ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನಕ್ಕೆ ಭವಾನಿ ರೇವಣ್ಣ ಅನಿವಾರ್ಯವಲ್ಲ, ಸೂಕ್ತ ಅಭ್ಯರ್ಥಿ: ಸೂರಜ್ ರೇವಣ್ಣ

Last Updated 28 ಜನವರಿ 2023, 10:41 IST
ಅಕ್ಷರ ಗಾತ್ರ

ಹಾಸನ: ‘ಹಾಸನ ಜಿಲ್ಲೆ ಜೆಡಿಎಸ್‌ನ ಭದ್ರಕೋಟೆ. 2018ರಲ್ಲಿ ಹಾಸನ ಕ್ಷೇತ್ರವನ್ನು ಕಳೆದುಕೊಂಡಿದ್ದೇವೆ. 2023ರಲ್ಲಿ ಮತ್ತೆ ಪಡೆದುಕೊಳ್ಳಬೇಕು ಎನ್ನುವುದೇ ನಮ್ಮ ಉದ್ದೇಶ’ ಎಂದು ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಹೇಳಿದರು.

’ಭವಾನಿ ರೇವಣ್ಣ ಅವರು ಹಾಸನ ಕ್ಷೇತ್ರದ ಸ್ಪರ್ಧಿಸುವಂತಹ ಅನಿವಾರ್ಯತೆ ಇಲ್ಲ' ಎಂಬ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆಗೆ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹರದೂರು ಗ್ರಾಮದಲ್ಲಿ ಪ್ರತಿಕ್ರಿಯೆ ನೀಡಿದ ‘ಅವರು ಪಕ್ಷದ ಹಿರಿಯ ರಾಜಕಾರಣಿ. ನಾವು ಅವರ ಬಗ್ಗೆ ಮಾತನಾಡುವುದು ಸೂಕ್ತ ಅಲ್ಲ. ಅವರ ಅಭಿಪ್ರಾಯವನ್ನು ವ್ಯಕ್ತಪಡಿಸಿರುತ್ತಾರೆ. ನಮಗೂ ಅದಕ್ಕೂ ಸಂಬಂಧವಿಲ್ಲ’ ಎಂದರು.

ಸದ್ಯದ ಪರಿಸ್ಥಿತಿಯಲ್ಲಿ ಹಾಸನ ಜಿಲ್ಲೆಯ ಕುರಿತು ಎಚ್.ಡಿ. ರೇವಣ್ಣ ಹಾಗೂ ದೇವೇಗೌಡರು ಕುಳಿತುಕೊಂಡು ತೀರ್ಮಾನ ಕೈಗೊಳ್ಳುತ್ತಾರೆ. ದೇವೇಗೌಡರ ತೀರ್ಮಾನವೇ ಅಂತಿಮ. ಈ ಬಗ್ಗೆ ಕುಮಾರಸ್ವಾಮಿ ಅವರಿಗೆ ಮನವರಿಕೆ ಮಾಡುವ ವಿಷಯವಲ್ಲ ಎಂದರು.

‘ಎಚ್‌.ಪಿ. ಸ್ವರೂಪ ಅವರಿಗೆ ಪಕ್ಷದ ಅಭ್ಯರ್ಥಿ ಆಗಬೇಕು ಅನ್ನುವ ಆಕಾಂಕ್ಷೆ ಇದೆ. ಅಂತೆಯೇ ಅವರು ಬೇಡಿಕೆ ಇಟ್ಟಿದ್ದಾರೆ. ಆದ್ದರಿಂದ ಕುಮಾರಸ್ವಾಮಿ ಅವರು ಈ ರೀತಿ ಹೇಳಿಕೆ ಕೊಡುತ್ತಿರಬಹುದು. ಆದರೆ ರೇವಣ್ಣ, ಕುಮಾರಣ್ಣ, ದೇವೇಗೌಡರ ಸಮ್ಮುಖದಲ್ಲಿ ಎಲ್ಲ ವಿಷಯ ಒಪ್ಪಿಸಿ, ಅಂತಿಮವಾದ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು ಹೇಳಿದರು.

