ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸಿನಕೆರೆ ಸ್ವಚ್ಛತಾ ಕಾರ್ಯ ಶುರು

ಕೆರೆಗಳು ಸಮಾಜದ ನೈಜ ಸಂಪತ್ತು: ಡಿಸಿ ಅಕ್ರಂ ಪಾಷ
Last Updated 1 ಆಗಸ್ಟ್ 2019, 13:48 IST
ಅಕ್ಷರ ಗಾತ್ರ

ಹಾಸನ: ಕೆರೆಗಳು ಸಮಾಜದ ಸಮೃದ್ಧಿಯ ಸಂಕೇತ ಮತ್ತು ನೈಜ ಸಂಪತ್ತಾಗಿವೆ. ಅವುಗಳ ಸಂರಕ್ಷಣೆ ಎಲ್ಲಾ ಸಮುದಾಯದ ಜವಾಬ್ದಾರಿ ಆಗಿದೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ತಿಳಿಸಿದರು.

ನಗರದ ಹುಣಸಿನಕೆರೆ ಬಳಿ ಇರುವ ಅಬ್ದುಲ್ ಕಲಾಂ ರಸ್ತೆಯ ಉದ್ಯಾನದಲ್ಲಿ ಹಸಿರು ಭೂಮಿ ಪ್ರತಿಷ್ಠಾನ ಹಾಗೂ ಹುಣಸಿನಕೆರೆ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಹುಣಸಿನಕೆರೆ ಸ್ವಚ್ಛತೆಗೆ ಚಾಲನಾ ಕಾರ್ಯಕ್ರಮದಲ್ಲಿ ಮಾತನಾಡಿದರು.‌‌

‘ಕೆರೆ ದುಸ್ಥಿತಿಗೆ ನಾಗರೀಕರೆ ಕಾರಣಕರ್ತರು. ಕೆರೆ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ. ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯದಿಂದ ಕೆರೆ ಮಲಿನಗೊಂಡಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಈಗಲಾದರೂ ಕೆರೆಗಳನ್ನು ಸಂರಕ್ಷಿಸುವ ಕೆಲಸ ಮಾಡದಿದ್ದರೆ ಮುಂದೆ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ಹುಣಸಿನಕೆರೆ ಸುತ್ತಮುತ್ತ ಪ್ರವಾಸಿ ಕೇಂದ್ರ ಮಾಡಲಾಗುವುದು. ಅಲ್ಲದೇ ಬೆಳಿಗ್ಗೆ ಹಾಗೂ ಸಂಜೆ ಸಮಯದಲ್ಲಿ ವಾಕಿಂಗ್ ಮಾಡಲು ಉದ್ಯಾನ ನಿರ್ಮಿಸಲಾಗುವುದು. ಭದ್ರತಾ ದೃಷ್ಠಿಯಿಂದ ಕೆರೆಯ ಸುತ್ತ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು ಎಂದು ಪಾಷಾ ಹೇಳಿದರು.

ಉವಿಭಾಗಾಧಿಕಾರಿ ಎಚ್.ಎಲ್. ನಾಗರಾಜ್ ಮಾತನಾಡಿ, ಕೆರೆ ಸ್ವಚ್ಛತೆಗೆ ಸಾಂಕೇತಿಕವಾಗಿ ಚಾಲನೆ ನೀಡಲಾಗಿದೆ. ಕೆರೆ ಸುತ್ತಮುತ್ತ ಗಿಡ ನೆಟ್ಟು ಪೋಷಣೆ ಮಾಡುವ ಕೆಲಸ ಆಗಬೇಕು. ಪಾರ್ಕ್ ಒಳಗೆ ಜಾನುವಾರುಗಳು ಬರದಂತೆ ನಿಗಾವಹಿಸಬೇಕು ಎಂದರು.

‘ಕೆರೆ ಅಭಿವೃದ್ಧಿಗೆ ಒಳ್ಳೆಯ ಸಂಕಲ್ಪ ಮಾಡಬೇಕು. ಕೆಲಸ ಮಾಡುವಾಗ ನಮ್ಮದು ಎಂದು ಭಾವನೆ ಬಾರದಿದ್ದರೆ ಸಮಾಜ ಉಳಿಯುವುದಿಲ್ಲ. ಇದನ್ನು ಅರಿತುಕೊಂಡು ಮುಂದೆ ಸಾಗಿದರೆ ಯಶಸ್ವಿಯಾಗಬಹುದು’ ಎಂದು ಸಲಹೆ ನೀಡಿದರು.

ಮೊದಲ ಹಂತದಲ್ಲಿ ಕೆರೆ ಹೂಳು ತೆಗೆದು, ಗಿಡಗಂಟಿ ಕತ್ತರಿಸಲಾಗುವುದು. ಯೋಜನೆಗಾಗಿ ₹ 25 ಲಕ್ಷ ವೆಚ್ಚ ಮಾಡಲಾಗುತ್ತಿದೆ. ಕೆರೆ ಅಭಿವೃದ್ಧಿಗಾಗಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ₹ 2 ಕೋಟಿ ಅನುದಾನ ಮೀಸಲಿದೆ.

ನಗರಸಭೆ ಆಯುಕ್ತ ಪರಮೇಶ್, ಹುಡಾ ಆಯುಕ್ತ ರಮೇಶ್, ಹಸಿರು ಭೂಮಿ ಪ್ರತಿಷ್ಠಾನದ ಪ್ರಮುಖರಾದ ವೈ.ಎನ್. ಸುಬ್ಬಸ್ವಾಮಿ, ಹುಣಸಿನಕೆರೆ ಸಂರಕ್ಷಣಾ ಸಮಿತಿ ಮುಖ್ಯ ಸಂಚಾಲಕ ಮುಜಾಹಿದ್‍ ಪಾಷ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹರೀಶ್, ರುಹೀನ್ ತಾಜ್, ರಫೀಕ್, ಅಮೀರ್ ಜಾನ್, ಮಂಗಳಾ ಪ್ರದೀಪ್, ಎಸ್.ಎಸ್.ಪಾಷಾ, ವಲಯ ಅರಣ್ಯಾಧಿಕಾರಿ ಜಗದೀಶ್, ಡಾ. ಅಬ್ದುಲ್ ಬಶೀರ್, ಡಾ. ಸಾವಿತ್ರಿ, ರಾಜೀವೇಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT