ಶುಕ್ರವಾರ, ಆಗಸ್ಟ್ 6, 2021
25 °C
ಅಸಹಾಯಕರಾದ ಮುಖಂಡರು: ಸಭೆಯಿಂದ ಹೊರ ನಡೆದ ಉಪಾಧ್ಯಕ್ಷ ಬಿ.ಶಿವರಾಮು

ಹಾಸನ | ಕಾರ್ಯಾಧ್ಯಕ್ಷರ ಎದುರೇ ಕಾಂಗ್ರೆಸ್ ಕಾರ್ಯಕರ್ತರ ಕಚ್ಚಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಹಿನ್ನೆಲೆಯಲ್ಲಿ ಕರೆದಿದ್ದ ಕಾರ್ಯಕರ್ತರ ಪೂರ್ವ ಸಿದ್ಧತಾ ಸಭೆಯಲ್ಲಿ ಅಲ್ಪ ಸಂಖ್ಯಾತರ ಮುಖಂಡರ ಹೆಸರು ಪ್ರಸ್ತಾಪಿಸಲಿಲ್ಲವೆಂಬ ಕಾರಣಕ್ಕೆ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಎದುರೇ ಕಾರ್ಯಕರ್ತರು ಕಚ್ಚಾಡಿ, ಪರಸ್ಪರ ಕೈ ಕೈ ಮಿಲಾಯಿಸಿದರು.

ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಸೋಮವಾರ ಕೆಪಿಸಿಸಿ ಸದಸ್ಯ ಎಚ್.ಕೆ.ಮಹೇಶ್‌ ಸ್ವಾಗತ ಭಾಷಣ ಮುಗಿಸುತ್ತಿದ್ದಂತೆ ಗಲಾಟೆ ಆರಂಭವಾಯಿತು.

‘ವೋಟ್‌ ಹಾಕೋಕೆ ನಾವು ಬೇಕು. ನಮ್ಮ ನಾಯಕರ ಹೆಸರು ಹೇಳಲು ಏಕೆ ಮುಜುಗರ’ ಎಂದು ಮುಖಂಡ ಅಬ್ದುಲ್ ಹಾದಿ ಆಕ್ರೋಶ ವ್ಯಕ್ತಪಡಿಸಿದರು. ಸಭೆ ನಡೆಸುವ ಅಗತ್ಯವಿಲ್ಲ ಎಂದು ಇತರರು ಕೂಗಾಡಲು ಆರಂಭಿಸಿದರು.

ಇದಕ್ಕೆ ಪ್ರತಿಯಾಗಿ ಏರುದನಿಯಲ್ಲಿ ಮಾತನಾಡಿದ ಮತ್ತೊಂದು ಗುಂಪು, ‘ಚುನಾವಣೆಯಲ್ಲಿ ಬಿಜೆಪಿಗೆ ವೋಟ್‌ ಹಾಕುತ್ತೀರಾ. ಇಲ್ಲಿ ಬಂದು ಹೆಸರು ಹೇಳಬೇಕು ಅಂತಿರಲ್ಲಾ ನಾಚಿಕೆಯಾಗಬೇಕು‌’ ಎಂದರು.

ಮಾತಿಗೆ ಮಾತು ಬೆಳೆದು ಎರಡು ಬಣದವರು ತಳ್ಳಾಡಿ, ಎಳೆದಾಡಿದರು. ವೀಕ್ಷಕರಾದ ಗಾಯತ್ರಿ ಶಾಂತೇಗೌಡ, ಎನ್‌ಎಸ್‌ಯುಐ ಅಧ್ಯಕ್ಷ ಮಂಜುನಾಥ್‌, ಜಿಲ್ಲಾ ಘಟಕದ ಅಧ್ಯಕ್ಷ ಜಾವಗಲ್ ಮಂಜುನಾಥ್‌, ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಎಷ್ಟೇ ಮನವಿ ಮಾಡಿದರೂ ಲೆಕ್ಕಿಸದೇ, ಅವಾಚ್ಯ ಶಬ್ಧಗಳಿಂದ ಕೂಗಾಡಿದರು. ಇದರ ನಡುವೆ ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಮು ಸಭೆಯಿಂದಲೇ ನಿರ್ಗಮಿಸಿದರು.

ಜಿಲ್ಲಾ ಅಧ್ಯಕ್ಷರಿಂದ ಮೈಕ್ ಕಸಿದುಕೊಂಡ ಸಲೀಂ ಅಹಮದ್‌, ‘ ಕಾಂಗ್ರೆಸ್‌ನಲ್ಲಿ ಜಾತಿ ಇಲ್ಲ, ಕಾಂಗ್ರೆಸ್‌ ಪಕ್ಷವೇ ಒಂದು ಜಾತಿ. ಎಲ್ಲ ಧರ್ಮದವರಿಗೆ ಅವಕಾಶ ಸಿಗುತ್ತದೆ ಎಂಬುದಕ್ಕೇ ನಾನೇ ಸಾಕ್ಷಿ. ಎಷ್ಟು ಮಾಡಿದರೂ ನಿಮ್ಮ ಜಿಲ್ಲೆಯ ಹಣೆಬರಹವೇ ಇಷ್ಟು. ಗಲಾಟೆ ಮಾಡಿದವರ ಪಟ್ಟಿ ಕೊಡಿ, ನಾಳೆಯೇ ಅವರನ್ನು ಅಮಾನತು ಮಾಡುತ್ತೇನೆ’ ಎಂದು ಜಿಲ್ಲಾ ಘಟಕದ ಅಧ್ಯಕ್ಷರಿಗೆ ಸೂಚಿಸಿದರು.

ನಂತರ ಸಭೆ ಆರಂಭಗೊಂಡಿತು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು