇಹ ಪತ್ತೆಯಾಗಿದೆ.

‘ಪುನೀತ್ ಫೋನ್ ಕರೆಗಳನ್ನು ಭವಿತಾ ಸ್ವೀಕರಿಸಿರಲಿಲ್ಲ. ರಾತ್ರಿ ಹೋಟೆಲ್ ರೂಮಿಗೆ ಬಂದು ಆಕೆ ಜೊತೆ ಜಗಳವಾಡಿ, ಕೈ ಮಾಡಿದ್ದಾನೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಆಕಸ್ಮಿಕವಾಗಿ ಆಯತಪ್ಪಿ ಬಿದ್ದು ಮೃತಪಟ್ಟಿರಬಹುದು’ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)