ರೇವಣ್ಣ ಅಣತಿಯಂತೆ ವಾಸ್ತು ಪಾಲಿಸಿದ ಕುಮಾರಸ್ವಾಮಿ
ಜೆಡಿಎಸ್ ಸಮಾವೇಶ ಸ್ಥಳ ಪರಿಶೀಲಿಸುವ ವೇಳೆ ರೇವಣ್ಣ ಅವರ ಅಣತಿಯಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಾಸ್ತು ಪ್ರಕಾರವೇ ಕಾರಿನಲ್ಲಿ ವೇದಿಕೆಯ ಬಳಿಗೆ ಬಂದರು. ಬೆಂಗಳೂರಿನಿಂದ ನೇರವಾಗಿ ಹಾಸನದ ಭುವನಹಳ್ಳಿ ಬಿಜಿಎಸ್‌ಕೆ ಲೇಔಟ್ ಪ್ರದೇಶದ ಬೃಹತ್ ವೇದಿಕೆ ಬಳಿ ಕಾರಿನಲ್ಲಿ ಬಂದ ಕುಮಾರಸ್ವಾಮಿ ಅವರನ್ನು ಕಾರಿನಿಂದ ಇಳಿಯದಂತೆ ತಿಳಿಸಿದ ರೇವಣ್ಣ ವಾಸ್ತು ಪ್ರಕಾರ ಬರುವಂತೆ ಕಾರು ಚಾಲಕನಿಗೆ ಸೂಚಿಸಿದರು. ಮೊದಲಿಗೆ ಕಾರು ದಕ್ಷಿಣ ದಿಕ್ಕಿನಿಂದ ವೇದಿಕೆ ಬಳಿಗೆ ಬಂದಿದ್ದು ಇಳಿಯಲು ಸಿದ್ಧರಾಗಿದ್ದ ಸಂದರ್ಭದಲ್ಲಿ ಕಾರಿನಿಂದ ಇಳಿಯದಂತೆ ಸೂಚಿಸಿ ವಾಹನವನ್ನು ಮುಂದಕ್ಕೆ ಸಾಗಿಸಲು ಹೇಳಿದರು. ನಂತರ ಕಾರು ಉತ್ತರ ದಿಕ್ಕಿಗೆ ತೆರಳಿ ಈಶಾನ್ಯ ಮೂಲೆಯಿಂದ ಪೂರ್ವ ದಿಕ್ಕಿಗೆ ಬಂದು ನಿಲ್ಲಿಸಲಾಯಿತು. ಪೂರ್ವಾಭಿಮುಖವಾಗಿ ಕಾರು ನಿಂತ ಬಳಿಕ ಎಚ್.ಡಿ. ಕುಮಾರಸ್ವಾಮಿ ವಾಹನದಿಂದ ಇಳಿದು ವೇದಿಕೆಯತ್ತ ನಡೆದರು.