ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೈತರ ಕೈಕಾಲು ಹಿಡಿದು ಯೋಜನೆ ಪೂರ್ಣ’

ನುಗ್ಗೇಹಳ್ಳಿ ಏತನೀರಾವರಿ ಯೋಜನೆ ಬಗ್ಗೆ ಶಾಸಕ ಬಾಲಕೃಷ್ಣ ಹೇಳಿಕೆ
Last Updated 30 ಅಕ್ಟೋಬರ್ 2020, 10:47 IST
ಅಕ್ಷರ ಗಾತ್ರ

ನುಗ್ಗೇಹಳ್ಳಿ: ‘ರೈತರ ಕೈಕಾಲು ಹಿಡಿದು ನುಗ್ಗೇಹಳ್ಳಿ ಏತನೀರಾವರಿ ಯೋಜನೆ ಪೂರ್ಣಗೊಳಿಸಿ ಈ ಭಾಗದ ಕೆರೆಗಳನ್ನು ತುಂಬಿಸಲಾಗಿದೆ’ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.

ನುಗ್ಗೇಹಳ್ಳಿ ಹೋಬಳಿ ರೈತಬಾಂಧವರು ಹಾಗೂ ಹೋಬಳಿ ಜೆಡಿಎಸ್ ಘಟಕದಿಂದ ಇಲ್ಲಿನ ಎಪಿಎಂಸಿ ಆವರಣದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ‘ಭಗೀರಥ ಸುತ’ ಎಂಬ ಬಿರುದು ಸ್ವೀಕರಿಸಿ ಅವರು ಮಾತನಾಡಿದರು.

‘ನುಗ್ಗೇಹಳ್ಳಿ ಏತನೀರಾವರಿ ಯೋಜನೆಗೆ ಆರಂಭದಲ್ಲಿ ದಡ್ಡೀಹಳ್ಳಿ, ದ್ಯಾವೇನಹಳ್ಳಿಯ ಕೆಲ ರೈತರು ಭೂಮಿ ನೀಡಲು ತೀವ್ರ ವಿರೋಧ ವ್ಯಕ್ತಪಡಿಸಿದರೂ ನಾನು ಶಾಸಕ ಎಂಬುದನ್ನು ಮರೆತು ಆ ರೈತರುಗಳ ಕೈಕಾಲು ಹಿಡಿದು ಒಪ್ಪಿಸಿದೆ. ಇನ್ನೂ ಕೆಲ ರೈತರಿಗೆ ನನ್ನ ಖಾಲಿ ಚೆಕ್ ನೀಡಿ ಪರಿಹಾರ ಕೊಡಿಸಿದ ನಂತರ ಚೆಕ್ ವಾಪಸ್ ಪಡದೆ’ ಎಂದು ಹೇಳಿದರು.

‘ಈ ಭಾಗದ ಕೆರೆಗಳನ್ನು ತುಂಬಿಸಲು ಮಾಜಿ ಸಚಿವರಾದ ದಿವಂಗತ ಎಚ್.ಎಸ್.ಶ್ರೀಕಂಠಯ್ಯ, ದಿ. ಎಚ್.ಎಂ.ಮಲ್ಲೇಗೌಡ, ದಿ. ಎನ್.ಎನ್. ಪುಟ್ಟಸ್ವಾಮಿಗೌಡ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ನಾಯಕರ ಪರಿಶ್ರಮವಿದೆ ಅದನ್ನು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯ’ ಎಂದು ಶಾಸಕ ಹೇಳಿದರು.

‘ಈ ಯೋಜನೆ ಪೂರ್ಣಗೊಳಿಸುವಲ್ಲಿ ಅನೇಕ ಕಷ್ಟಗಳನ್ನು ಅನುಭವಿಸಿದ್ದೇನೆ ಕೊನೆಗೂ ಈ ಭಾಗದ ರೈತರ ಆಸೆಯಂತೆ 44 ವರ್ಷಗಳ ನಂತರ ಹಿರೇಕೆರೆ ತುಂಬಿಸಿ ಜನರಲ್ಲಿ ಖುಷಿ ತರಿಸಿದೆ. ನಾನು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇನೆ’ ಎಂದರು.

‘ಕೆಲವರು ಈ ಯೋಜನೆಯ ಸಂಪೂರ್ಣ ಯಶಸ್ಸು ಕೇವಲ ಬಾಲಕೃಷ್ಣ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಆದರೆ, ನಾನು ಎಂದಿಗೂ ನಾನು ಒಬ್ಬನೇ ಮಾಡಿದ ಕೆಲಸ ಎಂದು ಹೇಳಿಕೊಳ್ಳಲಾರೆ, ಸುಳ್ಳು ಹೇಳಿಕೊಂಡು ರಾಜಕಾರಣ ಮಾಡಿಲ್ಲ’ ಎಂದು ಸ್ಪಷ್ಟಪಡಿಸಿದರು.

ಸಾನ್ನಿಧ್ಯ ವಹಿಸಿದ್ದ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಈ ಭಾಗದ ಜನರ ಒತ್ತಾಸೆಯಂತೆ ಶಾಸಕರು ಗಮನವಹಿಸಿ ಈ ಕಾಮಗಾರಿಯನ್ನು ಪೂರ್ಣಗೊಳಿಸಿ ಯಶಸ್ವಿಯಾಗಿದ್ದಾರೆ’ ಎಂದರು.

ಸಮಾರಂಭದಲ್ಲಿ ಜಿ.ಪಂ. ಮಾಜಿ ಸದಸ್ಯೆ ಕುಸುಮಾ ಬಾಲಕೃಷ್ಣ, ಎಂ.ದಾಸಾಪುರ ಕ್ರೈಸ್ತ ಧರ್ಮಗುರು ಶಾಂತರಾಜು ಎ. ನುಗ್ಗೇಹಳ್ಳಿ, ಮುಸ್ಲಿಂ ಧರ್ಮಗುರು ಮೌಲಾನಾ ರಶೀದ್ ನದ್ವಿ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಪರಮದೇವರಾಜೇಗೌಡ, ಮುಖಂಡರಾದ ಎಚ್.ಎಂ.ನಟರಾಜು, ಕೆಂಪನಂಜೇಗೌಡ, ಬಿ.ಆರ್.ದೊರೆಸ್ವಾಮಿ, ತೋಟಿ ನಾಗರಾಜು, ಗುಂಡಣ್ಣ, ಎನ್.ಜಿ. ಕುಮಾರಸ್ವಾಮಿ, ಎನ್.ಎಸ್. ಮಂಜುನಾಥ್, ಎನ್.ಬಿ.ಬಸವಲಿಂಗಪ್ಪ, ಬಸವನಪುರ ಪ್ರಕಾಶ್, ಹೋಬಳಿ ಕಂದಾಯ ಅಧಿಕಾರಿ ಲೋಕೇಶ್, ಪಿಎಸ್‌ಐ ಪುಟ್ಟರಾಜಯ್ಯ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ– ಕುಸುಮಾ ದಂಪತಿಗೆ ಬೆಳ್ಳಿಗಧೆ, ಬೆಳ್ಳಿ ಕೊಳಲು ಹಾಗೂ ಬೆಳ್ಳಿ ತಟ್ಟೆ ನೀಡಿ ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT