ಮಂಗಳವಾರ, ಫೆಬ್ರವರಿ 25, 2020
19 °C
ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಹೇಳಿಕೆ

ಬಾಹ್ಯಾಕಾಶ ತಂತ್ರಜ್ಞಾನದಿಂದ ಹಳ್ಳಿಗಳ ಅಭಿವೃದ್ಧಿ: ಕಿರಣ್ ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಳೇಬೀಡು: ‘ಬಾಹ್ಯಾಕಾಶ ಮಾಹಿತಿಯಿಂದ ನಮ್ಮ ದೇಶದ ಪಂಚಾಯಿತಿಗಳಲ್ಲಿ ಹಳ್ಳಿಗಳ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಪ್ಲ್ಯಾನಿಂಗ್‌ ನೀಡುವ ಕೆಲಸ ನಡೆಯುತ್ತಿದೆ’ ಎಂದು ಇಸ್ರೊ ಮಾಜಿ ಅಧ್ಯಕ್ಷ ಡಾ.ಎ.ಎಸ್‌.ಕಿರಣ್‌ಕುಮಾರ್‌ ಹೇಳಿದರು.

ಹಳೇಬೀಡಿನಲ್ಲಿ ಬುಧವಾರ ರಾತ್ರಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವ 5ನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸರ್‌ಪಂಚ್‌ಗಳು ಸರ್ಕಾರ ಗ್ರಾಮೀಣಾಭಿವೃದ್ಧಿ ಯೋಜನೆಗಳನ್ನು ನಿರ್ವಹಿಸಲು ಅನುಕೂಲವಾಗುತ್ತದೆ. ಭುವನ್‌ ಪ್ಲಾಟ್‌ ಫಾರಂನಿಂದ ಎಲ್ಲ ರಾಜ್ಯಗಳಿಗೂ ಬಾಹ್ಯಾಕಾಶ ಮುಖಾಂತರ ಯೋಜನೆಗಳನ್ನು ತಲುಪಿಸುವ ಕೆಲಸ ಪ್ರಗತಿಯಲ್ಲಿದೆ’ ಎಂದು ಹೇಳಿದರು.

‘ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. 7 ಉಪಗ್ರಹ ಸಹಾಯದಿಂದ ಭಾರತದಲ್ಲಿ ಮೊಬೈಲ್‌ ಜಿಪಿಎಸ್‌ ಕೆಲಸ ನಡೆಯುತ್ತಿದೆ. ಅಮೆರಿಕ, ರಷ್ಯಾ, ಚೀನಾಗಳಲ್ಲಿ 24ರಿಂದ 32 ಉಪಗ್ರಹ ಸಹಾಯದಿಂದ ಜಿಪಿಎಸ್‌ ನಿರ್ವಹಿಸಲಾಗುತ್ತಿದೆ. 1957ರಲ್ಲಿ ರಷ್ಯಾ ಪ್ರಥಮ ಬಾರಿಗೆ ಉಪಗ್ರಹ ಉಡಾವಣೆ ಮಾಡಿತ್ತು. ನಂತರ ಭಾರತದಲ್ಲಿಯೂ ಬಾಹ್ಯಾಕಾಶ ತಂತ್ರಜ್ಞಾನ ಅಭಿವೃದ್ಧಿ ಹೊಂದಲು ಆರಂಭವಾಯಿತು’ ಎಂದರು.

‘ವಿಕ್ರಂ ಸಾರಾಭಾಯಿ ಅಮೆರಿಕ, ಜರ್ಮನ್‌, ರಷ್ಯಾ ಸ್ನೇಹಿತರ ಸಹಾಯ ಪಡೆದು ಭಾರತದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಮುಂದಾದರು. ತಿರುವನಂತಪುರ ಸಮುದ್ರತೀರದಲ್ಲಿ ರಾಕೆಟ್‌ ಉಡಾವಣೆ ಮಾಡುವಾಗ ಕ್ರಿಶ್ಚಿಯನ್‌ಪಾದ್ರಿ ಸಹಾಯ ಪಡೆದು ಮೀನುಗಾರರು ಕೆಲದಿನ ತಮ್ಮ ಕೆಲಸ ನಿಲ್ಲಿಸುವಂತೆ ಒಪ್ಪಿಸಿ ಉಡಾವಣೆ ನಡೆಯಿತು. ಇದರಿಂದ ಇಂಧನ ಉಪಯೋಗಿಸಿ ಯಥೇಚ್ಛವಾಗಿ ಮೀನು ದೊರಕುವ ಜಾಗ ಪತ್ತೆ ಹಚ್ಚುವ ಕೆಲಸವನ್ನು ಬಾಹ್ಯಾಕಾಶ ಸಂಸ್ಥೆ ತಪ್ಪಿಸಿದೆ. ಹಿಮಾಲಯದಲ್ಲಿ ಹಿಮ ಕರಗಿ ನದಿಗಳಲ್ಲಿ ಪ್ರವಾಹವಾಗಲಿರುವ ಮಾಹಿತಿಯನ್ನು ಬಾಹ್ಯಾಕಾಶ ತಂತ್ರಜ್ಞಾನ ತಿಳಿಸುತ್ತದೆ. ಈ ಬೆಳವಣಿಗೆಯಿಂದ ಮುಂದೆ ಆಗಬಹುದುದಾದ ಪ್ರವಾಹ ಅವಘಡ ತಪ್ಪಿಸಬಹುದಾಗಿದೆ’ ಎಂದು ಕಿರಣ್‌ ಕುಮಾರ್ ವಿವರಿಸಿದರು.

ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌, ‘ಹುಟ್ಟುಸಾವಿನ ನಡುವೆ ಅಲ್ಪಮಾನವರಾಗಿದ್ದೇವೆ, ವಿಶ್ವಮಾನವರಾದಾಗ ಸಮಾಜ ಸ್ಥಿತಿಗತಿ ಸುಧಾರಿಸುತ್ತದೆ. ಜನರ ಬದುಕು ಬದಲಾಗಿರುವುದರಿಂದ ಕಾಯಿಲೆ ಹೆಚ್ಚಾಗುತ್ತಿದೆ. ಹೃದಯ ಒಂದು ಅದ್ಭುತ ಅಂಗ. 6000 ಲೀಟರ್‌ ರಕ್ತವನ್ನು ಹೃದಯ ತನಗೋಸ್ಕರ ಬೇರೆ ಅಂಗಗಳಿಗೆ ಕಳಿಸುತ್ತದೆ. ಹೃದಯ ಯಾವ ಸಂದರ್ಭದಲ್ಲಿಯೂ ನಿದ್ದೆ ಮಾಡುವುದಿಲ್ಲ. ಹೃದಯ ನಿದ್ರಿಸಿದರೆ ಆ ವ್ಯಕ್ತಿ ಇಹಲೋಕ ತ್ಯಜಿಸುತ್ತಾನೆ’ ಎಂದರು.

‘ಮೊಬೈಲ್‌ ಫೋನ್‌ ಬಳಕೆಯಿಂದ ಹಲವು ಕಾಯಿಲೆ ಸೃಷ್ಟಿಯಾಗುತ್ತಿದೆ. ಮೊಬೈಲ್‌ ಫೋನ್‌ ಮಾನವನ ಜೀವನವನ್ನೇ ಹಾಳು ಗೆಡುವುತ್ತಿದೆ. ಮೊಬೈಲ್‌ ಫೋನ್‌ನಿಂದ ಸಂಬಂಧ ಕಳೆದು ಹೋಗುತ್ತಿದೆ. ವ್ಯಾಯಾಮ ಇಲ್ಲದಂತಾಗಿದೆ. ಸಾಮಾಜಿಕ ಜಾಲ ತಾಣಗಳು ಸಮಾಜದ ಆರೋಗ್ಯವನ್ನು ಕೆಡಿಸುತ್ತಿದೆ. ಸಾಮಾಜಿಕ ಜಾಲ ತಾಣಗಳು ವಿವಾದಗಳನ್ನು ಸೃಷ್ಟಿಸುತ್ತಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ‘ಸಮಾಜದ ಹಿತ ಬಯಸುವ ದೃಷ್ಟಿಯಿಂದ ತರಳಬಾಳು ಹುಣ್ಣಿಮೆ ಮಹೋತ್ಸವ ನಡೆಸುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಸಂಸ್ಕಾರಯುಕ್ತ ಮಾಹಿತಿ ದೊರಕುತ್ತಿದೆ. ಹಿಂದಿನಿಂದ ನಂಬಿದ ಸಾಕಷ್ಟು ನಂಬಿಕೆಗಳು ವೈಜ್ಞಾನಿಕವಾಗಿವೆ’ ಎಂದರು.

ಹಾಸ್ಯಭಾಷಣಕಾರರಾದ ಇಂದುಮತಿ ಸಾಲಿಮಠ ಹಾಡು ಹಾಗೂ ಮಾತಿನೊಂದಿಗೆ ಸಭೆಯನ್ನು ನಗೆಗಡಲಲ್ಲಿ ತೇಲಿಸಿದರು.

ಸಿರಿಗೆರೆ ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಜಿಲ್ಲಾಧಿಕಾರಿ ಆರ್‌.ಗಿರೀಶ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಿವಾಸಗೌಡ, ಉಪ ವಿಭಾಗಾಧಿಕಾರಿ ಗಿರೀಶ್‌ ನಂದನ್‌ ಇದ್ದರು. ಹೆಬ್ಬಾಳು ಭುವನೇಶ್‌ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು