ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಆತ್ಮಹತ್ಯೆಯತ್ತ ರೇವಣ್ಣ ಕುಟುಂಬ: ರಾಮಸ್ವಾಮಿ

Last Updated 28 ಫೆಬ್ರುವರಿ 2023, 2:31 IST
ಅಕ್ಷರ ಗಾತ್ರ

ಹಾಸನ: ‘ಶಾಸಕ ಎಚ್‌.ಡಿ.ರೇವಣ್ಣ ಹಾಗೂ ಅವರ ಕುಟುಂಬದವರು ರಾಜಕೀಯ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದಾರೆ. ಜಿಲ್ಲೆಯಲ್ಲಿ ಅವರು ಮಾಡುತ್ತಿರುವ ರಾಜಕೀಯ ಸರಿಯಿಲ್ಲ’ ಎಂದು ಶಾಸಕ ಎ.ಟಿ. ರಾಮಸ್ವಾಮಿ ಪ್ರತಿಪಾದಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಾಸನದಲ್ಲಿ ಗುಲಾಮಗಿರಿ ಇದೆ. ಕೈಕಟ್ಟಿ ನಿಲ್ಲಬೇಕು. ಉಸಿರು ಬಿಡುವುದೂ ಕಷ್ಟವಾಗಿದೆ. ಜಿಲ್ಲೆಯಲ್ಲಿ ಬೆಳೆದಿರುವ ಈ ರಾಜಕೀಯ ಕಳೆಯನ್ನು ಬುಡ ಸಮೇತ ಕಿತ್ತು ಹಾಕಬೇಕು. ಅದರಿಂದ ಜನ ಹೊರಬಂದು ಸ್ವಾಭಿಮಾನಿಗಳಾಗಬೇಕು’ ಎಂದರು.

‘ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನಿಸಲು ಕಳೆದ ತಿಂಗಳು ಸಂಸದ ಎಚ್‌.ಡಿ.ದೇವೇಗೌಡರ ಮನೆಗೆ ಹೋಗಿದ್ದೆ. ಆಗ ನನ್ನ ಕೈ ಹಿಡಿದು, ರಾಮಸ್ವಾಮಿಯವರೇ ನಿಮಗೆಲ್ಲ ಏನೇನು ಕಿರುಕುಳ ಕೊಡುತ್ತಿದ್ದಾರೆ ಗೊತ್ತು,. ನನ್ನ ಜೀವ ಇರುವವರೆಗೆ ನಿಮ್ಮನ್ನು ರಕ್ಷಿಸುತ್ತೇನೆ ಅಂದಿದ್ದರು. ಆದರೆ, ಅವರನ್ನೂ ಕಾರ್ಯಕ್ರಮಕ್ಕೆ ಬರದಂತೆ ಮಾಡಿದರು’ ಎಂದು ವಿಷಾದಿಸಿದರು.

‘ಕ್ಷೇತ್ರ ಮರುವಿಂಗಡಣೆ ವೇಳೆ ಜನಸಂಖ್ಯೆ ಕೊರತೆಯಾದಾಗ, ತಮ್ಮ ತಾಲ್ಲೂಕಿನ ಹಳ್ಳಿಮೈಸೂರನ್ನು ಕೈಬಿಟ್ಟು, 60 ಕಿ.ಮೀ.ದೂರದ ಶಾಂತಿಗ್ರಾಮ, ನಿಟ್ಟೂರನ್ನು ಸೇರಿಸಿಕೊಂಡಿದ್ದು ಏಕೆ? ಆ ಮೂಲಕ ಕ್ಷೇತ್ರ ಮರುವಿಂಗಡಣೆ ಸಮಿತಿಯಲ್ಲಿದ್ದ ದೇವೇಗೌಡರನ್ನು ದುರುಪಯೋಗ ಮಾಡಿಕೊಂಡಿರುವ ನೀವು, ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತೀರಲ್ಲ. ನಿಮಗೆ ಯಾವ ನೈತಿಕತೆ ಇದೆ’ ಎಂದು ಪ್ರಶ್ನಿಸಿದರು.

‘ಯಾರ ಹೆಸರು, ತಪಸ್ಸಿನಿಂದ ಅವರು ಮೇಲೆ ಬಂದರೋ, ಅದೇ ಏಣಿಯನ್ನು ಒದ್ದು ಬಿಸಾಕಿದರು. ನೋವು ಕೊಟ್ಟರು. ಇವತ್ತು ಆ ಹಿರಿಯ ಜೀವ ನೋವಿನಿಂದ ನರಳಾಡುತ್ತಿದೆ’ ಎಂದರು.

‘ಶಾಸಕಾಂಗ ಪಕ್ಷದ ಸಭೆಗೆ ಬಂದಿಲ್ಲ ಎಂದು ನಾಯಕರಾದ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದರು. ಆದರೆ ಹಾಜರಾತಿ ಪುಸ್ತಕ ತೆಗೆದು ನೋಡಲಿ. ಅವರ ಬಗ್ಗೆ ಗೌರವವಿದೆ. ಅವರು ಸತ್ಯವನ್ನು ಮರೆ ಮಾಚಬಾರದು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ವಿಧಾನಸಭೆಗೆ ಹೋಗುತ್ತೇನೆ. ಎಲ್ಲಿ ಸ್ಪರ್ಧಿಸಬೇಕೆಂಬುದನ್ನು ಜನ ತೀರ್ಮಾನಿಸುತ್ತಾರೆ’ ಎಂದು ರಾಮಸ್ವಾಮಿ ತಿಳಿಸಿದರು.

‘ಸ್ವರೂಪ್‌ ತಮ್ಮ ತಂದೆ ಹಾಗೂ ಚಿಕ್ಕಪ್ಪನನ್ನು ಕಳೆದುಕೊಂಡಿದ್ದರೂ ಸಾಲ ಮಾಡಿ ಪಕ್ಷ ಸಂಘಟಿಸುತ್ತಿದ್ದಾರೆ. ಅಂಥ ಯುವಕನ ಭವಿಷ್ಯದೊಂದಿಗೆ ಚೆಲ್ಲಾಟ ಸರಿಯೇ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT