ಸೋಮವಾರ, ಮೇ 16, 2022
21 °C

ಪಡಿತರ ವಿತರಣೆಯಲ್ಲಿ ಅಕ್ರಮ: ಹಮಾಲರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಳೆನರಸೀಪುರ: ಪಟ್ಟಣದ ಟಿಎಪಿಸಿಎಂಎಸ್ ಗೋದಾಮಿನಲ್ಲಿ ಅಕ್ರಮ ನಡೆಯುತ್ತಿದ್ದು ಇದನ್ನು ಪ್ರಶ್ನಿಸಿದರೆ ನಮ್ಮನ್ನೇ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎಂದು ದೂರಿದ ಹಮಾಲರು ಸೋಮವಾರ ಪ್ರತಿಭಟನೆ ನಡೆಸಿದರು.

ವ್ಯವಸ್ಥಾಪಕ ಕೃಷ್ಣಪ್ಪ ಅಕ್ರಮ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಪಡಿತರ ವಿತರಣೆ ಲಾರಿಯ ಹಮಾಲ ಶಿವಶಂಕರ ದೂರಿದರು. ಇದನ್ನು ಪ್ರಶ್ನಿಸಿದ ನಮ್ಮನ್ನು ನಿಂದಿಸಿದ್ದಾರೆ ಎಂದು ಹಮಾಲರು ಆಕ್ರೋಶ ವ್ಯಕ್ತಪಡಿಸಿದರು.

‘ತಾಲ್ಲೂಕಿನಲ್ಲಿ 118 ನ್ಯಾಯಬೆಲೆ ಅಂಗಡಿಗಳಿವೆ. ಈ ಅಂಗಡಿಗಳಿಗೆ ಪಡಿತರ ತುಂಬುವ ಸಂದರ್ಭದಲ್ಲಿ ಪ್ರತಿ ಅಂಗಡಿಗೆ ಅಕ್ಕಿ ಕಡಿಮೆ ಲೋಡ್ ಮಾಡಿಸುತ್ತಾರೆ. ಪ್ರತಿ ಅಂಗಡಿಯಿಂದ ₹ 700 ಪಡೆಯುತ್ತಾರೆ, ಇದರ ಬಗ್ಗೆ ಕೇಳಿದರೆ ಶಿರಸ್ತೇದಾರರಿಗೆ ₹ 200 ಮತ್ತು ಆಹಾರ ನಿರೀಕ್ಷಕರಿಗೆ ₹ 500 ಮಾಮೂಲಿ ಕೊಡಬೇಕು ಎಂದು ಗದರಿಸುತ್ತಾರೆ’ ಎಂದು ಹಮಾಲರು ದೂರಿದರು.

‘ಹಮಾಲರು ಇಲ್ಲದ ವೇಳೆ ರಾತ್ರಿ ಸಮಯದಲ್ಲಿ ಕಳ್ಳತನದಲ್ಲಿ ಪಡಿತರ ಕಳ್ಳಸಾಗಣೆ ಮಾಡುತ್ತಾರೆ. ಅದು ಗೊತ್ತಾಗಿ ನಾವು ಪ್ರಶ್ನಿಸಿದಕ್ಕೆ ನಮಗೆಲ್ಲಾ ಬೈದಿದ್ದಾರೆ ಎಂದು ದೂರಿದ ಹಮಾಲರು, ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿದರೆ ಅವ್ಯವಹಾರ ಬೆಳಿಕಿಗೆ ಬರಲಿದೆ. ತನಿಖೆ ನಡೆಸಿ’ ಎಂದು ಸ್ಥಳಕ್ಕೆ ಆಗಮಿಸಿದ್ದ ಆಹಾರ ಇಲಾಖೆ ಅಧಿಕಾರಿಗಳಲ್ಲಿ ವಿನಂತಿಸಿದರು.

ಹಮಾಲರಾದ ನವೀನ್, ಯೋಗೇಶ್, ರಾಜಣ್ಣ, ಚಂದ್ರಪ್ಪ, ಪುರುಷೋತ್ತಮ್, ರಮೇಶ್, ವಸಂತ, ವಿಜಯ, ಸೋಮ, ಅರವಿಂದ, ನಾಗಣ್ಣ, ಶ್ರೀನಿವಾಸ, ಪ್ರಕಾಶ ಹಾಜರಿದ್ದರು.

‘ನಾವು ನ್ಯಾಯಬೆಲೆ ಅಂಗಡಿಗೆ ಕಳುಹಿಸಿದ್ದ ಅಕ್ಕಿಯಲ್ಲಿ ಹಮಾಲರು ಎರಡು ಚೀಲ ಅಕ್ಕಿಯನ್ನು ವಾಪಸ್ ತಂದಿದ್ದರು. ಇದು ಯಾವ ನ್ಯಾಯಬೆಲೆ ಅಂಗಡಿಗೆ ಕೊಡಬೇಕಾಗಿತ್ತೋ ಅಲ್ಲಿಗೆ ಗುತ್ತಿಗೆದಾರರು ನೀಡಿದರು. ಈ ಕಾರಣದಿಂದ ಹಮಾಲರಿಗೆ ಎಚ್ಚರಿಸಿ ದಂಡ ವಿಧಿಸಿ ಪ್ರಕರಣ ಮುಕ್ತಾಯಗೊಳಿಸಿದ್ದೆ. ಈ ಕಾರಣದಿಂದ ಹಮಾಲರು ನನ್ನ ಮೇಲೆ ದೂರುತ್ತಿದ್ದಾರೆ’ ಎಂದು ವ್ಯವಸ್ಥಾಪಕ ಕೃಷ್ಣಪ್ಪ ಹೇಳಿದರು.

ವಿಷಯ ತಿಳಿದು ಸ್ಥಳಕ್ಕೆ ಬಂದ ಪಡಿತರ ವಿಭಾಗದ ಶಿರಸ್ತೇದಾರ್ ರಾಮಚಂದ್ರ ಮಾತನಾಡಿ, ‘ಪಡಿತರ ವಿತರಣೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಹಮಾಲರು ದೂರಿದ್ದು ತನಿಖೆಗೆ ಆಗ್ರಹಿಸಿದ್ದಾರೆ. ಈ ಬಗ್ಗೆ ಆಹಾರ ಇಲಾಖೆಯ ಡಿಡಿ ಅವರಿಗೂ ವಿಷಯ ತಿಳಿಸಿದ್ದಾರೆ. ಹಿರಿಯ ಅಧಿಕಾರಿಗಳ ಅನುಮತಿ ಪಡೆದು ತನಿಖೆ ನಡೆಸುತ್ತೇವೆ. ಅಕ್ರಮ ಕಂಡು ಬಂದಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ತಿಳಿಸಿದ್ದಾರೆ.

ಆಹಾರ ನಿರೀಕ್ಷಕಿ ವೀಣಾ, ಶಿರಸ್ತೇದಾರ್ ಲೋಕೇಶ್, ಸಹಾಯಕ ಪ್ರಸಾದ್ ಇದ್ದರು.

‘ವಿಷಯ ತಿಳಿದು ನಾವು ಟಿ.ಎ.ಪಿ.ಸಿ.ಎಂ.ಎಸ್ ಗೋದಾಮಿಗೆ ಪರಿಶೀಲನೆಗೆ ತೆರಳಿದಾಗ ಹಮಾಲರು ನಮಗೆ ಪರಿಶೀಲನೆ ಮಾಡಲು ಅವಕಾಶ ನೀಡಲಿಲ್ಲ’ ಎಂದು ಆಹಾರ ಇಲಾಖೆ ನಿರೀಕ್ಷಕಿ ವೀಣಾ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು