ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಲೇಶಪುರ: ಕಳ್ಳತನ ತಡೆಗೆ ಹೊಸನ ವಿಧಾನ ಜಾರಿ

Published 3 ಜೂನ್ 2023, 13:28 IST
Last Updated 3 ಜೂನ್ 2023, 13:28 IST
ಅಕ್ಷರ ಗಾತ್ರ

ಸಕಲೇಶಪುರ: ‘ಮನೆಗೆ ಬೀಗ ಹಾಕಿ ವಾರಗಟ್ಟಲೆ ಪರ ಊರುಗಳಿಗೆ ಹೋಗುವವರ ಮನೆಗಳಲ್ಲಿ ಕಳ್ಳತನ ತಡೆಯಲು ಪೊಲೀಸ್‌ ಇಲಾಖೆ ಹಾಗೂ ಸೈನ್‌ ಇನ್‌ ಸೆಕ್ಯೂರಿಟಿ ಸಹಯೋಗದೊಂದಿಗೆ ಸಿಸಿ ಕ್ಯಾಮರಾ ಅಳವಡಿಸುವ ವ್ಯವಸ್ಥೆ ತಾಲ್ಲೂಕಿನಲ್ಲಿ ಇದೆ’ ಎಂದು ಇಲ್ಲಿನ ಎಎಸ್ಪಿ ಎಚ್‌.ಎನ್‌. ಮಿಥುನ್‌ ಹೇಳಿದರು.

ಪಟ್ಟಣದಲ್ಲಿ ಪೊಲೀಸ್‌ ಇಲಾಖೆ ಹಾಗೂ ಸೈನ್‌ ಇನ್‌ ಸೆಕ್ಯೂರಿಟಿಯಿಂದ ನಾಗರೀಕರು, ಮಂದಿರ, ಮಸೀದಿ, ಚರ್ಚ್‌ ಹಾಗೂ ವರ್ತಕರ ಆಸ್ತಿಪಾಸ್ತಿ ರಕ್ಷಣೆ ಹಾಗೂ ಕಾನೂನು ಸುವ್ಯವಸ್ಥೆ ಸಂಬಂಧ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದರು.

‘ಹಲವು ಸಂದರ್ಭಗಳಲ್ಲಿ ಮನೆಗೆ ಬೀಗ ಹಾಕಿ ಹೋಗಲೇಬೇಕಾದ ಅನಿವಾರ್ಯತೆ ಎಲ್ಲಾ ಕುಟುಂಬಗಳಿಗೂ ಒಂದಲ್ಲಾ ಒಂದು ಸಂದರ್ಭದಲ್ಲಿ ಬಂದೇ ಬರುತ್ತದೆ. ಅಂತಹ ಸಂದರ್ಭಗಳಲ್ಲಿ ಕಳ್ಳತನ ಭಯ ಇಲ್ಲದಂತೆ ಹೋಗಲು ಸೈನ್‌ ಇನ್‌ ಸೆಕ್ಯೂರಿಟಿ ಸಹಾಯ ಪಡೆಯಬಹುದು. ಈ ಸಂಸ್ಥೆಗೆ ಮಾಹಿತಿ ನೀಡಿದರೆ, ತಕ್ಷಣವೇ ನಿಮ್ಮ ಮನೆಗೆ ಸಿಸಿ ಕ್ಯಾಮರಾಗಳನ್ನು ಅಳವಡಿಸುತ್ತಾರೆ. ಈ ಸಂಸ್ಥೆಯ ಸಿಸಿ ಟಿವಿ ಕಂಟ್ರೋಲ್‌ ಹಾಸನದಲ್ಲಿ ಇದೆ. ಕಳ್ಳತನ ಮಾಡಲು ಬಂದವರು ಕ್ಯಾಮರಾ ಕೇಬಲ್‌ ಕತ್ತರಿಸಿದರೆ, ಮನೆಗೆ ನುಗ್ಗಿ ಬೀಗ ಒಡೆಯಲು ಯತ್ನಿಸಿದರೆ, ಕಂಟ್ರೋಲ್‌ ರೂಂನಲ್ಲಿ 24X7 ಕಣ್ಗಾವಲಿನಲ್ಲಿ ಇರುವ ಸಿಬ್ಬಂದಿ ತಕ್ಷಣ ಸಮೀಪದ ಪೊಲೀಸ್‌ ಠಾಣೆಗೆ ಹಾಗೂ ಅಕ್ಕ ‍ಪಕ್ಕದವರಿಗೆ ಮಾಹಿತಿ ನೀಡುತ್ತಾರೆ. ಇದರಿಂದ ಕಳ್ಳತನ ನಡೆಯದಂತೆ ತಡೆಗಟ್ಟಲು ಸಾಧ್ಯವಾಗುತ್ತದೆ’ ಎಂದರು.

‘ಮಂದಿರ, ಮಸೀದಿ, ಚರ್ಚ್‌ಗಳಲ್ಲಿಯೂ ಸಂಸ್ಥೆ ಸಿಸಿ ಕ್ಯಾಮರಾಗಳನ್ನು ಅಳವಡಿಸಿಕೊಳ್ಳುವುದರಿಂದ ಕಳ್ಳತನ, ಕೋಮು ಸೌಹಾರ್ದತೆ ಕದಡುವ ಯತ್ನಗಳ ವಿರುದ್ಧ ತ್ವರಿತವಾಗಿ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ. ರಾಜ್ಯದ ಕುಂದಾಪುರ ಹಾಗೂ ಹಲವೆಡೆ ಇದೇ ಸಂಸ್ಥೆಯವರು ಸೇಫ್‌ ಕುಂದಾಪುರ ಅಡಿಯಲ್ಲಿ ಈ ಸೇವೆ ನೀಡುತ್ತಿದ್ದಾರೆ. ಇದರಿಂದ ದೇವಸ್ಥಾನ ಹಾಗೂ ಮನೆಗಳಿಗೆ ನುಗ್ಗಿ ಕಳ್ಳತನ ಮಾಡಲು ಯತ್ನಿಸುವವರು ಸಿಕ್ಕಿ ಬಿದ್ದಿದ್ದಾರೆ. ಕಳ್ಳತನ ನಡೆದ ನಂತರ ಸ್ಥಳಕ್ಕೆ ಹೋಗುವ ಬದಲು, ಕಳ್ಳತನಕ್ಕೆ ಯತ್ನಿಸುತ್ತಿದ್ದಾಗಲೇ ಕ್ರಮ ಕೈಗೊಳ್ಳುವುದಕ್ಕಾಗಿ ಈ ವ್ಯವಸ್ಥೆ ಮಾಡಲಾಗಿದೆ. ಸಂಸ್ಥೆ ಈಗಾಗಲೆ ತಾಲ್ಲೂಕಿನಲ್ಲಿ ಮರಳು ದಾಸ್ತಾನು ಕೇಂದ್ರಗಳಲ್ಲಿ ಈ ವ್ಯವಸ್ಥೆ ಮಾಡಿದೆ’ ಎಂದರು.

ಪೊಲೀಸ್‌ ಇನ್‌ಸ್ಪೆಕ್ಟರ್‌ ಚೈತನ್ಯ, ಪಟ್ಟಣ ಪಿಎಸ್‌ಐ ಸುನಿಲ್‌, ಸೈನ್‌ ಇನ್‌ ಸೆಕ್ಯೂರಿಟಿ ಸಂಸ್ಥೆಯ ಪ್ರತಿನಿಧಿ ರಕ್ಷಿತ್‌, ತಾಲ್ಲೂಕು ವರ್ತಕರ ಸಂಘದ ಪದಾಧಿಕಾರಿಗಳು, ದೇವಸ್ಥಾನ, ಚರ್ಚ್‌, ಮಸೀದಿ ಆಡಳಿತ ಮಂಡಳಿ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT