ಹಾಸನ: ‘ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ಅವರ ಸ್ನೇಹಿತರು ಎಷ್ಟು ಬೇನಾಮಿ ಆಸ್ತಿ ಮಾಡಿದ್ದಾರೆ? ಯಾವ್ಯಾವ ಶಾಸಕರು ಏನೇನು ಮಾಡಿದ್ದಾರೆ ಎಂಬುದನ್ನು ಇನ್ನೆರಡು ದಿನಗಳಲ್ಲಿ ಪೂರ್ಣಪ್ರಮಾಣದಲ್ಲಿ ಹೇಳುತ್ತೇನೆ’ ಎಂದು ಶಾಸಕ, ಸೆಸ್ಕ್ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ಅವರ ಕುಟುಂಬದ ಎಷ್ಟು ಬೇನಾಮಿ ಆಸ್ತಿಗಳಿವೆ? ಯಾರು ಎಷ್ಟು ನಿವೇಶನ ಪಡೆದಿದ್ದಾರೆ ಎಂಬ ಮಾಹಿತಿಯನ್ನು ಕಲೆ ಹಾಕುತ್ತಿದ್ದೇವೆ’ ಎಂದರು.
‘ಮುಡಾ ಹಗರಣದಲ್ಲಿ, ಸತ್ತವರ ಹೆಸರಿನಲ್ಲಿ ಡಿನೋಟಿಫಿಕೇಷನ್ ಮಾಡಿದ್ದಾರೆ’ ಎಂಬ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಯಾರ‍್ಯಾರ ಹೆಸರಿನಲ್ಲಿ ಡಿನೋಟಿಫಿಕೇಷನ್ ಆಗಿದೆ. ಯಾರು ಬೇನಾಮಿ ಆಸ್ತಿ ಮಾಡಿದ್ದಾರೆ ಎಂಬುದರ ಬಗ್ಗೆ ನನ್ನ ಕಾರಿನಲ್ಲಿ ದಾಖಲೆಗಳಿವೆ. ಸುಮ್ಮನೆ ವೈಯಕ್ತಿಕ ದ್ವೇಷ ಮಾಡಬಾರದು ಎಂದು ಸುಮ್ಮನಿದ್ದೇವೆ’ ಎಂದರು.
‘ಬಿಜೆಪಿ- ಜೆಡಿಎಸ್‌ನವರು ಸರ್ಕಾರದ ಮೇಲೆ ಗದಾ ಪ್ರಹಾರ ಮಾಡುತ್ತಿದ್ದು, ರಾಷ್ಟ್ರಪತಿಗೆ ಮನದಟ್ಟು ಮಾಡಿಕೊಡೋಣ ಎಂದು ಹೈಕಮಾಂಡ್‌ಗೆ ತಿಳಿಸಿದ್ದೇವೆ. ಆದಷ್ಟು ಬೇಗ ರಾಷ್ಟ್ರಪತಿಯನ್ನು ಎಲ್ಲ ಶಾಸಕರು ಭೇಟಿ ಮಾಡುತ್ತೇವೆ’ ಎಂದರು.
‘ಡಿ.ಕೆ. ಶಿವಕುಮಾರ್ ಅವರು ಎರಡು ಅಧಿಕಾರ ಹೊಂದಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಿಟ್ಟುಕೊಡುವುದಾಗಿ ಹೈಕಮಾಂಡ್‌ಗೆ ತಿಳಿಸಿದ್ದಾರೆ. ಅವರ ಸ್ಥಾನಕ್ಕೆ ಯಾರನ್ನು ನೇಮಿಸಬೇಕು? ಯಾರು ಪಕ್ಷವನ್ನು ಮುನ್ನಡೆಸಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನಿಸಲಿದೆ’ ಎಂದರು.