‘ಭವಾನಿ ರೇವಣ್ಣ ಹಾಸನಕ್ಕೆ ಅನಿವಾರ್ಯ ಅಲ್ಲ, ಆದರೆ ಸೂಕ್ತ ಎಂದು ಹೇಳಲು ಬಯಸುತ್ತೇನೆ. ನಾನು ರಾಜಕಾರಣದಲ್ಲಿ ಕಿರಿಯನಾಗಿರಬಹುದು. ಒಂದು ವರ್ಷದಿಂದ ವಿಧಾನ ಪರಿಷತ್‌ ಸದಸ್ಯನಾಗಿದ್ದು, ಹಾಸನ ತಾಲ್ಲೂಕನ್ನು ನೋಡೆಲ್‌ ಕ್ಷೇತ್ರವಾಗಿ ತೆಗೆದುಕೊಂಡು ಪ್ರತಿಯೊಂದು ಕಾರ್ಯಕ್ರಮಗಳಲ್ಲೂ ಭಾಗವಹಿಸಿ, ಜನರ ನಾಡಿಮಿಡಿತ ಅರಿತಿದ್ದೇನೆ’ ಎಂದರು.

‘ನಮ್ಮ ತಾಯಿ ಅಭ್ಯರ್ಥಿ ಆಗಬೇಕು ಎನ್ನುವ ಉದ್ದೇಶ ಅಲ್ಲ. ನಾವು ಕಾರ್ಯಕರ್ತರನ್ನು ಉಳಿಸಿಕೊಳ್ಳಬೇಕಿದೆ. ಪಕ್ಷವನ್ನು ಮತ್ತೆ ಸಂಘಟನೆ ಮಾಡಬೇಕಿದೆ. ಆದ್ದರಿಂದ ಈ ನಿರ್ಧಾರಕ್ಕೆ ಬಂದಿದ್ದೇವೆ’ ಎಂದರು.

‘2024ಕ್ಕೆ ಲೋಕಸಭಾ ಚುನಾವಣೆ ಬರುತ್ತಿದ್ದು, ಇದೆಲ್ಲಾ ಒಂದು ಬುನಾದಿ ಹಾಕುವ ನಿರ್ಧಾರ. ನಾವು ಜಿಲ್ಲೆಯಲ್ಲಿ ಪಕ್ಷವನ್ನು ಹೆಚ್ಚಿನ ರೀತಿಯಲ್ಲಿ ಸಂಘಟನೆ ಮಾಡಬೇಕೆಂದರೆ ವಿಧಾನಸಭೆ ಚುನಾವಣೆಯಿಂದ ಮಾಡಲು ಬಯಸುತ್ತೇವೆ’ ಎಂದು ತಿಳಿಸಿದರು.

‘ಇತ್ತೀಚಿನ ಲೆಕ್ಕಾಚಾರವನ್ನು ಗಮನಿಸಿದರೆ ಭವಾನಿ ರೇವಣ್ಣ ಅಭ್ಯರ್ಥಿಯಾದರೆ ಗೆಲುವು ಖಚಿತ‘ ಎಂದು ಭವಿಷ್ಯ ನುಡಿದ ಸೂರಜ್ ರೇವಣ್ಣ, ’15 ವರ್ಷದಿಂದ ಸತತವಾಗಿ ಆರರಿಂದ ಏಳು ಜನ ಶಾಸಕರನ್ನು ಆಯ್ಕೆ ಮಾಡುವಲ್ಲಿ ರೇವಣ್ಣ ಅವರ ಪ್ರಯತ್ನ ಅಪಾರವಾಗಿದೆ. ಅವರನ್ನು ಬಿಟ್ಟರೆ ಇನ್ನಾರಿಗೂ ಈ ಜಿಲ್ಲೆಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಅವಕಾಶವಿಲ್ಲ ಎಂದು ಹೇಳಲು ಬಯಸುತ್ತೇನೆ’ ಎಂದು ಹೇಳಿದರು.

‘ನಾನು ವೈಯಕ್ತಿಕವಾಗಿ ಹೇಳಬೇಕೆಂದರೆ ಭವಾನಿ ಅವರು ಅಭ್ಯರ್ಥಿ ಆಗಬೇಕು ಎಂದು ಕಾರ್ಯಕರ್ತರ ಅಪೇಕ್ಷೆ ಪಡುತ್ತಿದ್ದು, ಅವರೇ ನೋವು ತೋಡಿಕೊಂಡಿದ್ದಾರೆ. ಉತ್ತರ ಕೊಡುವ ಅಭ್ಯರ್ಥಿ ಆಗಬೇಕು ಅಂತ ಹೇಳಲು ಬಯಸುತ್ತೇನೆ’ ಎಂದರು.

‘ಹಿಂದಿನಿಂದಲೂ ನಮ್ಮ ತಾತ ಅವರೇ ಈ ಜಿಲ್ಲೆಯ ಪ್ರತಿಯೊಬ್ಬ ಅಭ್ಯರ್ಥಿಯ ಸ್ಪರ್ಧೆಯ ವಿಚಾರವಾಗಿ ನಿರ್ಧಾರ ಕೈಗೊಳ್ಳುತ್ತಾರೆ. ಹಿಂದೆ ಭವಾನಿ ರೇವಣ್ಣ ವಿಧಾನ ಪರಿಷತ್‌ಗೆ ಸ್ಪರ್ಧೆ ಮಾಡುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ದೇವೇಗೌಡರು ತೀರ್ಮಾನ ಮಾಡಿದ್ದರಿಂದ ನಾನು ಅಭ್ಯರ್ಥಿ ಆಗಬೇಕಾಯಿತು. ಅದೇ ರೀತಿ ಸಂಸದರ ಚುನಾವಣೆಯಲ್ಲಿ ದೇವೇಗೌಡರೇ ಸ್ಪರ್ಧೆ ಮಾಡಬೇಕಿತ್ತು. ಅವರೇ ಸ್ವಇಚ್ಛೆಯಿಂದ ಪ್ರಜ್ವಲ್ ರೇವಣ್ಣ ಅವರಿಗೆ ದಾರಿ ಮಾಡಿಕೊಟ್ಟರು. ಅದೇ ರೀತಿ ಮುಂದಿನ ದಿನಗಳಲ್ಲಿ ಈ ಜಿಲ್ಲೆಯಲ್ಲಿ ಯಾವ ತಾಲ್ಲೂಕಿನಲ್ಲಿ ಯಾರು ಸ್ಪರ್ಧೆ ಮಾಡಬೇಕು ಎಂಬುದರ ಬಗ್ಗೆ ಅವರೇ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ’ ಎಂದು ತಿಳಿಸಿದರು.

‘ಸ್ವರೂಪ್ ಅವರು ಬೇರೆ ಅಲ್ಲ, ಎಚ್.ಎಸ್ ಪ್ರಕಾಶ್ ಬೇರೆಯಲ್ಲ. ಆ ಕುಟುಂಬಕ್ಕೂ ನಾಲ್ಕು ಬಾರಿ ಟಿಕೆಟ್ ಕೊಟ್ಟು ಶಾಸಕ ಸ್ಥಾನ ಲಭಿಸಿದೆ. ಅವರು ಅಗಲಿದ ನಂತರ ಅವರ ಮಗನನ್ನು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ, ಸಂಜೀವಿನಿ ಸಹಕಾರ ಆಸ್ಪತ್ರೆಯ ಅಧ್ಯಕ್ಷರನ್ನಾಗಿ ಮಾಡಿದ್ದೇವೆ. ಸಾಕಷ್ಟು ಅಧಿಕಾರಿಗಳನ್ನು ಅವರಿಗೆ ಕೊಟ್ಟಿದ್ದು, ಯಾವುದೇ ಅನ್ಯಾಯ ಮಾಡಿಲ್ಲ. ರಾಜಕೀಯವಾಗಿ ಕಡೆಗಣಿಸಿಲ್ಲ’ ಎಂದು ಸ್ಪಷ್ಟಪಡಿಸಿದರು.

’ಬದಲಾದ ರಾಜಕೀಯ ಸನ್ನಿವೇಶದಲ್ಲಿ ಹಾಲಿ ಶಾಸಕರು ನಮ್ಮ ಕಾರ್ಯಕರ್ತರನ್ನು ಡಿಸ್ಟರ್ಬ್ ಮಾಡುತ್ತಿದ್ದಾರೆ. ಕಾರ್ಯಕರ್ತರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದ್ದು, ಹಾಸನ ತಾಲ್ಲೂಕಿನಲ್ಲಿ ಪಕ್ಷ ಮತ್ತೆ ಗೆಲುವು ಸಾಧಿಸುವುದು ನಮ್ಮ ಕುಟುಂಬದಿಂದ ಮಾತ್ರ ಸಾಧ್ಯ ಎಂಬುದು ಕಾರ್ಯಕರ್ತರು, ಜನರ ಅಪೇಕ್ಷೆಯಾಗಿದೆ, ಅದರಂತೆ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ಸೂರಜ್ ರೇವಣ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT