ಸೋಮವಾರ, ಮಾರ್ಚ್ 8, 2021
31 °C
ಹಿಮತ್ ಸಿಂಗ್ ಕಾ, ಆಪ್ಕೋ ಕಂಪನಿಗಳಿಂದ ವಂಚನೆ

ಕೈಗಾರಿಕೆ ಹೆಸರಿನಲ್ಲಿ ಭೂ ಕಬಳಿಕೆಗೆ ಹುನ್ನಾರ: ರೇವಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಹಾಸನ: ‘ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಯಿಂದ ಭೂಮಿ ಪಡೆದ ಕೆಲ ಕಂಪನಿಗಳು ಬೇರೆಯವರಿಗೆ ಮಾರಾಟ ಮಾಡಿದ್ದಲ್ಲದೇ, ಐಐಟಿಗೆ ಮೀಸಲಾಗಿದ್ದ ಜಾಗವನ್ನೂ ಕಬಳಿಸಲು ಹುನ್ನಾರ ನಡೆಸಿವೆ’ ಎಂದು ಸಚಿವ ಎಚ್‌.ಡಿ.ರೇವಣ್ಣ ಆರೋಪಿಸಿದರು.

‘ನಗರದ ಹೊರವಲಯದಲ್ಲಿ ಕೈಗಾರಿಕೆ ಸ್ಥಾಪನೆಗೆ 2446 ಎಕರೆ ಭೂ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಈ ಪ್ರದೇಶದಲ್ಲಿ 356 ಯೋಜನೆಗಳು ಇದೆ ಎಂದು ತೋರಿಸಲಾಗಿದೆಯಾದರೂ 151 ಗ್ರಾನೈಟ್ ಕಾರ್ಖಾನೆಗಳು, 30 ಜನರಲ್ ಎಂಜಿನಿಯರಿಂಗ್ ಕಂಪನಿಗಳನ್ನು ಮಾತ್ರ ಸ್ಥಾಪಿಸಲಾಗಿದೆ. ಕೆಐಎಡಿಬಿ ಅಧಿಕಾರಿಗಳು ಪ್ರಭಾವಿಗಳ ಜತೆ ಶಾಮೀಲಾಗಿ ಸರ್ಕಾರಕ್ಕೆ ಅಪಾರ ಪ್ರಮಾಣದ ನಷ್ಟ ಉಂಟು ಮಾಡಿದ್ದಾರೆ. ಇದರಲ್ಲಿ ಹಿಮತ್‌ ಸಿಂಗ್‌ ಕಾ ಕಂಪನಿ 400 ಎಕರೆ ಭೂಮಿ ಪಡೆದಿದೆ. ಪ್ರತಿ ಎಕರೆಗೆ ₹ 16 ಲಕ್ಷದಂತೆ 300 ಎಕರೆ ಹಾಗೂ ₹ 3 ಲಕ್ಷದಂತೆ 100 ಎಕರೆ ಖರೀದಿ ಮಾಡಿದೆ. ಯುವ ಜನರಿಗೆ ತರಬೇತಿ ನೀಡಲು ಸರ್ಕಾರದಿಂದ ₹ 500 ಕೋಟಿ ಸಹ ಸಬ್ಸಿಡಿ ಪಡೆದು, ಸ್ಥಳೀಯರಿಗೆ ಉದ್ಯೋಗ ಸಹ ನೀಡಿಲ್ಲ’ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ಹೇಮಾವತಿ ನೀರನ್ನು ಪಾರ್ಕ್‌, ನಾಯಿ ತೊಳೆಯಲು ಬಳಸುತ್ತಾರೆ. ಆದರೆ ಜಿಲ್ಲೆಯ ಜನರು ವಾರಕ್ಕೊಮ್ಮೆ ಕೊಳವೆಬಾವಿ ನೀರು ಕುಡಿಯುವಂತಾಗಿದೆ. ತರಬೇತಿ ಪಡೆಯುವ ಯುವ ಜನರಿಗೆ ತಿಂಗಳಿಗೆ ₹ 13 ಸಾವಿರ ನೀಡುತ್ತೇವೆ ಎಂದು ಹೇಳಿ ₹ 9 ಸಾವಿರ ನೀಡಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಅದೇ ರೀತಿ ಆಪ್ಟೊ ಇನ್‌ಫ್ರಾಸ್ಟ್ರಕ್ಚರ್‌ ಪ್ರೈವೆಟ್‌ ಲಿಮಿಟೆಡ್‌ ಸಹ 250 ಎಕರೆ ಭೂಮಿಯನ್ನು ₹ 10 ಕೋಟಿಗೆ ಪಡೆದು, ವಿದೇಶದಿಂದ ₹ 100 ಕೋಟಿ ಸಾಲ ಪಡೆದಿದೆ. ಈ ಭೂಮಿಯನ್ನು ಮತ್ತೊಬ್ಬರಿಗೆ ಬಾಡಿಗೆ ಕೊಡುವ ದಂದೆ ಸಹ ನಡೆಯುತ್ತಿದೆ. ಕೈಗಾರಿಕೆಗೆ ಭೂಮಿ ನೀಡಿದವರು ಎಕರೆಗೆ ₹ 50 ಸಾವಿರ, ₹ 1 ಲಕ್ಷ , ಹೆಚ್ಚು ಅಂದರೆ ₹ 2 ಲಕ್ಷ ಪರಿಹಾರ ಪಡೆದಿರಬಹುದು. ಅವರೆಲ್ಲರೂ ಇಂದು ಮೂಟೆ ಹೊತ್ತು ಜೀವನ ಸಾಗಿಸುತ್ತಿದ್ದಾರೆ. ಕಂಪನಿಗಳಲ್ಲಿ ಭೂಮಿ ನೀಡಿದವರಿಗೆ ಉದ್ಯೋಗವನ್ನು ನೀಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸ್ಥಳೀಯ ಎಂಜಿನಿಯರ್‌ ಪದವೀಧರರನ್ನು ಕಂಪನಿಗಳು ಕೆಲಸಕ್ಕೆ ನೇಮಿಸಿಕೊಳ್ಳದೆ ಅನ್ಯಾಯ ಮಾಡುತ್ತಿವೆ. ಮುಖ್ಯಮಂತ್ರಿಗೆ ದೂರು ನೀಡಿ ಉನ್ನತ ಮಟ್ಟದ ತನಿಖೆಗೆ ಶಿಫಾರಸು ಮಾಡಲಾಗುವುದು’ ಎಂದು ಹೇಳಿದರು.

‘ಹಾಸನ ಮಾತ್ರವಲ್ಲದೆ ರಾಜ್ಯದ ಇತರೆ ಜಿಲ್ಲೆಗಳಲ್ಲೂ ವಿಶೇಷ ಭೂ ಸ್ವಾಧೀನ ಕಚೇರಿ, ಕೆಐಎಡಿಬಿಗಳು ನಿರಾಶ್ರಿತರಿಗೆ ಭೂಮಿ ನೀಡದೆ ಭೂಗಳ್ಳರಿಗೆ ನೀಡುತ್ತಿವೆ. ಶ್ರೀಮಂತರ ಜತೆ ಸೇರಿ ಹಗಲು ದರೋಡೆ ಮಾಡಲು ಹೊರಟಿವೆ’ ಎಂದು ಕಿಡಿ ಕಾರಿದರು.
ಗೋಷ್ಠಿಯಲ್ಲಿ ಉದ್ಯಮಿ ಶಿವಕುಮಾರ್, ಮುಖಂಡ ಹೊನ್ನವಳ್ಳಿ ಸತೀಶ್ ಇದ್ದರು.

 

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು