ಮಂಗಳವಾರ, ಮಾರ್ಚ್ 9, 2021
31 °C
ಜಿಲ್ಲೆಯ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಬಿಡುಗಡೆಗೆ ಒತ್ತಾಯ

25ಕ್ಕೆ ಸಿಎಂ ಕಚೇರಿ ಎದುರು ಜೆಡಿಎಸ್‌ ಶಾಸಕರ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದ ಯೋಜನೆಗಳಿಗೆ ಅನುದಾನ ನೀಡಬೇಕೆಂದು ಆಗ್ರಹಿಸಿ ಜಿಲ್ಲೆಯ ಆರು ಶಾಸಕರೊಂದಿಗೆ ಜ. 25ರಂದು ಬೆಂಗಳೂರಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಕೆ. ಕುಮಾರಸ್ವಾಮಿ ಹೇಳಿದರು.

ಪ್ರತಿಭಟನೆಯಲ್ಲಿ ರಾಜ್ಯಸಭಾ ಸದಸ್ಯ ಎಚ್‌.ಡಿ. ದೇವೇಗೌಡ ಹಾಗೂ ಸಂಸದ ಪ್ರಜ್ವಲ್‌ ರೇವಣ್ಣ ಸಹ ಪಾಲ್ಗೊಳ್ಳುವರು. ಅದೇ ದಿನ ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸದಸ್ಯರು, ನಗರಸಭೆ ಸದಸ್ಯರು, ಗ್ರಾಮ ಪಂಚಾಯಿತಿ ಜೆಡಿಎಸ್‌ ಬೆಂಬಲಿತ ನೂತನ ಸದಸ್ಯರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸುವರು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 18 ತಿಂಗಳು ಕಳೆಯಿತು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಹಲವು ಯೋಜನೆಗಳನ್ನು ಬಜೆಟ್‌ನಲ್ಲಿ ಪ್ರಕಟಿಸಲಾಗಿತ್ತು. ಶೇಕಡಾ 5 ರಷ್ಟು ಬಿಟ್ಟರೆ ಬಹುತೇಕ ಕಾಮಗಾರಿಗಳನ್ನು ಬಿಜೆಪಿ ಸರ್ಕಾರ ತಡೆಹಿಡಿದಿದೆ ಎಂದು ಆರೋಪಿಸಿದರು.

ಈಗಾಗಲೇ ಮೂರು, ನಾಲ್ಕು ಬಾರಿ ಸಿ.ಎಂ ಭೇಟಿ ಮಾಡಿ ಸಮಸ್ಯೆಗಳ ಮನವರಿಕೆ ಮಾಡಲಾಗಿದೆ. ಅವರು ನೀಡಿದ ಭರವಸೆ ಇದುವರೆಗೂ ಈಡೇರಿಲ್ಲ. ಅತಿವೃಷ್ಟಿಯಿಂದ ಸಕಲೇಶಪುರ, ಬೇಲೂರು, ಹೊಳೆನರಸೀಪುರ ಹಾಗೂ ಅರಕಲಗೂಡು ತಾಲ್ಲೂಕುಗಳಲ್ಲಿ ಅಂದಾಜು₹ 28 ಕೋಟಿಗೂ ಹೆಚ್ಚು ನಷ್ಟ ಉಂಟಾಗಿದೆ. ಆದರೆ ಯಾವುದೇ ನದಿ, ಹಳ್ಳಗಳು ಇಲ್ಲದ ಹಾಸನ ಕ್ಷೇತ್ರಕ್ಕೆ ಮಾತ್ರ ₹ 12 ಕೋಟಿ ನೆರೆ ಪರಿಹಾರವನ್ನು ಯಾವ ಆಧಾರದಲ್ಲಿ ನೀಡಲಾಗಿದೆ ಎಂದು ಪ್ರಶ್ನಿಸಿದರು.

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಕಲೇಶಪುರ, ಅರಸೀಕೆರೆ ಮತ್ತು ಬೇಲೂರು ತಾಲ್ಲೂಕುಗಳಿಗೆ ನೀಡಿದ್ದ ಎತ್ತಿನಹೊಳೆ ಯೋಜನೆ ಕಾಮಗಾರಿ ₹60 ಕೋಟಿ ಪರಿಹಾರವನ್ನು ತಡೆಹಿಡಿಯಲಾಗಿದೆ ಎಂದು ದೂರಿದರು.

ಶಾಸಕ ಎಚ್‌.ಡಿ. ರೇವಣ್ಣ ಮಾತನಾಡಿ, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮಂಜೂರಾಗಿರುವ ಯಾವ ಯೋಜನೆ ಅವೈಜ್ಞಾನಿಕ ಎಂಬುದನ್ನು ತಿಳಿಸಲಿ. ಒಂದು ವೇಳೆ ಅವೈಜ್ಞಾನಿಕ ಕಾಮಗಾರಿ ಕೈಗೆತ್ತಿಕೊಂಡಿದ್ದರೆ ತಡೆಹಿಡಿಯಲಿ. ₹144 ಕೋಟಿ ವೆಚ್ಚದಲ್ಲಿ ಚನ್ನಪಟ್ಟಣ ಕೆರೆಯಲ್ಲಿ ಉದ್ಯಾನ, ಮಕ್ಕಳ ರೈಲು ನಿರ್ಮಾಣ ಹೊಸ ಯೋಜನೆ ಅಲ್ಲ, 2004ಕ್ಕೂ ಹಿಂದೆಯೇ ಪ್ರಸ್ತಾವ ಸಲ್ಲಿಸಲಾಗಿತ್ತು ಎಂದರು.

ಕಾಂಗ್ರೆಸ್‌ ಹಾಗೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿ ಸಂಪೂರ್ಣ ಕಡೆಗಣಿಸಲಾಗಿತ್ತು. ಜಿಲ್ಲೆಯಲ್ಲಿ ಜೆಡಿಎಸ್‌ ಶಾಸಕರು ಇದ್ದಾರೆ ಎಂಬ ಕಾರಣದಿಂದ ಅನುದಾನ ತಡೆ ಹಿಡಿಯಲಾಗಿದೆ. ಈ ಬಾರಿಯ ಅಧಿವೇಶನದಲ್ಲಿ ಪ್ರಶ್ನಿಸುವುದಾಗಿ ತಿಳಿಸಿದರು.

ಶಾಸಕ ಸಿ.ಎನ್‌. ಬಾಲಕೃಷ್ಣ ಮಾತನಾಡಿ, ಕ್ಷೇತ್ರದ ಪ್ರವಾಸೋದ್ಯಮ ಇಲಾಖೆಯ ಅನುದಾನವನ್ನು ತಡೆ ಹಿಡಿದು ₹67 ಕೋಟಿ ಅನುದಾನವನ್ನು ಚಿಕ್ಕಮಗಳೂರಿಗೆ ವಿನಿಯೋಗ ಮಾಡಿಕೊಳ್ಳಲಾಯಿತು. ಈ ರೀತಿ ಅನೇಕ ಉದಾಹರಣೆಗಳು ಇವೆ. ಅಭಿವೃದ್ಧಿ ವಿಚಾರದಲ್ಲಿ ಈ ರೀತಿ ತಾರತಮ್ಯ ಮಾಡುತ್ತಿರುವುದರಿಂದ ಧರಣಿ ನಡೆಸುವುದು ಅನಿವಾರ್ಯವಾಗಿದೆ ಎಂದರು.

ಗೋಷ್ಠಿಯಲ್ಲಿ ಶಾಸಕ ಕೆ.ಎಸ್‌. ಲಿಂಗೇಶ್‌ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು