ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ | ಪೆನ್‌ಡ್ರೈವ್ ಹಂಚಿಕೆ: ಜೆಡಿಎಸ್ ನಾಯಕರ ಖಂಡನೆ

ನ್ಯಾಯಸಮ್ಮತ ತನಿಖೆ ನಡೆಸಿ, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹ
Published 2 ಮೇ 2024, 15:35 IST
Last Updated 2 ಮೇ 2024, 15:35 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯ ಹೆಣ್ಣು ಮಕ್ಕಳ ಮಾನಹಾನಿ ಆಗುವ ದೃಶ್ಯಾವಳಿಗಳನ್ನು ಸಾಮಾಜಿಕ ಜಾಲತಾಣ ಹಾಗೂ ಇತರೆಡೆಗಳಲ್ಲಿ ಹರಿ ಬಿಟ್ಟಿರುವುದನ್ನು ಜೆಡಿಎಸ್ ಜಿಲ್ಲಾ ಘಟಕದ ಖಂಡಿಸಿದೆ.

ನಗರದಲ್ಲಿ ಗುರುವಾರ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಲಿಂಗೇಶ್ ಅಧ್ಯಕ್ಷತೆಯಲ್ಲಿ ನಡೆದ ಹಾಲಿ ಹಾಗೂ ಮಾಜಿ ಶಾಸಕರು, ತಾಲ್ಲೂಕು ಘಟಕಗಳ ಅಧ್ಯಕ್ಷರು ಹಾಗೂ ಹಿರಿಯ ಮುಖಂಡರ ಸಭೆಯಲ್ಲಿ, ಹೆಣ್ಣು ಮಕ್ಕಳ ಮಾನಹಾನಿಗೆ ಬೆಲೆ ಕಟ್ಟಲಾಗುವುದಿಲ್ಲ. ಹೀಗಾಗಿ ಇಡೀ ಪ್ರಕರಣವನ್ನು ಆರಂಭದಿಂದ ಈವರೆಗೂ ಸಮಗ್ರ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಪೆನ್‌ಡ್ರೈವ್ ಹರಿದಾಡಲು ಮೂಲ ಕಾರಣ ಯಾರು? ಇದರ ಹಿಂದೆ ಯಾರೆಲ್ಲ ಇದ್ದಾರೆ? ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸಹಕಾರ ನೀಡಿರುವವರನ್ನು ಪಕ್ಷಾತೀತವಾಗಿ ಪತ್ತೆ ಹಚ್ಚಿ ದಂಡನೆಗೆ ಗುರಿ ಪಡಿಸಬೇಕು. ಈ ಬಗ್ಗೆ ಎಸ್‌ಐಟಿಯಿಂದ ನ್ಯಾಯಸಮ್ಮತ ತನಿಖೆ ನಡೆದು, ವರದಿ ಹೊರ ಬರಲು ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ಜಿಲ್ಲೆಯ ಅಭಿವೃದ್ಧಿ ಹರಿಕಾರರು, ಸರ್ವಾಂಗೀಣ ಪ್ರಗತಿಗೆ ತಮ್ಮದೇ ಶ್ರಮ ಹಾಕಿ, ಶಕ್ತಿ ತುಂಬಿರುವ ಎಚ್.ಡಿ. ರೇವಣ್ಣ ಅವರನ್ನು ಯಾರದೋ ಸುಳ್ಳು ಹೇಳಿಕೆ ಆಧರಿಸಿ, ಎ 1 ಆರೋಪಿ ಮಾಡಿರುವುದನ್ನೂ ಸಭೆಯಲ್ಲಿ ಖಂಡಿಸಲಾಯಿತು.

ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಮಹಿಳೆಯೊಬ್ಬರ ಮೇಲೆ ಒತ್ತಡ ಹಾಕಿ, ಅವರನ್ನು ಪ್ರಚೋದಿಸಿದವರು ಯಾರು? ಯಾರೆಲ್ಲಾ ಸಂಪರ್ಕ ಮಾಡಿದ್ದರು? ಪ್ರಕರಣ ದಾಖಲು ಮಾಡುವ ಮುನ್ನ ಯಾರೆಲ್ಲಾ ಚರ್ಚೆ ಮಾಡಿದ್ದಾರೆ ಎಂಬುದರ ಬಗ್ಗೆಯೂ ಸಮಗ್ರ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.

ರೇವಣ್ಣ ಅವರನ್ನು ಎ 1 ಆರೋಪಿ ಮಾಡಿರುವುದು ರಾಜಕೀಯ ದುರುದ್ದೇಶವೇ ಹೊರತೂ ಮತ್ತೇನು ಅಲ್ಲ. ಪ್ರಕರಣದಲ್ಲಿ ರೇವಣ್ಣ ಅವರನ್ನು ತಳುಕು ಹಾಕಿರುವುದನ್ನೂ ಖಂಡಿಸಿದರು. ಇದೇ ವೇಳೆ ಮಹಿಳೆಯರ ಕುಟುಂಬದವರೇ ರೇವಣ್ಣ ಅವರ ವಿರುದ್ಧ ಮಾಡಿರುವ ಆರೋಪ ಸುಳ್ಳು ಎಂದು ಬಹಿರಂಗವಾಗಿ ಹೇಳಿದ್ದಾರೆ. ಅಶ್ಲೀಲ ಚಿತ್ರಗಳನ್ನು ಪ್ರಸಾರ ಮಾಡಿದ್ದು ಯಾರು, ಅದನ್ನು ಪೆನ್‌ಡ್ರೈವ್ ಮೂಲಕ ಕಾಂಗ್ರೆಸ್‌ನ ಕೆಲ ನಾಯಕರಿಗೆ ಕೊಟ್ಟಿದ್ದು ಯಾರು ಎಂಬುದರ ಬಗ್ಗೆಯೂ ನ್ಯಾಯಸಮ್ಮತ ಹಾಗೂ ಆಳವಾದ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.

ದೇಶದ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಹೆಸರುಗಳನ್ನು ವಿನಾಕಾರಣ ಎಳೆದು ತರುವುದಕ್ಕೆ ಮುಖಂಡರು ವಿರೋಧ ವ್ಯಕ್ತಪಡಿಸಿದರು.

ಈ ಬಗ್ಗೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಪ್ರತಿಕ್ರಿಯೆ ನೀಡಿದ್ದರೂ, ಕಾಂಗ್ರೆಸ್‌ನವರು ಇಡೀ ಪ್ರಕರಣವನ್ನು ರಾಜಕೀಯ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಅಂತಿಮವಾಗಿ ಸಮಾಜದ ಹಿತದೃಷ್ಟಿಯಿಂದ, ಈ ನೆಲದ ಕಾನೂನಿಗೆ ಗೌರವ ಕೊಟ್ಟು ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದಿಂದ ಅಮಾನತು ಮಾಡಿರುವುದನ್ನು ಪಕ್ಷದ ಹಿತದೃಷ್ಟಿಯಿಂದ ಎಲ್ಲರೂ ಸ್ವಾಗತಿಸಿದರು.

ಸಭೆಯಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ, ತಾಲ್ಲೂಕು ಘಟಕದ ಅಧ್ಯಕ್ಷರಾದ ಎಸ್.ದ್ಯಾವೇಗೌಡ, ಪರಮ ದೇವರಾಜೇಗೌಡ, ಕಣದಹಳ್ಳಿ ಮಂಜೇಗೌಡ, ದೊಡ್ಡದಿಣ್ಣೆ ಸ್ವಾಮಿ, ಹಾಮೂಲ್ ನಿರ್ದೇಶಕ ಬೂವನಹಳ್ಳಿ ಸ್ವಾಮಿಗೌಡ, ಜಿಲ್ಲಾ ಜೆಡಿಎಸ್ ವಕ್ತಾರ ಹೊಂಗೆರೆ ರಘು, ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗರಾಜು ಹಾಗೂ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT