ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೇಬೀಡು | ಕನಕದಾಸ ಜಯಂತಿ: ಅದ್ಧೂರಿ ಮೆರವಣಿಗೆ

ವೀರಗಾಸೆ, ಡೊಳ್ಳು ಕುಣಿತದೊಂದಿಗೆ, ಡಿಜೆ ಅಬ್ಬರ.
Published 6 ಡಿಸೆಂಬರ್ 2023, 14:28 IST
Last Updated 6 ಡಿಸೆಂಬರ್ 2023, 14:28 IST
ಅಕ್ಷರ ಗಾತ್ರ

ಹಳೇಬೀಡು: ಕಲಾತಂಡಗಳ ಸಾಂಸ್ಕೃತಿಕ ಕಲರವದೊಂದಿಗೆ ಬುಧವಾರ ಹಳೇಬೀಡಿನ ಹೊಯ್ಸಳ ವೃತ್ತದಲ್ಲಿ ಕನಕದಾಸ ಜಯಂತಿ ವೈಭವದಿಂದ ನಡೆಯಿತು.

ಕನಕ ಯುವಕರ ಬಳಗ, ಸಂಗೊಳ್ಳಿ ರಾಯಣ್ಣ ಯುವ ಬ್ರಿಗೇಡ್, ಕನಕ ನೌಕರರ ಸಂಘ ಹಾಗೂ ಸ್ಥಳೀಯ ಕುರುಬ ಸಮಾಜದ ಆಶ್ರಯದಲ್ಲಿ ಕನಕದಾಸ ಜಯಂತಿ ಆಯೋಜಿಸಲಾಗಿತ್ತು. ಯುವಕರ ಜಯಘೋಷದೊಂದಿಗೆ ಹೂವಿನಿಂದ ಅಲಂಕರಿಸಿದ್ದ ಮಂಟಪದಲ್ಲಿ ಕನಕದಾಸರ ಚಿತ್ರವನ್ನು ಆರೋಹಣ ಮಾಡಲಾಯಿತು. ನಂತರ ಕನಕದಾಸರ ಚಿತ್ರಕ್ಕೆ ಪೂಜೆ
ಸಲ್ಲಿಸಲಾಯಿತು. ಮಹಾಮಂಗಳಾರತಿ ನೆರವೇರಿದ ತಕ್ಷಣ ನೆರದಿದ್ದ ಗಣ್ಯರು ಕನಕದಾಸರ ಚಿತ್ರಕ್ಕೆ ಪುಷ್ಪವೃಷ್ಟಿ ಸಮರ್ಪಿಸಿದರು.

ಹೊಯ್ಸಳ ವೃತ್ತದಲ್ಲಿ ಕಲಾ ತಂಡಗಳು ಎರಡು ಗಂಟೆಗೂ ಹೆಚ್ಚು ಕಾಲ ತಮ್ಮ ಕಲೆಯನ್ನು ಪ್ರದರ್ಶಿಸಿದವು. ನೂರಾರು ಜನರು ಜಮಾಯಿಸಿ ಕಲಾತಂಡಗಳ ಪ್ರದರ್ಶನವನ್ನು ಕಣ್ತುಂಬಿಕೊಂಡರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಚಾಲನೆ ನೀಡಿದರು. ಮಂಗಳವಾದ್ಯ ಡೊಳ್ಳಿನ ಸದ್ದಿನೊಂದಿಗೆ ಮೆರವಣಿಗೆ ಹೊಯ್ಸಳೇಶ್ವರ ದೇವಾಲಯ ರಸ್ತೆ ಮುಖಾಂತರ, ಬೇಲೂರು ರಸ್ತೆಯಲ್ಲಿ ರಾಜನಶಿರಿಯೂರು ವೃತ್ತದವರೆಗೂ ಸಾಗಿತು. ಅರಕಲಗೂಡಿನ ಮಾರುತಿ ವೀರಗಾಸೆ ತಂಡದವರು ಕನಕದಾಸರ ತತ್ವಗಳು, ಶರಣರ ಆದರ್ಶಗಳು ಹಾಗೂ ಬೀರಲಿಂಗೇಶ್ವರ ಕಥೆಯನ್ನು ವೀರಗಾಸೆ ನೃತ್ಯದ ಮುಖಾಂತರ ಪ್ರಸ್ತುತಪಡಿಸಿದರು. ಡೊಳ್ಳಿನ ಶಬ್ದದೊಂದಿಗೆ ಕೇಳಿ ಬರುತ್ತಿದ್ದ ವೀರಗಾಸೆ ಸಂಭಾಷಣೆ ನೆರದಿದ್ದ ಜನರ ಮನಸ್ಸಿಗೆ ಹಿತ ನೀಡಿತು.

ಅಜ್ಜಂಪುರ ತಗ್ಗಿನಹಳ್ಳಿಯ ತಂಡದ ಡೊಳ್ಳು ಕುಣಿತವನ್ನು ಜನರು ವಿಕ್ಷಿಸಿದರು. ಕಿವಿಗಡಚಿಕ್ಕುವ ಶಬ್ದದೊಂದಿಗೆ ನಾದಮಯವಾಗಿ ಕೇಳಿ ಬರುತ್ತಿದ್ದ ಡೊಳ್ಳಿನ ಸದ್ದಿಗೆ ಮೆರವಣಿಗೆಯಲ್ಲಿದ್ದವುರು ಹೆಜ್ಜೆ ಹಾಕುತ್ತಿದ್ದರು. ಮೆರವಣಿಗೆಯಲ್ಲಿ ಡಿಜೆಯ ಅಬ್ಬರ ಜೋರಾಗಿತ್ತು. ಯುವಕರನ್ನು ಕುಣಿಸುವಂತಹ ಹಾಡುಗಳೊಂದಿಗೆ ಕನಕದಾಸರು ಕೀರ್ತನೆಗಳು ಡಿಜೆಯಲ್ಲಿ ಕೇಳಿ ಬಂದವು. ಮೆರವಣಿಗೆಗೆ ಕರೆತಂದಿದ್ದ ಟಗರು ಎತ್ತಿನಗಾಡಿಯ ಮೇಲೆ ಗತ್ತಿನಿಂದ ನಿಂತಿತ್ತು.

ನಂತರ ನಡೆದ ಸರಳ ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಹೇಮಾವತಿ ಮಂಜುನಾಥ್ ಮಾತನಾಡಿ, ಕುರುಬ ಸಮಾಜ ವಿವಿಧ ಕ್ಷೇತ್ರದಲ್ಲಿ ಪ್ರಗತಿಯ ಕಡೆ ಹೆಜ್ಜೆ ಹಾಕಬೇಕಾಗಿದೆ. ಸಮಾಜವನ್ನು ಸನ್ಮಾರ್ಗದಲ್ಲಿನ ಕೊಂಡೊಯ್ಯಲು ಸಮಾಜದವರು ಒಗ್ಗಟ್ಟಿನಿಂದ ಸಾಗಬೇಕು. ಸಮಾಜದ ಶ್ರೇಯೋಭಿವೃದ್ಧಿಗಾಗಿ ಎಲ್ಲರೂ ಕೈಜೋಡಿಸಬೇಕು. ಶೈಕ್ಷಣಿಕ ಸಾಧನೆಯಲ್ಲಿ ಸಮಾಜದ ಮಕ್ಕಳು ಹೆಜ್ಜೆ ಹಾಕಬೇಕು. ಕನದಾಸರ ಕೀರ್ತನೆಗಳನ್ನು ಹಾಡುವುದಕ್ಕೆ, ಕೇಳುವುದಕ್ಕೆ ಮಾತ್ರ ಬಳಕೆ ಮಾಡಿಕೊಳ್ಳದೆ, ಅದರಂತೆ ನಡೆದುಕೊಳ್ಳುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು ಎಂದರು.

ಜಿಲ್ಲಾ ಕುರುಬ ಸಮಾಜ ಪ್ರಧಾನ ಕಾರ್ಯದರ್ಶಿ ರಂಗನಾಥ್, ನಿರ್ದೇಶಕ ಬಿ.ಎಂ.ಸಂತೋಷ್, ರಾಜ್ಯ ಪದಾಧಿಕಾರಿ ಬಿ.ಸಿ.ಹರೀಶ್, ತಾಲ್ಲೂಕು ಕಾರ್ಯದರ್ಶಿ ಕೆ.ಎಂ.ವೀರಣ್ಣ, ಗ್ರಾಮ ಪಂಚಾಯಿತಿ ಸದಸ್ಯೆ ವಾಣಿ ಚಂದ್ರಶೇಖರ್, ಮುಖಂಡರಾದ ಯತೀಶ್, ಈರೇಗೌಡ, ಹಾಲಪ್ಪಣ್ಣ, ಮಾದೇಗೌಡ, ಹೇಮರಾಜು, ಚಾಮರಾಜೇಗೌಡ, ಕೃಷ್ಣ, ಲಕ್ಷ್ಮಣ್, ಶಾಂತೇಗೌಡ ಅನಿಲ್ ರೇವಣ್ಣ , ತೀರ್ಥೇಗೌಡ ಇದ್ದರು.

ಹಳೇಬೀಡಿನಲ್ಲಿ ಬುಧವಾರ ಕನಕದಾಸ ಜಯಂತಿ ಪ್ರಯಕ್ತ ನಡೆದ ಮೆರವಣಿಗೆಯಲ್ಲಿ ಗಮನಸೆಳೆದ ಕಲಾತಂಡ
ಹಳೇಬೀಡಿನಲ್ಲಿ ಬುಧವಾರ ಕನಕದಾಸ ಜಯಂತಿ ಪ್ರಯಕ್ತ ನಡೆದ ಮೆರವಣಿಗೆಯಲ್ಲಿ ಗಮನಸೆಳೆದ ಕಲಾತಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT